ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನರಂಜನಾ ಕ್ಲಬ್‌ಗಳು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು: ಹೈಕೋರ್ಟ್‌

ಸಕ್ಷಮ ಪ್ರಾಧಿಕಾರಗಳ ಮೂಲಕ ಪರವಾನಗಿ ಪಡೆಯಲು ಹೈಕೋರ್ಟ್‌ ಸೂಚನೆ
Published 27 ಮಾರ್ಚ್ 2024, 16:06 IST
Last Updated 27 ಮಾರ್ಚ್ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಡಿಗ ರಿಕ್ರಿಯೇಶನ್‌ (ಮನರಂಜನಾ) ಕ್ಲಬ್‌ ಮಾಲೀಕರು ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತನ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಕ್ಲಬ್‌ ನಡೆಸುತ್ತಿದ್ದಾರೆ, ಮಾತ್ರವಲ್ಲ; ಶಸ್ತ್ರಾಸ್ತ್ರ ಕಾಯ್ದೆಯನ್ನೂ ಉಲ್ಲಂಘಿಸಿದ್ದು ಕಳೆದ 10 ವರ್ಷಗಳಿಗೂ ಹೆಚ್ಚು ಕಾಲದಿಂದ ರೌಡಿ ಶೀಟರ್‌ನಲ್ಲಿದ್ದು ಅನೇಕ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರುಹಿದೆ.

‘ನನ್ನ ವಿರುದ್ಧ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಕ್ಲಬ್‌ ಮಾಲೀಕ ಅಶೋಕ ಕುಮಾರ್ ಅಡಿಗ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಕ್ಲಬ್‌ ಮಾಲೀಕರು ಕಾರ್ಮಿಕ ಇಲಾಖೆಯ ಪರವಾನಗಿಯನ್ನು ಮಾತ್ರವೇ ಪಡೆದು ಕ್ಲಬ್‌ ನಡೆಸುತ್ತಿದ್ದಾರೆ. ಯಾವುದೇ ಶಾಸನಾತ್ಮಕ ಪರವಾನಗಿ ಪಡೆದಿಲ್ಲ. ಪೊಲೀಸರು ಸ್ಥಳಕ್ಕೆ ತೆರಳಿದಾಗ ಕ್ಲಬ್‌ನ ಎರಡು ಮತ್ತು ಮೂರನೇ ಅಂತಸ್ತಿನಲ್ಲಿ ಸುಮಾರು 300 ನೌಕರರು ಇರುವುದು ಕಂಡು ಬಂದಿದೆ. ಇಲ್ಲೆಲ್ಲಾ ಅನೇಕ ಕಾನೂನು ಬಾಹಿರವಾದ ಜೂಜಾಟಗಳನ್ನು ಆಡಲು ಆಸ್ಪದ ಕಲ್ಪಿಸಲಾಗಿದೆ’ ಎಂದು ಆರೋಪಿಸಿದರು. 

ಇದನ್ನು ಅಲ್ಲಗಳೆದ ಅರ್ಜಿದಾರರ ಪರ ವಕೀಲ ಎಂ.ವಿನೋದ್ ಕುಮಾರ್, ‘ಅರ್ಜಿದಾರರ ವಿರುದ್ಧ ಇತ್ತೀಚೆಗೆ ರೌಡಿ ಶೀಟ್‌ ತೆರೆಯಲಾಗಿದೆ. ಪೊಲೀಸರು ಎರಡು ಮೂರು ದಿನಗಳಿಗೊಮ್ಮೆ ಮನೆಗೆ ತೆರಳಿ ಕಿರುಕುಳ ನೀಡುತ್ತಿದ್ದಾರೆ. ಅಷ್ಟಕ್ಕೂ ಪೊಲೀಸರು ಕೇಳುತ್ತಿರುವ ಪರವಾನಗಿಗೆ ಅರ್ಜಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ರಮ್ಮಿ ಆಡಿಸಲು ಆರ್‌ಟಿಐ ಕಾರ್ಯಕರ್ತನ ಅಡಿಯಲ್ಲಿ ರಕ್ಷಣೆ ಪಡೆದುಕೊಂಡಿದ್ದೀರಿ. 2011ರಿಂದಲೂ ಹತ್ತಾರು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದೀರಿ. 5–6 ವರ್ಷಗಳ ಹಿಂದೆಯೇ ಅರ್ಜಿದಾರರ ಹೆಸರನ್ನು ರೌಡಿ ಶೀಟ್‌ನಲ್ಲಿ ಹೆಸರನ್ನು ಸೇರಿಸಲಾಗಿದ್ದರೂ ಇತ್ತೀಚೆಗಷ್ಟೇ ಸೇರಿಸಲಾಗಿದೆ ಎನ್ನುತ್ತಿದ್ದೀರಲ್ಲಾ?.
ಎಂ.ನಾಗಪ್ರಸನ್ನ, ನ್ಯಾಯಮೂರ್ತಿ

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧ ದಶಕದ ಹಿಂದಿನಿಂದಲೂ ರೌಡಿ ಶೀಟರ್‌ ತೆರೆಯಲಾಗಿದೆ ಎಂದು ಅಡ್ವೊಕೇಟ್‌ ಜನರಲ್ ಹೇಳುತ್ತಿದ್ದಾರೆ.  ಕ್ಲಬ್‌ ನಡೆಸಲು ಈಗಾಗಲೇ ಇರುವ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ, ಟ್ರಸ್ಟ್ ಕಾಯ್ದೆ ಅಡಿಯಲ್ಲಿ ಬ್ಯಾಂಕ್‌ನಿಂದ ಸಾಲ ಕೂಡಾ ಪಡೆಯಲಾಗಿದೆ ಎಂದೆಲ್ಲಾ ಆಕ್ಷೇಪಿಸಿದ್ದಾರೆ. ಹೀಗಿರುವಾಗ ಕ್ಲಬ್‌ ನಡೆಸಲು ಹೇಗೆ ಅವಕಾಶ ನೀಡಬೇಕು’ ಎಂದು ಪ್ರಶ್ನಿಸಿತು. ಅಂತೆಯೇ, ’ಸೂಕ್ತ ಪರವಾನಗಿ ಪಡೆಯಲು ಸಕ್ಷಮ ಪ್ರಾಧಿಕಾರಗಳಲ್ಲಿ ಎರಡು ವಾರಗಳ ಒಳಗಾಗಿ ಅರ್ಜಿ ಸಲ್ಲಿಸಿ’ ಎಂದು ಅರ್ಜಿದಾರರಿಗೆ ಆದೇಶಿಸಿತು. ಅಂತೆಯೇ, ‘ಕ್ಲಬ್‌ಗಳು ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಈ ಪ್ರಕರಣದ ಅರ್ಜಿದಾರರಿಗೆ ಕಿರುಕುಳ ನೀಡಬಾರದು’ ಎಂದು ಅಡ್ವೊಕೇಟ್‌ ಜನರಲ್‌ ಅವರಿಗೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿತು. 

ಲೇಬರ್‌ ಲಾ–ಗೂ ರಮ್ಮಿಗೂ ಏನು ಸಂಬಂಧ?

‘ಕ್ಲಬ್‌ನಲ್ಲಿ ರಮ್ಮಿ ಆಡಿಸಲಾಗುತ್ತಿದೆ. ಅದು ಕಾನೂನು ಬಾಹಿರವಲ್ಲ’ ಎಂಬ ಅರ್ಜಿದಾರರ ಪರ ವಕೀಲರ ಮಾತಿಗೆ ಕುಟುಕಿದ ನ್ಯಾಯಮೂರ್ತಿಗಳು ‘ಅಲ್ಲಾರೀ ನೀವು ಕ್ಲಬ್‌ ಪರವಾನಗಿ ಎಲ್ಲಿದೆ ಎಂದು ಕೇಳಿದರೆ ಲೇಬರ್ ಲಾ (ಕಾರ್ಮಿಕ ಕಾನೂನು) ಅಡಿಯಲ್ಲಿ ಪರವಾನಗಿ ಪಡೆದಿದ್ದೇವೆ ಎಂದು ಹೇಳುತ್ತಿದ್ದೀರಿ. ಲೇಬರ್ ಲಾ–ಗೂ ರಮ್ಮಿಗೂ ಏನ್ರೀ ಸಂಬಂಧ’ ಎಂದು ಪ್ರಶ್ನಿಸಿತು.

ಕ್ಲಬ್‌ ಮಾಲೀಕರೂ ಆದ ಅರ್ಜಿದಾರರ ವಿರುದ್ಧ ಬಸವೇಶ್ವರ ನಗರ ಠಾಣೆ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 79 ಮತ್ತು 80 ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ)–2015ರ ಕಲಂ 78 ಭಾರತೀಯ ದಂಡ ಸಂಹಿತೆ–1860ರ ಕಲಂ 506 278 ಮತ್ತು 283 ಹಾಗೂ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ–2003ರ ಕಲಂ 24 6 (ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು. 

ಎಂ.ನಾಗಪ್ರಸನ್ನ
ನ್ಯಾಯಮೂರ್ತಿ
ಎಂ.ನಾಗಪ್ರಸನ್ನ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT