ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಜಿಐಸಿಡಿ: ಸಹಾಯಕರಿಗೆ ವಿಶ್ರಾಂತಿಧಾಮ

200ಕ್ಕೂ ಅಧಿಕ ಮಂದಿಗೆ ವಸತಿ ವ್ಯವಸ್ಥೆ l ಮೂರು ಮಹಡಿಯ ಪ್ರತ್ಯೇಕ ಕಟ್ಟಡ ನಿರ್ಮಾಣ
Last Updated 27 ಮೇ 2022, 20:28 IST
ಅಕ್ಷರ ಗಾತ್ರ

ಬೆಂಗಳೂರು:ಕ್ಷಯರೋಗ ಮತ್ತು ಎದೆ ರೋಗಗಳ ಚಿಕಿತ್ಸೆಗೆ ಹೆಸರುವಾಸಿಯಾಗಿರುವರಾಜೀವ್‌ಗಾಂಧಿ ಎದೆರೋಗಗಳ ಸಂಸ್ಥೆಯು (ಆರ್‌ಜಿಐಸಿಡಿ), ದೂರದ ಊರುಗಳಿಂದ ಬರುವ ರೋಗಿಗಳ ಸಹಾಯಕರಿಗೆ ಪ್ರತ್ಯೇಕವಾಗಿ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ಇಲ್ಲಿ ಚಿಕಿತ್ಸೆ ಪಡೆಯಲು ವಿವಿಧ ಜಿಲ್ಲೆಗಳಲ್ಲದೇ, ಹೊರರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ಸದ್ಯ ಪ್ರತಿ ರೋಗಿ ಜತೆಗೆ ಸಹಾಯಕರೊಬ್ಬರಿಗೆ ಆಸ್ಪತ್ರೆಯಲ್ಲಿ ಉಳಿಯಲು ಅವಕಾಶವಿದೆ. ದೂರದಿಂದ ಬರುವ ರೋಗಿಗಳ ಸಂಬಂಧಿಗಳಿಗೆ ವಸತಿ ಸಮಸ್ಯೆ ಕಾಡುತ್ತಿತ್ತು. ಹೀಗಾಗಿ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಾದರಿಯಲ್ಲಿಯೇ ರೋಗಿಗಳ ಸಹಾಯಕರಿಗೆ ಪ್ರತ್ಯೇಕ ವಿಶ್ರಾಂತಿ ಧಾಮ ನಿರ್ಮಿಸಲಾಗುತ್ತಿದೆ.

‘1.3 ಎಕರೆ ಪ್ರದೇಶದಲ್ಲಿ ಬಿಬಿಎಂಪಿ ₹10 ಕೋಟಿ ವೆಚ್ಚದಲ್ಲಿ ಸಂಸ್ಥೆಗೆ ಕಟ್ಟಡ ನಿರ್ಮಿಸಿಕೊಡುತ್ತಿದೆ. 3 ಮಹಡಿಗಳ ವಿಶ್ರಾಂತಿ ಧಾಮದಲ್ಲಿ 250 ಜನ ಉಳಿದುಕೊಳ್ಳಲು ಅವಕಾಶ ಕಲ್ಪಿಸಬಹುದು. 6 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದೆ. ರೋಗಿ ಚೇತರಿಸಿಕೊಳ್ಳುವವರೆಗೂ ಸಹಾಯಕರು ಸಂಸ್ಥೆಯಲ್ಲಿಯೇ ಇರಬಹುದಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ನಾಗರಾಜ್ ತಿಳಿಸಿದರು.

ಕೋವಿಡ್‌ಯೇತರ ಚಿಕಿತ್ಸೆಗೆ ಆದ್ಯತೆ: 2020ರ ಮಾರ್ಚ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾದಾಗ ಪೂರ್ಣಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿತ್ತು. ಇದರಿಂದ ಎದೆರೋಗಗಳಿಗೆ ಚಿಕಿತ್ಸೆಗೆ ಸಮಸ್ಯೆಯಾಗಿತ್ತು. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು ಕೋವಿಡೇತರ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ.

ಕೋವಿಡ್ 2ನೇ ಅಲೆ ಬಳಿಕ ಶೀತ ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟ ಸಮಸ್ಯೆ ಇರುವವರಿಗೆ ಸಂಸ್ಥೆಯ ಹಿಂಭಾಗ 200 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ (ಮೇಕ್‌ ಶಿಫ್ಟ್) ನಿರ್ಮಿಸಲಾಗಿತ್ತು. ಇದನ್ನು ಈಗ ಕೋವಿಡೇತರ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದನ್ನು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ₹ 200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇಲ್ಲಿಯೂ ಒಬ್ಬ ಸಹಾಯಕರಿಗೆ ಇರಲು ಅವಕಾಶ ನೀಡಲಾಗುತ್ತಿದೆ.

‘ವಿಶ್ರಾಂತಿ ಧಾಮದಲ್ಲಿ ಸಹಾಯಕರಿಗೆ ಪ್ರತ್ಯೇಕ ಹಾಸಿಗೆ, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ಇರಲಿದೆ. ನೆಲ ಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಲಾಗುತ್ತದೆ’ ಎಂದು ಡಾ.ಸಿ. ನಾಗರಾಜ್ ವಿವರಿಸಿದರು.

*

ಕೋವಿಡ್ ನಿಯಂತ್ರಣ ಬಳಿಕಎದೆ ರೋಗಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ವಿಶ್ರಾಂತಿ ಧಾಮ ನಿರ್ಮಾಣದಿಂದ ಸಹಾಯಕರಿಗೆ ವಸತಿ ಸಮಸ್ಯೆ ನಿವಾರಣೆಯಾಗಲಿದೆ.
-ಡಾ.ಸಿ. ನಾಗರಾಜ್‌, ಆರ್‌ಜಿಐಸಿಡಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT