ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಬ್ಬರ ಸಾವು ಪ್ರಕರಣ: ತನಿಖೆ ಚುರುಕು

Published 13 ಮೇ 2023, 19:59 IST
Last Updated 13 ಮೇ 2023, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾನುಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ನಾಗರಾಜ್ (38) ಹಾಗೂ ರಾಮಯ್ಯ (48) ಅವರಿಬ್ಬರ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಪಘಾತ ಸ್ಥಳಕ್ಕೆ ಭೇಟಿ ನೀಡಿ, ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. 

‘ಚಲ್ಲಹಳ್ಳಿ ನಿವಾಸಿಗಳಾದ ನಾಗರಾಜ್ ಹಾಗೂ ರಾಮಯ್ಯ, ಗುರುವಾರ (ಮೇ 11) ಬೆಳಿಗ್ಗೆ 5.30ರ ಸುಮಾರಿಗೆ ಕೆಲಸಕ್ಕೆ ಹೊರಟಿದ್ದರು. ಅವರ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಅವರಿಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಆದರೆ, ಇವರಿಬ್ಬರದ್ದು ಕೊಲೆ ಎಂಬುದಾಗಿ ಸಂಬಂಧಿಕರು ದೂರು ನೀಡಿದ್ದಾರೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸರು ತಿಳಿಸಿದರು.

‘ಕೊಲೆ ಆರೋಪ ಹಾಗೂ ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಭರತ್, ನಿಶಾಂತ್ ಹಾಗೂ ವಿನಯ್ ಎಂಬುವವರನ್ನು ಈಗಾಗಲೇ ಬಂಧಿಸಲಾಗಿದೆ. ಮೂವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

‘ಪರಿಶಿಷ್ಟ ವರ್ಗದ ನಾಗರಾಜ್ ಅವರು ಕೆಲದಿನಗಳ ಹಿಂದೆಯಷ್ಟೇ ಹೋಟೆಲ್‌ನಲ್ಲಿ ನೀರು ಕುಡಿಯುತ್ತಿದ್ದರು. ಅದನ್ನು ನೋಡಿದ್ದ ಆರೋಪಿ ಭರತ್, ನಾಗರಾಜ್ ಅವರ ಜಾತಿ ನಿಂದಿಸಿ ಬೈದಿದ್ದ. ಜೀವ ಬೆದರಿಕೆ ಸಹ ಹಾಕಿದ್ದ. ಅದೇ ವೈಷಮ್ಯದಿಂದಾಗಿ ಭರತ್ ಹಾಗೂ ಇತರರು ಸೇರಿಕೊಂಡು ಸಂಚು ರೂಪಿಸಿ ನಾಗರಾಜ್–ರಾಮಯ್ಯ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇರುವುದಾಗಿ ಸಂಬಂಧಿಕರು ಆರೋಪಿಸುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ನಾಗರಾಜ್–ರಾಮಯ್ಯ ಅವರದ್ದು ಕೊಲೆ ಎಂಬುದಾಗಿ ಸಂಬಂಧಿಕರು ಹಾಗೂ ಗ್ರಾಮಸ್ಥರು ರಾಜಾನುಕುಂಟೆ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

ಅಪಘಾತ ಸ್ಥಳದಲ್ಲಿ ಮಾದರಿ ಸಂಗ್ರಹ: ಅಪಘಾತ ನಡೆದಿದ್ದ ಸ್ಥಳಕ್ಕೆ ದೊಡ್ಡಬಳ್ಳಾಪುರ ಡಿವೈಎಸ್ಪಿ ನೇತೃತ್ವದ ತಂಡ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದೆ. ಸ್ಥಳದಲ್ಲಿ ಕೆಲ ಮಾದರಿಗಳನ್ನು ಸಂಗ್ರಹಿಸಿರುವ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು, ಸದ್ಯದಲ್ಲೇ ವರದಿ ನೀಡುವ ಸಾಧ್ಯತೆ ಇದೆ. ಬಳಿಕವೇ ಇದು ಅಪಘಾತವೋ ಅಥವಾ ಬೇರೆ ಕಾರಣ ಏನಾದರೂ ಇದೆಯಾ ಎಂಬುದು ತಿಳಿಯಲಿದೆ ಎಂಬುದಾಗಿ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT