ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ‘ಕನ್ನಡ ಸಾಹಿತ್ಯ ಅಧ್ಯಯನ’ ಆಕರ: ಡಾ.ಎಸ್‌.ಪ್ರವೀಣಕುಮಾರ್

Last Updated 8 ಮಾರ್ಚ್ 2022, 18:51 IST
ಅಕ್ಷರ ಗಾತ್ರ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ ಹಾಗೂ ಕನ್ನಡ ಸಾಹಿತ್ಯ ಅಧ್ಯಯನ ಮಾಡುವವರಿಗೆ ‘ಕನ್ನಡ ಸಾಹಿತ್ಯ ಅಧ್ಯಯನ’ ಕೃತಿ ಉತ್ತಮವಾದ ಆಕರಗ್ರಂಥ ಎಂದು ಭಾಷಾಂತರ ಇಲಾಖೆಯ ಅನುವಾದಕ ಡಾ.ಎಸ್‌.ಪ್ರವೀಣಕುಮಾರ್ ಹೇಳಿದರು.

ಕೆ.ಆರ್.ಪುರ ಸರ್ಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಸ್ವಾಮಿ ಎಸ್. ಅವರ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವೀಣ್‌ಕುಮಾರ್, ‘ವರ್ಣಮಾಲೆಯಿಂದ ಆರಂಭಿಸಿ ಶಾಸನ, ಹಳೆಗನ್ನಡ, ಕಾವ್ಯ, ಛಂದಸ್ಸು, ಆಧುನಿಕ ಸಾಹಿತ್ಯವನ್ನು ಸಮಗ್ರವಾಗಿ ಪರಿಚಯಿಸುವ ಗ್ರಂಥ ಇದಾಗಿದೆ. ವಚನಕಾರರು ಹಾಗೂ ಅವರು ಬರೆದ ವಚನಗಳ ಅಧಿಕೃತ ಪಟ್ಟಿಯೂ ಇಲ್ಲಿದೆ. ಅಲಕ್ಷಿತ ವಚನಕಾರರ ಬಗ್ಗೆಯೂ ವಿಶೇಷ ಆಸ್ಥೆಯಿಂದ ಅಧ್ಯಯನ ನಡೆಸಿ ಪುಸ್ತಕದಲ್ಲಿ ವಿವರಿಸಿದ್ದಾರೆ’ ಎಂದರು.

ಕವನ ಸಂಕಲನ ‘ಮುನ್ನುಡಿ’ ಕುರಿತು ಮಾತನಾಡಿದ ಕವಿ ಡಾ. ಟಿ. ಯಲ್ಲಪ್ಪ, ‘ಏಕತೆಯ ಹೆಸರಿನಲ್ಲಿ ಬಹುತ್ವಭಾರತವನ್ನೇ ಒಡೆದು ಹಾಕುತ್ತಿರುವ ಸಂದರ್ಭದಲ್ಲಿ ಪ್ರಸಾದಸ್ವಾಮಿ ಅವರು ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವ ಕವಿತೆಗಳನ್ನು ಬರೆದಿದ್ದಾರೆ. ತಮ್ಮ ಕವನ ನೇರ, ಸರಳ, ಚಿಕ್ಕದು ಎನ್ನುವ ಅವರ ಕವಿತೆಗಳು ಚೊಕ್ಕವಾಗಿದ್ದು, ಚೇಳು ತನ್ನ ಕೊಂಡಿಯಿಂದ ಕುಟುಕುವಂತೆಸಮಾಜ ವಿರೋಧಿಗಳನ್ನು ಚುಚ್ಚಿದ್ದಾರೆ’ ಎಂದು ಹೇಳಿದರು.

ಪಿ. ಲಂಕೇಶ್‌ರ ಬರಹಗಳನ್ನು ಪರಿಚಯಿಸುವ ‘ಕನ್ನಡ ನವಿಲು’ ಕೃತಿ ಬಗ್ಗೆ ಪ್ರಾಧ್ಯಾಪಕ ಡಾ.ರಮೇಶ್ಚಂದ್ರ ದತ್ತ, ಆಧುನಿಕ ಸಾಹಿತ್ಯ ವಿಮರ್ಶೆಯ ಪುಸ್ತಕ ’ಬೆಡಗು–ಬಿನ್ನಾಣ’ದ ಬಗ್ಗೆ ವಿಮರ್ಶಕ ಡಾ.ರಾಗಂ ಅವರು ಮಾತನಾಡಿದರು.

ನಾಲ್ಕೂ ಕೃತಿಗಳನ್ನು ‘ಪ್ರಜಾವಾಣಿ’ಯ ಬೆಂಗಳೂರು ವರದಿಗಾರರ ವಿಭಾಗದ ಮುಖ್ಯಸ್ಥ ವೈ.ಗ.ಜಗದೀಶ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಲೇಖಕ ಡಾ.ಪ್ರಸಾದ ಸ್ವಾಮಿ ಎಸ್‌., ಸಹಾಯಕ ನಿರ್ದೇಶಕ ಡಾ.ಎಸ್‌.ಬಿ.ಉಮೇಶ್ ಹಾಗೂ ಕಣ್ವ ಪ್ರಕಾಶನದ ಎಂ.ಆರ್. ಗಿರಿರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT