ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಗೆದ ನಿವೃತ್ತ ಪೊಲೀಸ್‌ ಅಧಿಕಾರಿ

ವಿಶ್ವಭಾರತಿ ಬಡಾವಣೆ: ಸಾರ್ವಜನಿಕ ಸಂಚಾರಕ್ಕೆ ಅಡ್ಡಿ
Last Updated 27 ಜುಲೈ 2020, 13:19 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಆರ್‌.ನಗರ ವಾರ್ಡ್‌ನ ವಿಶ್ವಭಾರತಿ ಬಡಾವಣೆಯ ನಿವಾಸಿಗಳು ಬಳಸುತ್ತಿದ್ದ ಸಾರ್ವಜನಿಕ ರಸ್ತೆಯನ್ನು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಅಗೆದು ಹಾಕಿದ್ದಾರೆ. ಇದರಿಂದ ಸ್ಥಳೀಯರ ಓಡಾಟಕ್ಕೆ ಅನನುಕೂಲವಾಗಿದೆ ಎಂದು ಬಡಾವಣೆ ನಿವಾಸಿಗಳು ದೂರಿದ್ದಾರೆ.

‘ತಮ್ಮ ಮನೆ ಬಳಿ ನೀರು ನಿಲ್ಲುವುದನ್ನು ತಪ್ಪಿಸಲು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಇಲ್ಲಿನ ರಸ್ತೆಯನ್ನು 20 ದಿನಗಳ ಹಿಂದೆ ಅಗೆದಿದ್ದಾರೆ. ಆ ನೀರು ಈಗ ಇನ್ನೊಂದು ನಿವೇಶನವನ್ನು ಸೇರುತ್ತಿದೆ. ರಸ್ತೆ ಅಗೆವಾಗಲೇ ನಾವು ಆಕ್ಷೇಪ ವ್ಯಕ್ತಪಡಿಸಿದ್ದೆವು. ಅಗೆದ ರಸ್ತೆಗೆ ಕಾಂಕ್ರೀಟ್‌ ರಿಂಗ್‌ಗಳನ್ನು ಅಳವಡಿಸಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಇದಾಗಿ ಎರಡು ವಾರಗಳು ಕಳೆದರೂ ಅವರು ರಸ್ತೆಯನ್ನು ದುರಸ್ತಿಪಡಿಸಿಲ್ಲ. ನಮ್ಮ ವಾಹನಗಳ ಓಡಾಟಕ್ಕೆ ಇದರಿಂದ ಅಡ್ಡಿಯಾಗಿದೆ’ ಎಂದು ಬಡಾವಣೆಯ ನಿವಾಸಿ ರಘುಪಾಲ್‌ ಮುಳಿಯ ದೂರಿದರು.

‘ರಸ್ತೆ ದುರಸ್ತಿಪಡಿಸುವಂತೆ ಅವರಲ್ಲಿ ಕೋರಿದ್ದೆವು. ‘ದುರಸ್ತಿ ಪಡಿಸುವುದಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಅಗೆದ ರಸ್ತೆಗೆ ಇಟ್ಟಿಗೆ ಇಟ್ಟು ವಾಹನ ಹೋಗುವಂತೆ ಮಾಡಿದ್ದೆವು. ಆ ಇಟ್ಟಿಗೆಗಳನ್ನೂ ಕಿತ್ತು ಹಾಕಿದ್ದಾರೆ. ಈ ಬಗ್ಗೆ ಬಿಬಿಎಂಪಿಯವರಿಗೂ ದೂರು ನೀಡಿದ್ದೇವೆ’ ಎಂದರು.

‘ನಮ್ಮ ಬಡಾವಣೆಗೆ ಸಂಪರ್ಕ ಕಲ್ಪಿಸುವ ಇನ್ನೊಂದು ರಸ್ತೆಯನ್ನು (ಮಣಿಪಾಲ್‌ ಆಸ್ಪತ್ರೆ ಮಾರ್ಗ) ಒಳಚರಂಡಿ ಕಾಮಗಾರಿ ಸಲುವಾಗಿ ಜಲಮಂಡಳಿಯವರು ಅಗೆದಿದ್ದಾರೆ. ಅದಿನ್ನೂ ದುರಸ್ತಿಯಾಗಿಲ್ಲ. ಈಗ ಇನ್ನೊಂದು ರಸ್ತೆಯನ್ನೂ ಅಗೆದಿರುವುದರಿಂದ ನಮ್ಮ ಬಡಾವಣೆ ದ್ವೀಪದಂತಾಗಿದೆ’ ಎಂದು ಅಳಲು ತೋಡಿಕೊಂಡರು.

‘ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. ಮಳೆ ನೀರು ಹರಿದು ಹೋಗುತ್ತಿದ್ದ ಮೋರಿಯೊಂದನ್ನು ಖಾಸಗಿ ನಿವೇಶನದಾರರೊಬ್ಬರು ಮಣ್ಣು ತುಂಬಿ ಒತ್ತುವರಿ ಮಾಡಿದ್ದಾರೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಕೆಲವು ಅಪಾರ್ಟ್‌ಮೆಂಟ್‌ ಸಮುಚ್ಚಯದವರೂ ಒಳಚರಂಡಿ ನೀರನ್ನು ಬೇಕಾಬಿಟ್ಟಿ ಹರಿಯಬಿಡುತ್ತಿದ್ದಾರೆ. ಬಿಬಿಎಂಪಿ ಹಾಗೂ ಜಲಮಂಡಳಿಯವರು ಸ್ಥಳ ಪರಿಶೀಲನೆ ನಡೆಸಿ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT