ಗುರುವಾರ , ಸೆಪ್ಟೆಂಬರ್ 23, 2021
23 °C
ಜಲಮಂಡಳಿ ಚಿಂತನೆ * ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

ಮಳೆ ನೀರು ಸಂಗ್ರಹಿಸಿದರೆ ಶುಲ್ಕದಲ್ಲಿ ಶೇ 5ರಷ್ಟು ರಿಯಾಯಿತಿ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಳೆ ನೀರು ಸಂಗ್ರಹ ವ್ಯವಸ್ಥೆ (ಆರ್‌ಡಬ್ಲ್ಯುಎಚ್‌) ಅಳವಡಿಸಿಕೊಂಡಿರುವ ಕಟ್ಟಡಗಳಿಗೆ ತಿಂಗಳ ನೀರಿನ ಶುಲ್ಕದಲ್ಲಿ ಶೇ 5ರಷ್ಟು ರಿಯಾಯಿತಿ ನೀಡಲು ಜಲಮಂಡಳಿ ಚಿಂತನೆ ನಡೆಸಿದೆ.  ಮಂಡಳಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ, ಆಸ್ತಿ ತೆರಿಗೆಯನ್ನು ಬೇಗ ಪಾವತಿಸಿದವರಿಗೆ ಶೇ 5ರಷ್ಟು ಕಡಿತವನ್ನು ಬಿಬಿಎಂಪಿ ಘೋಷಿಸಿರುವ ರೀತಿಯಲ್ಲಿಯೇ, ಜಲಮಂಡಳಿ ಕೂಡ ಇಂತಹ ಚಿಂತನೆ ಹಮ್ಮಿಕೊಂಡಿದೆ.

‘ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶೇ 5ರಷ್ಟು ರಿಯಾಯಿತಿ ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದವರಿಗೆ ದಂಡ ಹಾಕುವ ಜೊತೆಗೆ, ಮಳೆ ನೀರು ಸಂಗ್ರಹಿಸುವವರಿಗೆ ಉತ್ತೇಜಿಸುವ ಕೆಲಸ ಮಾಡುವುದು ಅಗತ್ಯವಾಗಿದೆ’ ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಾರು 100 ಕಿ.ಮೀ. ದೂರದ ಕಾವೇರಿ ನದಿಯಿಂದ ನೀರು ಪಡೆಯುತ್ತಿದ್ದೇವೆ. ಇದರ ಮೇಲಿನ ಅವಲಂಬನೆ ತಗ್ಗಬೇಕೆಂದರೆ ಮಳೆ ನೀರು ಸಂಗ್ರಹ ಅತಿ ಅಗತ್ಯ. ಒಂದು ಸಾವಿರ ಲೀಟರ್‌ ನೀರನ್ನು ಶುದ್ಧೀಕರಿಸಿ ಜನರಿಗೆ ನೀಡಲು ₹90 ಖರ್ಚಾಗುತ್ತದೆ. ಆದರೆ, ನಾವು ಜನರಿಂದ ಶುಲ್ಕದ ರೂಪದಲ್ಲಿ ₹41 ಮಾತ್ರ ತೆಗೆದುಕೊಳ್ಳುತ್ತಿದ್ದೇವೆ. ಆದಾಗ್ಯೂ, ಶೇ 5ರಷ್ಟು ರಿಯಾಯಿತಿ ಘೋಷಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಹೇಳಿದರು.

ನಿಯಮ ಪಾಲನೆ ಇಲ್ಲ: 

30X40 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆ ಕಡ್ಡಾಯವಾಗಿದೆ. ಆದರೆ, ಎಷ್ಟೋ ಮನೆಗಳು ಈ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಕೆಲವರು ದಾಖಲೆಗಳಲ್ಲಿ ತೋರಿಸುವುದಕ್ಕೆ ಮಾತ್ರ ಈ ವ್ಯವಸ್ಥೆ ಅಳವಡಿಸಿಕೊಂಡಿರುತ್ತಾರೆ. ಆ ನೀರನ್ನು ನೇರವಾಗಿ ಶೌಚಾಲಯ ಸೇರುವಂತೆ ಮಾಡಿದ್ದು, ಅದು ಮೋರಿಗಳಿಗೆ ಹೋಗುತ್ತಿದೆ.

ಜೋರು ಮಳೆ ಬಂದಾಗ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲೂ ಜನರ ಇಂತಹ ಮನೋಭಾವವೂ ಕಾರಣವಾಗಿದೆ. ನೀರನ್ನು ಸಂಗ್ರಹಿಸಿ, ಆವರಣದಲ್ಲಿಯೇ ಇಂಗಿಸುವ ಕೆಲಸ ಆಗಬೇಕಾಗಿದೆ ಎಂದು ಜಲತಜ್ಞರು ಹೇಳುತ್ತಾರೆ.

‘ಮಳೆ ನೀರು ಸಂಗ್ರಹಿಸಿ, ಸಮರ್ಪಕವಾಗಿ ಅದನ್ನು ಇಂಗಿಸುವ ಕಾರ್ಯವನ್ನು ಮಾಡಿದರೆ ಅಥವಾ ಸಂಗ್ರಹಿಸಿದ ನೀರನ್ನು ಸಮರ್ಪಕವಾಗಿ ಬಳಸಲು ಗ್ರಾಹಕರು ಮುಂದಾದರೆ, ನಾವು ನೀಡಬೇಕು ಎಂದಿರುವ ಶೇ 5ರಷ್ಟು ರಿಯಾಯಿತಿಗಿಂತ ಹೆಚ್ಚಿನ ಲಾಭವನ್ನು ಅವರು ಪಡೆಯಬಹುದು’ ಎಂದು ಜಯರಾಂ ಹೇಳಿದರು.

‘ಮಳೆ ನೀರು ಸಂಗ್ರಹದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೆಲವು ಸರ್ಕಾರೇತರ ಸಂಸ್ಥೆಗಳ ಜೊತೆಗೂ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು