ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡನ ವಿರುದ್ಧ ಹೆಂಡತಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣ ವಜಾ ಮಾಡಿದ ಹೈಕೋರ್ಟ್‌

Last Updated 17 ಡಿಸೆಂಬರ್ 2021, 21:35 IST
ಅಕ್ಷರ ಗಾತ್ರ

ಬೆಂಗಳೂರು: ಗಂಡನ ವಿರುದ್ಧ ಪತ್ನಿ ದಾಖಲಿಸಿದ್ದ ಅತ್ಯಾಚಾರದ ದೂರನ್ನು ರದ್ದುಪಡಿಸಿರುವ ಹೈಕೋರ್ಟ್‌, ‘ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ (ಪರಿಗಣನೆಗೆತೆಗೆದುಕೊಂಡ ಸಂಜ್ಞೇಯ ಅಪರಾಧ) ಮ್ಯಾಜಿಸ್ಟ್ರೇಟ್ ಕೋರ್ಟ್ ಕ್ರಮ ಸಮರ್ಥನೀಯವಲ್ಲ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನನ್ನ ಪತ್ನಿ, ನನ್ನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡಿರುವ ಗಿರಿನಗರ ಠಾಣೆಯ ಪೊಲೀಸರು ನಗರದ 1ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದೊಂದು ಸಾಕ್ಷ್ಯಾಧಾರಗಳಿಲ್ಲದ ದೂರು. ಆದ್ದರಿಂದ ಈ ದೂರನ್ನು ರದ್ದುಗೊಳಿಸಬೇಕು’ ಎಂದು ಕೋರಿಗಿರಿನಗರದ ನಿವಾಸಿ ಮಂಜುನಾಥ್ ಹೆಬ್ಬಾರ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ಪ್ರಕರಣದಲ್ಲಿನ ಆರೋಪಗಳನ್ನು ಗಮನಿಸಿದರೆ ತನಿಖಾಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರ ನೀಡಿಲ್ಲದಿರುವುದು ಕಂಡು ಬರುತ್ತದೆ. ಆದ್ದರಿಂದ, ಪ್ರಕರಣದ ವಿಚಾರಣೆ ಮುಂದುವರಿಸಿದರೆ ಪತಿಗೆ ಕಿರುಕುಳ ನೀಡಿದಂತಾಗುತ್ತದೆ ಮತ್ತು ಕಾನೂನು ಪ್ರಕ್ರಿಯೆಯ ದುರ್ಬಳಕೆಯೂ ಆಗುತ್ತದೆ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಅರ್ಜಿದಾರರ ವಿರುದ್ಧ ದಾಖಲಾಗಿರುವ ದೂರನ್ನು ರದ್ದುಪಡಿಸಿದೆ.

ಬೇರೆಯವರಿಗೆ ಅನ್ವಯಿಸುವುದಿಲ್ಲ: ಇದೇ ವೇಳೆ ನ್ಯಾಯಪೀಠವು ತನ್ನ ತೀರ್ಪಿನಲ್ಲಿ, ‘ದೂರುದಾರಳು ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸೇರಿದಂತೆ ಇತರರ ವಿರುದ್ಧವೂ ದೂರು ದಾಖಲಿದ್ದಾರೆ. ಆದ್ದರಿಂದ, ಈ ಅರ್ಜಿಯು ಕೇವಲ ಮಂಜುನಾಥ್ ಹೆಬ್ಬಾರ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.

‘ಒಂದು ವೇಳೆ ಇತರೆ ಆರೋಪಿಗಳ ವಿಚಾರಣೆ ಬಾಕಿಯಿದ್ದರೆ, ಅದನ್ನು ಈ ಆದೇಶದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳ ಪ್ರಭಾವಕ್ಕೆ ಒಳಗಾಗದೇ ಮುಂದುವರಿಸಬೇಕು’ ಎಂದು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.

ಪ್ರಕರಣವೇನು?:ಮಂಜುನಾಥ್ ಹೆಬ್ಬಾರ್ ಅವರನ್ನು ದೂರುದಾರ ಪತ್ನಿ 2009ರ ಮೇ 27ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿವಾಹವಾಗಿದ್ದರು. 2012ರ ಮಾರ್ಚ್‌ 18ರ ನಂತರ ತವರು ಮನೆಗೆ ತೆರಳಿದ್ದರು. ನಂತರ ಪತಿಯಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಏತನ್ಮಧ್ಯೆ 2015ರ ಆಗಸ್ಟ್ 29ರಂದು ಪತಿಯ ವಿರುದ್ಧ ಅತ್ಯಾಚಾರದ ಆರೋಪದಡಿ ಗಿರಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.‌

ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಮಂಜುನಾಥ್ ಹೆಬ್ಬಾರ್ ವಿರುದ್ಧ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಹಲ್ಲೆ ಮತ್ತು ಹಣಕ್ಕೆ ಆಮಿಷವೊಡ್ಡಿದ ಆರೋಪಗಳಿಗೆ ಸಂಬಂಧಿಸಿದಂತೆ 2018ರ ಸೆಪ್ಟೆಂಬರ್ 7 ರಂದು 1ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ 2019ರ ಸೆಪ್ಟೆಂಬರ್ 27ರಂದು ಪ್ರಕರಣವನ್ನು ಪರಿಗಣಿಸಿ ವಿಚಾರಣೆಗೆ ಅಂಗೀಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT