ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಗೆ ಬಾಡಿಗೆಯಿಲ್ಲವೆಂದು ರ್‍ಯಾಪಿಡೊ ಸವಾರನ ಹೆಲ್ಮೆಟ್‌ ಒಡೆದು ಹಾಕಿದ ಆಟೊ ಚಾಲಕ

Last Updated 9 ಮಾರ್ಚ್ 2023, 4:10 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರದ ಮೆಟ್ರೊ ನಿಲ್ದಾಣದ ಬಳಿ ರ್‍ಯಾಪಿಡೊ ಸವಾರ (ರ್‍ಯಾಪಿಡೊ ಕ್ಯಾಪ್ಟನ್‌)ನನ್ನು ಆಟೋ ಚಾಲಕನೊಬ್ಬ ತಡೆದು, ಹೆಲ್ಮೆಟ್‌ ಪುಡಿಗಟ್ಟಿ ನಿಂದಿಸಿದ ಘಟನೆ ನಡೆದಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೊ ಆಧರಿಸಿ, ಪೊಲೀಸ್‌ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕಾರಣ ಏನು?: ರ್‍ಯಾಪಿಡೊ ಸವಾರ ಮೆಟ್ರೊ ನಿಲ್ದಾಣದ ಬಳಿಯಲ್ಲಿ ತನ್ನ ಸ್ಕೂಟರ್‌ಗೆ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡಿದ್ದಕ್ಕೆ ಕೆರಳಿದ ಚಾಲಕ ಈ ರೀತಿ ವರ್ತನೆ ತೋರಿದ್ದಾನೆ ಎನ್ನಲಾಗಿದೆ.

‘ನಿಲ್ದಾಣದ ಬಳಿ ಆಟೊ ಚಾಲಕ ಬಾಡಿಗೆಗೆ ಕಾಯುತ್ತಿರುವಾಗ ಸ್ಥಳಕ್ಕೆ ಬಂದ ರ್‍ಯಾಪಿಡೊ ಸವಾರ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದಾನೆ. ಇದನ್ನು ಗಮನಿಸಿದ ಚಾಲಕ ನಮಗೇ ಬಾಡಿಗೆಯಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾನೆ.

‘ಆಟೊ ಚಾಲಕರು ಮೀಟರ್ ಹಾಕಿ ಸೇವೆ ನೀಡುತ್ತಿಲ್ಲ. ಗ್ರಾಹಕರು ಕರೆದ ಸ್ಥಳಕ್ಕೆ ಬರಲು ಒಪ್ಪದೇ ದುಪ್ಪಟ್ಟು ಹಣ ಕೇಳುತ್ತಾರೆ. ಅದರ ಬದಲು ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುವ ಆ್ಯಪ್‌ ಆಧಾರಿತ ಬೈಕ್, ಟ್ಯಾಕ್ಸಿ ಬಳಸಿದರೆ ತಪ್ಪೇನು’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

‘ಆಟೊ ಚಾಲಕರು ನಿಯಮವನ್ನೂ ಪಾಲನೆ ಮಾಡುವುದಿಲ್ಲ. ಇಂತಹ ಆಟೊ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮತ್ತೊಬ್ಬರು ಟ್ವೀಟ್‌ನಲ್ಲಿ ಕೋರಿದ್ದಾರೆ.

‘ಘಟನೆಯು ಮಾರ್ಚ್‌ 1ರಂದು ನಡೆದಿದೆ. ನಮಗೆ ಮಂಗಳವಾರ ಘಟನೆಯ ವಿಡಿಯೊ ಲಭಿಸಿದೆ. ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆಟೊ ಚಾಲಕ ಇಂದಿರಾನಗರದ ನಿಲ್ದಾಣದವನು ಅಲ್ಲ. ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಏನಿದು ರ್‍ಯಾಪಿಡೊ ಬೈಕ್‌ ಸೇವೆ?: ‘ಇದು ಮೊಬೈಲ್‌ ಆ್ಯಪ್‌ ಆಧಾರಿತ ಸೇವೆ. ಪ್ರಯಾಣಿಕರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ತಾವಿರುವ ಸ್ಥಳ, ತಲುಪಬೇಕಾದ ಸ್ಥಳ ನಮೂದಿಸಿದರೆ ಕೆಲವೇ ನಿಮಿಷಗಳಲ್ಲಿ ಬೈಕ್‌ ಬರುತ್ತದೆ. ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ತಲುಪಿಸಲಾಗುವುದು. ಬೇರೆ ಸೇವೆಗಿಂತ ಕಡಿಮೆ ಮೊತ್ತ ಪಡೆಯುತ್ತೇವೆ. ಇದು ಆಟೊ ಚಾಲಕರನ್ನು ಕೆರಳಿಸಿದೆ’ ಎಂದು ರ್‍ಯಾಪಿಡೊ ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT