ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರದುರ್ಗದ ಮುರುಘಾ ಶರಣರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಕರ್ನಾಟಕ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.
ಇದೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ, ಡಿಸೆಂಬರ್‌ನಲ್ಲಿ ಚಿತ್ರದುರ್ಗದಲ್ಲಿ ಕಾಲ್ನಡಿಗೆ ಜಾಥಾ ನಡೆಸಲಾಗಿತ್ತು. ಅಲ್ಲಿನ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿತ್ತು. ಅದಾದ ಮೇಲೆ ಫೆಬ್ರುವರಿಯಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಪ್ರತ್ಯೇಕ ತನಿಖಾ ಸಂಸ್ಥೆಗೆ ಪ್ರಕರಣ ವಹಿಸಲು ಆಗ್ರಹಿಸಲಾಗಿತ್ತು. ಸಿಐಡಿ ಬದಲಿಗೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮುನಿಯಪ್ಪ ಒತ್ತಾಯಿಸಿದ್ದಾರೆ.
‘ಶರಣರಿಗೆ ಜಾತಿಬಲ, ಹಣದಬಲ, ರಾಜಕೀಯ ಬೆಂಬಲ ಇದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಅಪಾಯವಿದೆ. ಶರಣರು ಜೈಲಿನಲ್ಲಿದ್ದರೂ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರಬೇಕಾದರೆ ಶಿವಮೂರ್ತಿ ಶರಣರನ್ನು ಬಳ್ಳಾರಿ ಅಥವಾ ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಒಡನಾಡಿ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ದುರುದ್ದೇಶದಿಂದ ಹಾಕಿರುವ ಎಲ್ಲ ಸುಳ್ಳು ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಸಂತ್ರಸ್ತ ವಿದ್ಯಾರ್ಥಿನಿಯರ ಕುಟುಂಬ ಹಾಗೂ ಒಡನಾಡಿ ಮುಖ್ಯಸ್ಥರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ತನಕವೂ ಹೋರಾಟ ನಡೆಸಲಾಗುವುದು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.