ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸ್ವಚ್ಛಗೊಂಡಿದೆ 6 ಕಿ.ಮೀ. ಉದ್ದದ ರಾಜಕಾಲುವೆ

‘ಕೆ–100 ಜಲಮಾರ್ಗ’ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನೆ
Last Updated 26 ಅಕ್ಟೋಬರ್ 2021, 16:37 IST
ಅಕ್ಷರ ಗಾತ್ರ

ಬೆಂಗಳೂರು:ಕೋರಮಂಗಲ ಕಣಿವೆಯ ರಾಜಕಾಲುವೆಯನ್ನು ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ಅಭಿವೃದ್ಧಿಗೊಳಿಸುವ ‘ಕೆ–100 ಜಲಮಾರ್ಗ’ ಯೋಜನೆಯಡಿ 6 ಕಿ.ಮೀ ಉದ್ದದ ರಾಜಕಾಲುವೆಯನ್ನು ಸ್ವಚ್ಛಗೊಳಿಸಲಾಗಿದೆ.

ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿ ₹ 175 ಕೋಟಿ ವೆಚ್ಚದಲ್ಲಿ ಒಟ್ಟು 9.2 ಕಿ.ಮೀ ಉದ್ದದ ರಾಜಕಾಲುವೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದರಲ್ಲಿ 6. ಕಿ.ಮೀ ಉದ್ದದ ರಾಜಕಾಲುವೆ ಹೂಳೆತ್ತಲಾಗಿದೆ. ಕಾಲುವೆಯ ತಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಭೂಮಿಗೆ ಇಂಗುವಂತೆ ವಿನ್ಯಾಸಗೊಳಿಸಿ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಉಳಿದ 3.2 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ.

ರಾಜಕಾಲುವೆ ಪಕ್ಕದಲ್ಲಿರುವ ಮನೆಯವರು ತ್ಯಾಜ್ಯ ನೀರನ್ನು ರಾಜಕಾಲುವೆಗೆ ಹರಿದು ಬಿಡುತ್ತಿದ್ದರು. ಇದನ್ನು ತಡೆಯಲಾಗಿದ್ದು, ಹೊಸದಾಗಿ ಒಳಚರಂಡಿ ಕೊಳವೆ ನಿರ್ಮಿಸಿ ಅದಕ್ಕೆ ಕೊಳಚೆ ನೀರು ಹರಿಯ ಬಿಡಲು ಕ್ರಮಕೈಗೊಳ್ಳಲಾಗಿದೆ.ಕುಂಬಾರಗುಂಡಿ ಬಳಿ ರಾಜಕಾಲುವೆಗೆ ಹರಿಬಿಡುವ ನೀರನ್ನು ಶುದ್ಧೀಕರಿಸುವ ಘಟಕದ (ಎಸ್‌ಟಿಪಿ) ಕಾಮಗಾರಿ ಪ್ರಗತಿಯಲ್ಲಿದೆ. ಈ ಘಟಕವು ನಿತ್ಯ 50 ಲಕ್ಷ ಲೀಟರ್‌ ನೀರು ಶುದ್ಧೀಕರಿಸುವ ಸಾಮರ್ಥ್ಯದ್ದಾಗಿದೆ.

ಜೆ.ಸಿ.ರಸ್ತೆಯಿಂದ ಶಾಂತಿನಗರ ಬಸ್ ನಿಲ್ದಾಣದವರೆಗಿನ 1.5 ಕಿ.ಮೀ ಉದ್ದದ ರಾಜಕಾಲುವೆ ಮಾರ್ಗದಲ್ಲಿ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ಈ ಯೋಜನೆಗೆಂದೇ ನಿರ್ದಿಷ್ಟ ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ರಾಜಕಾಲುವೆಗಳ ಇಕ್ಕೆಲಗಳಲ್ಲಿ ಗಿಡಗಳನ್ನು ಬೆಳೆಸುವುದು, ರಾತ್ರಿ ಸಮಯದಲ್ಲಿ ಉದ್ಯಾನದ ಮಾದರಿಯಲ್ಲಿ ಅಲಂಕಾರಿಕ ವಿದ್ಯುದ್ದೀಪಗಳಿಂದ ಬೆಳಗಿಸುವುದು, ಪಾದಚಾರಿ ಮಾರ್ಗ ನಿರ್ಮಾಣ, ಗ್ರಾನೈಟ್ ಅಳವಡಿಕೆ, ಗ್ರಿಲ್ ಅಳವಡಿಕೆ ಕಾಮಗಾರಿಗಳೂ ಪ್ರಗತಿಯಲ್ಲಿವೆ.

ರಾಜಕಾಲುವೆಯ ಎರಡೂ ಬದಿ ಸಂಚರಿಸಲು ಮೂರು ಕಡೆಗಳಲ್ಲಿ ನಿರ್ಮಿಸುತ್ತಿರುವ ಸೇತುವೆಗಳಲ್ಲಿ ಎರಡರ ಕಾಮಗಾರಿ ಪೂರ್ಣಗೊಂಡಿದೆ. ಒಂದು ಸೇತುವೆಯ ಕೆಲಸ ಪ್ರಗತಿಯಲ್ಲಿದೆ. ವಿದ್ಯುತ್ ಅಳವಡಿಕೆಗಾಗಿ ಅತ್ಯಾಧುನಿಕ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ರಾಜಕಾಲುವೆಯ ಎರಡೂ ಬದಿಯ ಸರ್ವಿಸ್ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ರಾಜಕಾಲುವೆಗೆ ಮಳೆ ನೀರನ್ನು ಹರಿಸುವ ಪ್ರತ್ಯೇಕ ಕೊಳವೆಗಳನ್ನು ಹಾಗೂ ವಿದ್ಯುತ್‌ ಕೇಬಲ್‌ ಅಳವಡಿಕೆಗೆ ಚೇಂಬರ್‌ಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ.

ಕೆ–100 ಯೋಜನೆಯ ಕಾಮಗಾರಿಯ ಪ್ರಗತಿಯನ್ನು ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಂಗಳವಾರ ಪರಿಶೀಲನೆ ನಡೆಸಿದರು. ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್‌.ಪ್ರಹ್ಲಾದ್, ಕಾರ್ಯಪಾಲಕ ಎಂಜಿನಿಯರ್ ಶರೀಫ್ ಕಾಮಗಾರಿಯ ಪ್ರಗತಿಯ ಕುರಿತು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT