ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಚುನಾವಣೆಗೆ ಮಾಡಿದ್ದ ಸಾಲ ತೀರಿಸಲು ಸುಲಿಗೆ

ಮನೆಗೆ ನುಗ್ಗಿ ಕೃತ್ಯ; ಯುವತಿ ಸೇರಿ ಇಬ್ಬರ ಬಂಧನ
Last Updated 5 ಆಗಸ್ಟ್ 2020, 16:37 IST
ಅಕ್ಷರ ಗಾತ್ರ

ಬೆಂಗಳೂರು: ಒಂಟಿಯಾಗಿದ್ದ ವೃದ್ಧೆಯೊಬ್ಬರ ಮನೆಗೆ ನುಗ್ಗಿ ಹಣ ಹಾಗೂ ಆಭರಣ ಸುಲಿಗೆ ಮಾಡಿದ್ದ ಆರೋಪದಡಿ ಯುವತಿ ಸೇರಿ ಇಬ್ಬರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

‘ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಲೀಲಾವತಿ ನಾಗ್ (34) ಹಾಗೂ ಆಕೆಯ ಸ್ನೇಹಿತ ಕಿಶೋರ್ ಕುಮಾರ್ (31) ಬಂಧಿತರು. ಅವರಿಂದ ದ್ವಿಚಕ್ರ ವಾಹನ ಹಾಗೂ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಕಿಶೋರ್‌ನ ತಂದೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದರು. ಅದಕ್ಕಾಗಿ ಸಾಲ ಮಾಡಿದ್ದರು. ಅದನ್ನು ತೀರಿಸಲು ನಗರಕ್ಕೆ ದುಡಿಯಲು ಬಂದಿದ್ದ ಕಿಶೋರ್, ಸ್ನೇಹಿತೆ ಲೀಲಾವತಿ ಜೊತೆ ಸೇರಿ ಚಿಕ್ಕನಾಯಕನಪಾಳ್ಯದ ನಿವಾಸಿ ವೆಂಕಟಲಕ್ಷ್ಮಮ್ಮ (68) ಎಂಬುವರ ಮನೆಗೆ ನುಗ್ಗಿ ಕೃತ್ಯ ಎಸಗಿದ್ದ’ ಎಂದೂ ತಿಳಿಸಿದರು.

‘ವೆಂಕಟಲಕ್ಷ್ಮಮ್ಮ ಅವರ ಪತಿ ವರ್ಷದ ಹಿಂದಷ್ಟೇ ತೀರಿಕೊಂಡಿದ್ದರು. ಹೀಗಾಗಿ, ಅವರು ಒಬ್ಬಂಟಿಯಾಗಿ ನೆಲೆಸಿದ್ದರು. ಪಕ್ಕದ ಮನೆಯಲ್ಲಿ ವಾಸವಿದ್ದ ಆರೋಪಿ ಲೀಲಾವತಿ, ಕೂಲಿ ಕೆಲಸ ಮಾಡುತ್ತಿದ್ದಳು. ಕಿಶೋರ್ ಖಾಸಗಿ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಇಬ್ಬರು ಒಂದೇ ಊರಿನವರಾಗಿದ್ದರಿಂದ ಪರಸ್ಪರ ಪರಿಚಯವಾಗಿತ್ತು.’

‘ತನ್ನ ತಂದೆ ಮಾಡಿರುವ ಸಾಲವನ್ನು ತೀರಿಸಲು ಹಣ ಬೇಕೆಂದು ಕಿಶೋರ್, ಲೀಲಾವತಿಗೆ ಹೇಳಿದ್ದ. ಬಳಿಕ ಇಬ್ಬರೂ ಸೇರಿ ವೆಂಕಟಲಕ್ಷ್ಮಮ್ಮ ಅವರನ್ನು ಸುಲಿಗೆ ಮಾಡಲು ಸಂಚು ರೂಪಿಸಿದ್ದರು. ಜುಲೈ 23ರಂದು ಸಂಜೆ 5.30ರ ಸುಮಾರಿಗೆ ಮನೆಗೆ ನುಗ್ಗಿದ್ದ ಆರೋಪಿಗಳು, ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿ ಹಾಕಿದ್ದರು. ₹50 ಸಾವಿರ ನಗದು ಹಾಗೂ ಬೆಳ್ಳಿ ಸರ ಸುಲಿಗೆ ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ವೃದ್ಧೆಯ ಮನೆ ಬಳಿಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಆರೋಪಿ ಮುಖಚಹರೆ ಸೆರೆಯಾಗಿತ್ತು. ಅದನ್ನು ಆಧರಿಸಿಯೇ ಆರೋಪಿಗಳನ್ನು ಬಂಧಿಸಿದಾಗ ತಪ್ಪೊಪ್ಪಿಕೊಂಡರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT