ಮಂಗಳವಾರ, ಏಪ್ರಿಲ್ 20, 2021
29 °C
ಅಕ್ಷಯ ಗಾರ್ಡನ್‌: ಪಾಲಿಕೆಗೆ, ಪೊಲೀಸರಿಗೆ ದೂರು ನೀಡಿದ ಬಳಿಕವೂ ನಿಂತಿಲ್ಲ ಕಸ ಸುರಿಯುವಿಕೆ

ಕಟ್ಟಡ ತ್ಯಾಜ್ಯ ಸುರಿದು ರಸ್ತೆ ಬಂದ್

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಬೇಗೂರು ವಾರ್ಡ್‌ನ ಯೆಳೇನಹಳ್ಳಿ ಸಮೀಪದ ಅಕ್ಷಯ ಗಾರ್ಡನ್ ಬಡಾವಣೆಯ ರಸ್ತೆಯೊಂದಕ್ಕೆ ಕಿಡಿಗೇಡಿಗಳು ಕಟ್ಟಡ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರು ರಸ್ತೆ ಸಂಪರ್ಕವನ್ನೇ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

‘15 ವರ್ಷಗಳಿಂದ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದೆವು. ವಾರದಿಂದ ಈಚೆಗೆ ರಸ್ತೆಗೆ ಅಡ್ಡಲಾಗಿ ಕಟ್ಟಡ ಅವಶೇಷಗಳನ್ನು, ಮಣ್ಣನ್ನುತಂದು ರಾಶಿಗಳನ್ನು ಹಾಕಲಾಗುತ್ತಿದೆ. ನಮ್ಮ ಮನೆಗಳನ್ನು ಸಂಪರ್ಕಿಸಲು ರಸ್ತೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬಡಾವಣೆಯ ನಿವಾಸಿಗಳು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

‘ಈ ರಸ್ತೆಯಲ್ಲೇ ಒಳಚರಂಡಿ ಸಂಪರ್ಕ, ಕುಡಿಯುವ ನೀರು ಪೂರೈಕೆಯ ಕೊಳವೆ ಮಾರ್ಗ ಹಾಗೂ ಮಳೆನೀರು ಹರಿಯುವ ಚರಂಡಿ ಇದೆ. ರಸ್ತೆ ಪಕ್ಕದಲ್ಲಿ  ವಿದ್ಯುತ್‌ ಕಂಬಗಳಿವೆ. ನಿವಾಸಿಗಳು ಪ್ರತಿದಿನ ಸಂಚರಿಸುತ್ತಿದ್ದ ರಸ್ತೆಯಲ್ಲಿ ಏಕಾಏಕಿ ಅವಶೇಷ ಕಸದ ರಾಶಿಗಳನ್ನು ತಂದು ಹಾಕುವ ಮೂಲಕ ಕೆಲ ಪ್ರಭಾವಿಗಳು ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ’ ಎಂದು ಸ್ಥಳೀಯರು ವಿವರಿಸಿದರು.

ರಸ್ತೆಯಲ್ಲಿ ಕಟ್ಟಡ ತ್ಯಾಜ್ಯ ರಾಶಿ ಹಾಕುತ್ತಿರುವುದನ್ನು ಸ್ಥಳೀಯರು ಪ್ರಶ್ನಿಸಿದರು. ಯಾರು ಈ ಕೆಲಸ ಮಾಡಿಸುತ್ತಿದ್ದಾರೆ ಎಂಬ ಮಾಹಿತಿಯನ್ನೂ ಕಾರ್ಮಿಕರು ಬಹಿರಂಗಪಡಿಸಲಿಲ್ಲ. ‘ಕಟ್ಟಡ ತ್ಯಾಜ್ಯವನ್ನು ಇಲ್ಲಿ ವಿಲೇವಾರಿ ಮಾಡುವಂತೆ ನಮಗೆ ಸೂಚನೆ ನೀಡಿದ್ದಾರೆ. ನಮ್ಮ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ’ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಿಳಿಸಿದರು. 

‘ಮಾ.23ರಂದು ಏಕಾಏಕಿ ಟ್ರ್ಯಾಕ್ಟರ್‌ಗಳಲ್ಲಿ ಕಟ್ಟಡ ಅವಶೇಷದ ಮಣ್ಣನ್ನು ತಂದು ರಸ್ತೆಗೆ ಸುರಿದು ಸಂಚಾರ ನಿರ್ಬಂಧಿಸಿದರು. ಅದನ್ನು ಪ್ರಶ್ನಿಸಿದಾಗ, ‘ಇದು ರಸ್ತೆಯಲ್ಲ. ಖಾಸಗಿ ಜಮೀನು’ ಎಂದು ತಿಳಿಸಿದರು. ಇದೊಂದು ರಸ್ತೆ. ಖಾಸಗಿ ಜಮೀನು ಹೇಗಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಪವನ್ ಪ್ರಶ್ನಿಸಿದರು.

‘ರಸ್ತೆ ಕಬಳಿಸಿ ಇಲ್ಲಿ ಏನೋ ಕಾಮಗಾರಿ ನಡೆಸಲು ಮುಂದಾಗಿದ್ದಾರೆ’ ಎಂದು ಸಂಶಯ ವ್ಯಕ್ತಪಡಿಸಿದ ಅವರು, ‘ಇಲ್ಲಿ ಹಾಕಿರುವ ಕಸದಲ್ಲಿ ಗಾಜು ಸೇರಿದಂತೆ ಅಪಾಯಕಾರಿ ವಸ್ತುಗಳಿವೆ. ಸಾರ್ವಜನಿಕರಿಗೆ ಅಡ್ಡಿ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆ. ಇದರ ಹಿಂದೆ ಪ್ರಭಾವಿಗಳು ಇದ್ದಾರೆ. ನಮ್ಮ ನಿವಾಸಗಳಿಗೆ ಮೊದಲಿನಂತೆ ಇದೇ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

‘ಒಂದು ವಾರದಿಂದ ಮನೆಯಿಂದ ಹೊರ ಬಂದರೆ ಕಸದ ದುರ್ವಾಸನೆಗೆ ಮೂಗು ಮುಚ್ಚಿಕೊಳ್ಳಬೇಕಾಗಿದೆ. ಮಳೆ ಬಂದರೆ, ಈ ಕಸದಿಂದಲೇ ಹಲವು ಆರೋಗ್ಯ ಸಮಸ್ಯೆಗಳೂ ಬರಬಹುದು. ಕಸವನ್ನು ಕೂಡಲೇ ತೆರವು ಮಾಡಬೇಕು’ ಎಂದು ಸ್ಥಳೀಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ನಿವಾಸಿ ಅಮೃತ್ ಒತ್ತಾಯಿಸಿದರು.

ರಸ್ತೆ ಕಬಳಿಕೆ ಯತ್ನ: ‘ಸಾರ್ವಜನಿಕರಿಂದ ದೂರು ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದೆವು. ರಸ್ತೆಯನ್ನು ಖಾಸಗಿಯವರು ಕಬಳಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ ಅವರಿಗೆ ವಿಚಾರ ತಿಳಿಸಿದಾಗ, ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಇದರಲ್ಲಿ ಅಧಿಕಾರಿಗಳು ಹಾಗೂ ಪೊಲೀಸರು ಶಾಮೀಲಾಗಿರುವ ಶಂಕೆಯಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಎಸ್.ಮಂಜುನಾಥ್ ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು