ಕೆಂಗೇರಿ: ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಆರ್.ವಿ.ಎಂಜಿನಿಯರಿಂಗ್ ಕಾಲೇಜಿನ 14ನೇ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತೀರ್ಣರಾದ 1,140 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಬಯೊಟೆಕ್ನಾಲಜಿ ವಿಭಾಗದ ಪಿ.ಆರ್.ಶಿವದರ್ಶಿನಿ ಹಾಗೂ ಏರೋಸ್ಪೇಸ್ ವಿಭಾಗದ ಸಂಜಯ್.ಆರ್ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬ್ರಿಗೇಡ್ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ಆರ್.ಜೈಶಂಕರ್, ‘ಪ್ರತಿ ವ್ಯಕ್ತಿಯ ಬೆಳವಣಿಗೆಯಲ್ಲಿ ಸುತ್ತಮುತ್ತಲಿನ ವಿದ್ಯಮಾನಗಳು ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಒಡನಾಟ, ಹವ್ಯಾಸ ಹಾಗೂ ವಿವೇಚನೆಗಳು ಪ್ರಗತಿಗೆ ಪೂರಕವಾಗಿರಬೇಕು’ ಎಂದು ತಿಳಿಸಿದರು.
‘ನಕಾರಾತ್ಮಕ ವಿಚಾರಗಳಿಂದ ದೂರವಿರಬೇಕು. ಸತ್ಯ-ಮಿಥ್ಯಗಳ ವ್ಯತ್ಯಾಸ ಗುರುತಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ. ಗುರಿ ಸಾಧನೆಗೆ ಯುವ ಸಮುದಾಯ ಮೊದಲ ಪ್ರಾಶಸ್ತ್ಯ ನೀಡಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಶಿಯಾ ವಿಸ್ಡಮ್ ವರ್ಕ್ಸ್ ಸಿಇಒ ಉಶಿ ಮೋಹನ್ ದಾಸ್, ಆರ್‌ವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಎಂ.ಪಿ.ಶ್ಯಾಮ್, ಕೆ.ಎನ್.ಸುಬ್ರಹ್ಮಣ್ಯ, ಕೆ.ಎಸ್.ಗೀತಾ, ಎ.ಸಿ.ಚಂದ್ರಶೇಖರರಾಜು, ಎ.ವಿ.ಎಸ್ ಮೂರ್ತಿ, ಡಿ.ಪಿ.ನಾಗರಾಜ್, ಪಿ.ಎಸ್.ವೆಂಕಟೇಶ್, ನಿಖಿಲ್ ಮತ್ತಿತರರು ಉಪಸ್ಥಿತರಿದ್ದರು.