ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿ ತನಿಖೆಗೆ ಸರ್ಕಾರದ ಮೇಲೆ ಒತ್ತಡ?

ಕಂದಾಯ ನಿವೇಶನಗಳ ಮಾರಾಟ ಹಗರಣ
Last Updated 5 ನವೆಂಬರ್ 2019, 7:35 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದ ವಿವಿಧೆಡೆ 350ಕ್ಕೂ ಹೆಚ್ಚು ಕಂದಾಯ ನಿವೇಶನಗಳನ್ನು ನಿಯಮ ಉಲ್ಲಂಘಿಸಿ ಸೇಲ್ ಅಗ್ರಿಮೆಂಟ್ ಮೇಲೆ ಖರೀದಿದಾರರಿಗೆ ನೋಂದಣಿ ಮಾಡಿರುವ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ವಿಭಾಗದಿಂದ ವಾಪಸ್‌ ಪಡೆದು ಸಿಐಡಿಗೆ ಒಪ್ಪಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಗೊತ್ತಾಗಿದೆ.

'ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ನಡೆದ ಈ ಕಾನೂನುಬಾಹಿರ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಲಂಚ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿರುವುದರಿಂದ ಆತಂಕಕ್ಕೊಳಗಾಗಿರುವ ಸಬ್‌ ರಿಜಿಸ್ಟ್ರಾರ್‌ಗಳು ತೆರೆಮರೆಯಲ್ಲಿ ಸಿಐಡಿ ತನಿಖೆಗೆ ಲಾಬಿ ಮಾಡುತ್ತಿದ್ದಾರೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದರೆ ಸದ್ಯಕ್ಕೆ ಬೀಸೊ ದೊಣ್ಣೆಯಿಂದ ಪಾರಾಗಬಹುದು’ ಎನ್ನುವ ಆಲೋಚನೆ ಸಬ್ ರಿಜಿಸ್ಟ್ರಾರ್‌ಗಳದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಬೆಂಗಳೂರು ಹೊರ ವಲಯದಲ್ಲಿರುವ 11 ಸಬ್‌ ರಿಜಿಸ್ಟ್ರಾರ್‌ಗಳಿಗೆ ನೋಟಿಸ್‌ ನೀಡಿದ್ದಾರೆ. ವಿಚಾರಣೆಗೆ ಬರುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದ್ದು, ಇದೇ 24ರಂದು ಜಾರಿ ಆಗಿದೆ.

ಈ ಮಧ್ಯೆ, ಸಿಸಿಬಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಮನವಿಮಾಡಿ ಸಬ್‌ ರಿಜಿಸ್ಟ್ರಾರ್‌ಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಈ ವಾರವೇ ವಿಚಾರಣೆಗೆ ಬರಲಿದೆ. ಈ ಮಧ್ಯೆ, ಸಬ್‌ ರಿಜಿಸ್ಟ್ರಾರ್‌ಗಳು ನಿರೀಕ್ಷಣಾ ಜಾಮೀನಿಗೆ ಅಧೀನ ನ್ಯಾಯಾಲಯದಲ್ಲೂ ಮನವಿ ಮಾಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಈಗಾಗಲೇ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿರುವ ಕಂಪ್ಯೂಟರ್ ಆಪರೇಟರ್‌ಗಳು, ಕಚೇರಿ ಸಹಾಯಕರು, ‘ವಂಚನೆ ಕುರಿತು ತಮಗೇನೂ ತಿಳಿದಿಲ್ಲ. ಕಚೇರಿ ಸಮಯದಲ್ಲಿ ಇದು ನಡೆದಿಲ್ಲ. ಕಚೇರಿ ವೇಳೆ ಮುಗಿದ ಬಳಿಕ ನಡೆದಿರಬಹುದು’ ಎಂದಿದ್ದಾರೆ. ಈ ಬಗ್ಗೆ ನಿವೇಶನಗಳ ಮಾರಾಟಗಾರರು ಹಾಗೂ ಖರೀದಿದಾರರನ್ನು ವಿಚಾರಣೆಗೆ ಕರೆಯಲಾಗುತ್ತಿದೆ.

ನಿವೇಶನ ನೋಂದಣಿಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ತ್ವರಿತವಾಗಿ ತಲುಪಿಸಲು ಇಲಾಖೆ ‘ಕಾವೇರಿ’ ಆನ್‌ಲೈನ್‌ ಸೇವೆಗಳನ್ನು ಅಭಿವೃದ್ಧಿಪಡಿಸಿದೆ ಆದರೆ, ಉಪ ನೋಂದಣಾಧಿಕಾರಿಗಳು ಈ ಸಂಯೋಜನಾ ಪದ್ಧತಿಯನ್ನು ಉಲ್ಲಂಘಿಸಿ, ಖರೀದಿದಾರರ ಹೆಸರಿಗೆ ನಿವೇಶನ ನೋಂದಣಿ ಮಾಡಿಕೊಟ್ಟ ಆರೋಪಕ್ಕೆ ಒಳಗಾಗಿದ್ದಾರೆ.

ಇ– ಸ್ವತ್ತುವಿನಲ್ಲಿ ಇಲ್ಲದ ನಿವೇಶನವನ್ನು ಸೇಲ್‌ ಅಗ್ರಿಮೆಂಟ್‌ ಮೇಲೆ ನೋಂದಣಿ ಮಾಡಿದ ಬಳಿಕ ‘ಕಾವೇರಿ’ ತಂತ್ರಾಂಶದಲ್ಲಿ ಅದನ್ನು ಸೇಲ್‌ ಡೀಡ್‌ ಆಗಿ ಬದಲಿಸಿರುವುದು ಗೊತ್ತಾಗಿದೆ. ಆದರೆ, ಸೂಕ್ತ ಕಾರಣ ಮತ್ತು ಜಿಲ್ಲಾ ನೋಂದಣಿ ಅಧಿಕಾರಿಗಳ ಅನುಮತಿ ಇಲ್ಲದೆ ತಂತ್ರಾಂಶದಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ.

ಕೆಂಗೇರಿ, ದಾಸನಪುರ ಸೇರಿದಂತೆ ಬೆಂಗಳೂರು ಹೊರವಲಯದಲ್ಲಿ ಇಂಥ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿರುವುದು ಪತ್ತೆಯಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ 4–5 ಪ್ರಕರಣಗಳು ಗೊತ್ತಾಗಿವೆ.

ಕಚೇರಿಗೆ ಬಾರದ ಅಧಿಕಾರಿಗಳು?

ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಉಪ ನೋಂದಣಾಧಿಕಾರಿಗಳು ಕೆಲಸಕ್ಕೆ ಗೈರಾಗಿದ್ದಾರೆ.

ಆನೇಕಲ್, ದಾಸನಪುರ, ಪೀಣ್ಯ, ಮಾದನಾಯಕನಹಳ್ಳಿ, ಜಾಲ, ಲಗ್ಗೆರೆ, ಕೆಂಗೇರಿ, ತಾವರೆಕೆರೆ, ಹೊಸಕೋಟೆ, ಬ್ಯಾಟರಾಯನಪುರ, ಬಿಡಿಎ ಸಬ್‌ ರಿಜಿಸ್ಟ್ರಾರ್‌ಗಳಲ್ಲಿ ಕೆಲವರು ಸಿಸಿಬಿ ನೋಟಿಸ್‌ ಬಂದ ಬಳಿಕ ಕಚೇರಿಗೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ.

ಅನೇಕರು ರಜೆ ಹಾಕಿ ಹೋಗಿದ್ದಾರೆ. ಇನ್ನೂ ಕೆಲವರು ಹೇಳದೆ ಕೇಳದೆ ಹೋಗಿದ್ದಾರೆ. ವಂಚನೆ ಪ್ರಕರಣ ನಡೆಸಿರುವ ಕೆಲವರು ಬೇರೆಡೆಗೆ ವರ್ಗವಾಗಿದ್ದಾರೆ. ಈ ಕುರಿತ ಪ್ರತಿಕ್ರಿಯೆಗೆ ‘ಪ್ರಜಾವಾಣಿ’ ಪ್ರತಿನಿಧಿ ಕೆಲವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT