ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕವಾಗಿ ಬ್ರಿಟನ್‌ ಪ್ರಜೆಯಾಗಿದ್ದೇವೆ

‘ಬಿ.ಪುಟ್ಟಸ್ವಾಮಯ್ಯ: ಬದುಕು–ಬರಹ’ ವಿಚಾರಗೋಷ್ಠಿಯಲ್ಲಿ ಚಂದ್ರಶೇಖರ ಕಂಬಾರ
Last Updated 17 ಮೇ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಸ್ತುತ ದಿನಮಾನದಲ್ಲಿ ನಾವು ಭಾಷೆಯ ವಿಚಾರದಲ್ಲಿ ಬ್ರಿಟನ್‌ ಪ್ರಜೆಗಳಂತೆ ವರ್ತಿಸುತ್ತಿದ್ದೇವೆ’ ಎಂದು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.

ಸಾಹಿತ್ಯ ಅಕಾಡೆಮಿ ಹಾಗೂ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ‘ಬಿ.ಪುಟ್ಟಸ್ವಾಮಯ್ಯ: ಬದುಕು–ಬರಹ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮೆಕಾಲೆ ಪರಿಚಯಿಸಿದ ಶಿಕ್ಷಣ ಪದ್ಧತಿ ದೇಶದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತು. ದಲಿತರುಸೇರಿದಂತೆ ಎಲ್ಲರಿಗೂ ಶಿಕ್ಷಣ ಸಿಗಲಾರಂಭಿಸಿತು. ಎಲ್ಲರಲ್ಲೂ ಇಂಗ್ಲಿಷ್ ವ್ಯಾಮೋಹ ಬೆಳೆಯಲು ಶುರುವಾಯಿತು. ಆ ಭಾಷೆಗೆ ನಾವಿಂದು ಮೋಹಿತರಾಗುತ್ತಿದ್ದೇವೆ’ ಎಂದರು.

‘ಬಿಎಂಶ್ರೀ ಇಂಗ್ಲಿಷ್‌ ಕೃತಿಗಳನ್ನು ಕನ್ನಡಕ್ಕೆ ತಂದರು. ಎಲ್ಲರಿಗೂ ಇಂಗ್ಲಿಷ್‌ ಕಲಿಸಲು ಶುರು ಮಾಡಿದರು. ಆದರೆ, ಕುವೆಂಪು, ಗೋವಿಂದ ಪೈ ಹಾಗೂ ಬಿ.ಪುಟ್ಟಸ್ವಾಮಯ್ಯ ಅವರು ಮೊದಲ ಬಾರಿಗೆ ನಮ್ಮ ನೆಲದ ಅಸ್ಮಿತೆಯ ಕುರಿತು ಬರೆದರು. ನಮ್ಮ ಸಾಮಾಜಿಕ ಬದುಕು, ನಮ್ಮ ಅರಣ್ಯ ಪ್ರದೇಶ, ನಮ್ಮ ಸಮಸ್ಯೆಗಳು ಇವರ ಬರಹದ ವಸ್ತುವಾದವು’ ಎಂದು ಹೇಳಿದರು.

ನಿರ್ದೇಶಕ ಟಿ.ಎಸ್‌.ನಾಗಾಭರಣ, ‘ಪುಟ್ಟಸ್ವಾಮಯ್ಯ ಅವರು 9ನೇ ತರಗತಿವರೆಗೆ ಕಲಿತರೂ 6 ಭಾಷೆ ಬಲ್ಲವರಾಗಿದ್ದರು. 7 ವರ್ಷಗಳಲ್ಲಿ 6 ಐತಿಹಾಸಿಕ ಕಾದಂಬರಿಗಳನ್ನು ಮನುಷ್ಯ ಪ್ರೀತಿಯನ್ನು ತುಂಬಿ ರಚಿಸಿದರು. ಸಿದ್ಧಾಂತಗಳಿಗೆ ಜೋತುಬೀಳದೆ ಮಧ್ಯಮ ಮಾರ್ಗದಲ್ಲಿ ನಡೆದರು’ ಎಂದರು.

ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಎಲ್‌.ಎನ್‌.ಮುಕುಂದರಾಜ್‌, ‘ಪುಟ್ಟಸ್ವಾಮಯ್ಯ ಅವರ ‘ಕ್ರಾಂತಿ ಕಲ್ಯಾಣ’ ಓದಿದರೆ ಆಲೋಚನಾ ಕ್ರಮ ಬದಲಾಗುತ್ತದೆ. ಅವರು ಗುಬ್ಬಿ ಕಂಪನಿಗೆ ನಾಟಕಗಳನ್ನು ಬರೆದುಕೊಟ್ಟಿದ್ದಾರೆ. ನಮ್ಮ ಸಮಾಜ ಇಂದು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳ ಕುರಿತು ಅವರು ಅಂದಿನ ಕಾಲದಲ್ಲೇ ಬರೆದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT