ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ ಹೋರಾಟ: ಮತ್ತೆ 10 ಜನರ ವಿರುದ್ಧ ಎಫ್‌ಐಆರ್

ಮುಖ್ಯಮಂತ್ರಿಯೇ ಎ–1 ಆರೋಪಿ; ಹೋರಾಟಗಾರ ಅಂಬಣ್ಣ ಅರೋಲಿಕರ್ ಆಕ್ರೋಶ
Last Updated 20 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ಬೆಂಗಳೂರು:ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಒಳ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ 10 ಮಂದಿ ಹೋರಾಟಗಾರರ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲೂ ಎಫ್‌ಐಆರ್ ದಾಖಲಾಗಿದೆ.

ಹೋರಾಟಗಾರರಾದ ಶಿವರಾಯ ಅಕ್ಕರಕ್ಕಿ, ಅಂಬಣ್ಣ ಅರೋಲಿಕರ್, ಪಾವಗಡ ಶ್ರೀರಾಮ್, ಶಂಕರ್ ಪೂಜಾರಿ, ಭಾಸ್ಕರ ಪ್ರಸಾದ್, ಎನ್.ಮೂರ್ತಿ, ಬಿ.ಗೋಪಾಲ್, ಭಾಗ್ಯಮ್ಮ, ಲಿಂಗರಾಜ್ ತಾರಾಫೈಲ್, ಹೆಣ್ಣೂರು ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹತ್ತು ಮಂದಿ ಮುಖಂಡರು 2 ಸಾವಿರದಿಂದ 3 ಸಾವಿರ ಜನರನ್ನು ಅಕ್ರಮವಾಗಿ ಕೂಟ ಕಟ್ಟಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಏಕಾಏಕಿ ರಸ್ತೆಗೆ ಬಂದು ಕೂಗಾಟ ನಡೆಸಿ ಸಂಚಾರ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಲಾಗಿದೆ. ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿದ್ದು, ಇದನ್ನು ಲೆಕ್ಕಿಸದೆ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ತನಕ ಮೆರವಣಿಗೆ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದೂರಲಾಗಿದೆ. ಇದಕ್ಕೂ ಮುನ್ನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲೂ ಎಫ್‌ಐಆರ್ ದಾಖಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಹೋರಾಟಗಾರ ಅಂಬಣ್ಣ ಅರೋಲಿಕರ್, ‘ಹತ್ತು ಜನರ ಮೇಲಷ್ಟೇ ಅಲ್ಲ, 10 ಲಕ್ಷ ಜನರ ಮೇಲೆ ಪ್ರಕರಣ ದಾಖಲಿಸಿದರೂ ಹೆದರುವುದಿಲ್ಲ. ಈ ಪ್ರತಿಭಟನೆಗೆ ಪ್ರಚೋದನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎ1 ಆರೋಪಿ, ಗೃಹ ಸಚಿವರನ್ನು ಎ2, ಸಮಾಜ ಕಲ್ಯಾಣ ಸಚಿವರನ್ನು ಎ3 ಆರೋಪಿಗಳನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಸ್ವಯಂ ಪ್ರೇರಿತವಾಗಿ ನಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್‌ಪೇಟೆ ಪೊಲೀಸರು ಪ್ರಚೋದನೆ ನೀಡಿರುವ ಮುಖ್ಯಮಂತ್ರಿ ವಿರುದ್ಧವೂ ಸ್ವಯಂ ಪ್ರೇರಣೆಯಿಂದ ಎಫ್‌ಐಆರ್‌ ದಾಖಲಿಸಬೇಕು. ಇಲ್ಲವಾದರೆ ನಾವೇ ಠಾಣೆಗೆ ಬಂದು ದೂರು ನೀಡುತ್ತೇವೆ. ಅದಕ್ಕೂ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುತ್ತೇವೆ’ ಎಂದು ಎಚ್ಚರಿಸಿದರು.

‘ಹೋರಾಟಗಾರರ ಮನವಿ ಆಲಿಸುವ ಬದಲು ಧ್ವನಿ ಅಡಗಿಸಲು ಪ್ರಯತ್ನಿಸಲಾಗಿದೆ. ಈ ಧ್ವನಿ ಇನ್ನೂ ನೂರು ಪಟ್ಟು ಹೆಚ್ಚಾಗಲಿದೆ. ಪ್ರಕರಣ ವಾಪಸ್ ಪಡೆಯದಿದ್ದರೆ, ರಾಜ್ಯದಾದ್ಯಂತ ಹೋರಾಟ ನಡೆಯಲಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT