ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ‘ಸಹಕಾರ ರತ್ನ ಪ್ರಶಸ್ತಿ’; ನಾಳೆ ಪ್ರದಾನ

Last Updated 18 ಮಾರ್ಚ್ 2022, 21:23 IST
ಅಕ್ಷರ ಗಾತ್ರ

ಬೆಂಗಳೂರು: ಇದೇ ಭಾನುವಾರ (ಮಾ.20) ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ‘ಸಹಕಾರ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಸಹಕಾರ ರತ್ನ ಪ್ರಶಸ್ತಿಗೆ 100 ಅರ್ಜಿಗಳು ಬಂದಿವೆ. ಒಂದು ಜಿಲ್ಲೆಗೆ ಒಬ್ಬರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗುವುದು. ಇಲಾಖೆಯಿಂದಲೂ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು. ಅವರಿಗೆ ಆಯ್ಕೆ ಪಟ್ಟಿಯನ್ನು ಸಲ್ಲಿಸಲಾಗಿದೆ’ ಎಂದು ಹೇಳಿದರು.

ಅತ್ಯುತ್ತಮ ಸಹಕಾರ ಸಂಘಗಳು, ಅತ್ಯುತ್ತಮ ಸಹಕಾರ ಬ್ಯಾಂಕ್‌ಗಳನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ. ಮುಖ್ಯಮಂತ್ರಿಯವರ ಅನುಮೋದನೆ ದೊರಕಿದ ಬಳಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗುವುದು. ಪುರಸ್ಕೃತರಿಗೆ ಚಿನ್ನದ ಪದಕ,ಶಾಲು, ಹಾರ, ಸ್ಮರಣಿಕೆ ಮತ್ತು ಪ್ರಶಂಸಾ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಸಹಕಾರ ವಸತಿ ಮಹಾಮಂಡಳ ಮತ್ತು ಸಹಕಾರ ಇಲಾಖೆ ಜಂಟಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುತ್ತಿವೆ. ಮುಖ್ಯಮಂತ್ರಿಯವರು ಪ್ರಶಸ್ತಿ ಪ್ರದಾನ ಮಾಡುವರು. ಕಂದಾಯ ಸಚಿವ ಆರ್‌. ಅಶೋಕ ಸಹಕಾರ ಧ್ವಜಾರೋಹಣ ನಡೆಸುವರು ಎಂದರು.

ಸ್ತ್ರೀ ಶಕ್ತಿ ಸಂಘಗಳು ಮತ್ತು ಸ್ವಸಹಾಯ ಗುಂಪುಗಳಿಗೆ ₹ 20 ಕೋಟಿ ಸಾಲ ವಿತರಿಸುವ ಪ್ರಕ್ರಿಯೆಯೂ ಭಾನುವಾರ ನಡೆಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ವ್ಯಾಪ್ತಿಯ ರೈತರಿಗೆ ಕೃಷಿ ಸಾಲ ವಿತರಣೆಯನ್ನೂ ಮಾಡಲಾಗುವುದು ಎಂದು ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ, ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಎಸ್‌. ಜಿಯಾಉಲ್ಲಾ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪುನೀತ್‌ ರಾಜ್‌ಕುಮಾರ್‌ಗೆ ಪ್ರಶಸ್ತಿ
ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ‘ಸಹಕಾರ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಪುನೀತ್‌ ಅವರು ಕರ್ನಾಟಕ ಹಾಲು ಮಹಾಮಂಡಳದ ಪ್ರಚಾರ ರಾಯಭಾರಿಯಾಗಿ ಸಹಕಾರ ಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT