ಸೋಮವಾರ, ನವೆಂಬರ್ 18, 2019
23 °C
ಪ್ರತಿ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲಿಸಲು ಪ್ರಾದೇಶಿಕ ಆಯುಕ್ತರಿಗೆ ಸೂಚನೆ

ಸಕಾಲ: ಕೊನೆಯ ಸ್ಥಾನದಲ್ಲಿ ಬೆಂಗಳೂರು

Published:
Updated:

ಬೆಂಗಳೂರು: ‘ಸಕಾಲ ಯೋಜನೆ ಅನುಷ್ಠಾನದಲ್ಲಿ ಬೆಂಗಳೂರು ನಗರ ಜಿಲ್ಲೆಯು ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ’ ಎಂದು ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದರು. 

‘ಸಕಾಲ 2012ರಲ್ಲಿ ಪ್ರಾರಂಭಿಸಿದಾಗ 151 ಸೇವೆಗಳನ್ನು ಯೋಜನೆಯಡಿ ಒದಗಿಸಲಾಗುತ್ತಿತ್ತು. ಈಗ 1,026 ಸೇವೆಗಳನ್ನು ಒದಗಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೂಡ ಅರ್ಜಿ ಸ್ವೀಕಾರ ಪ್ರಮಾಣ ತೀರಾ ಕಡಿಮೆಯಾಗಿದೆ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಲಾಗಿದೆ. ಯಾವ ಜಿಲ್ಲೆಯಲ್ಲಿ, ಯಾವ ಪರಿಸ್ಥಿತಿ ಇದೆ ಎಂದು ಅವರ ಗಮನಕ್ಕೆ ತರಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಇದೇ 20ರೊಳಗೆ ಕಾರ್ಯಾಗಾರ ಏರ್ಪಡಿಸಲು ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಪ್ರಾದೇಶಿಕ ಆಯುಕ್ತರು ಪ್ರತಿ 15 ದಿನಗಳಿಗೊಮ್ಮೆ ಸಕಾಲ ಸ್ಥಿತಿ–ಗತಿ ಕುರಿತು ಪರಿಶೀಲಿಸುವಂತೆ ಸೂಚಿಸಿದ್ದೇನೆ’ ಎಂದರು.

‘ರಾಜ್ಯದ ಇತರೆ ಜಿಲ್ಲೆಗಳು ಸಕಾಲ ಅನುಷ್ಠಾನದಲ್ಲಿ ಯಾವ ಸ್ಥಾನದಲ್ಲಿವೆ ಎಂಬುದರ ಪಟ್ಟಿಯನ್ನು ಒಂದು ವಾರದೊಳಗೆ ಬಿಡುಗಡೆಗೊಳಿಸಲಾಗುವುದು’ ಎಂದರು.

‘ಯಾವ ಸೇವೆಯನ್ನು ಎಷ್ಟು ದಿನದಲ್ಲಿ ಕೊಡಬೇಕು ಎಂದು ಸಂಬಂಧಪಟ್ಟ ಇಲಾಖೆಗಳಿಗೇ ಕೇಳಿ ಸಮಯ ನಿಗದಿ ಪಡಿಸಲಾಗಿದೆ. ಆದರೂ, ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. 15 ದಿನದಲ್ಲಿ ಸೇವೆ ಕೊಡಬೇಕು ಎಂದಿದ್ದರೆ, 14ನೇ ದಿನ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ. ಅರ್ಜಿ ಸ್ವೀಕರಿಸುವಾಗಲೇ ಎಲ್ಲ ದಾಖಲೆ ಸರಿ ಇದೆಯೇ ಎಂದು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ’ ಎಂದರು.

ಮನೆ ಬಾಗಿಲಿಗೆ ‘ಜನ ಸೇವಕ’

‘ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ಒದಗಿಸಲು ‘ಜನ ಸೇವಕ’ ಕಾರ್ಯಕ್ರಮವನ್ನು ಪ್ರಯೋಗಾರ್ಥವಾಗಿ ದಾಸರಹಳ್ಳಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಾರಂಭಿಕವಾಗಿ ನಾಲ್ಕು ಸೇವೆಗಳನ್ನು (ಜಾತಿ, ಆದಾಯ ಪ್ರಮಾಣ ಪತ್ರ, ಆಯುಷ್ಮಾನ್‌ ಚೀಟಿ ಮತ್ತು ಹಿರಿಯ ನಾಗರಿಕರ ಚೀಟಿ) ಒದಗಿಸಲಾಗುತ್ತಿದೆ’ ಸುರೇಶ್‌ಕುಮಾರ್‌ ತಿಳಿಸಿದರು.

‘ಇಂತಹ ಸೇವೆ ಬಯಸಿದವರು ಕಾಲ್‌ ಸೆಂಟರ್‌ಗೆ ಕರೆ (080–4455 4455) ಮಾಡಿದರೆ ಯಾವ ಸೇವೆ ಪಡೆಯಲು ಯಾವ ದಾಖಲೆಗಳನ್ನು ನೀಡಬೇಕು ಎಂದು ಹೇಳುತ್ತಾರೆ. ನಂತರ, ಜನ ಸೇವಕರು ಮನೆಗೇ ತೆರಳಿ ದಾಖಲೆಗಳನ್ನು ಪಡೆದು, ನಿಗದಿತ ಅವಧಿಯೊಳಗೆ ನಿರ್ದಿಷ್ಟ ಸೇವೆ ಒದಗಿಸುತ್ತಾರೆ. ಒಂದು ಸೇವೆಗೆ ₹115 ಶುಲ್ಕ ನಿಗದಿ ಮಾಡಲಾಗಿದೆ’ ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲೆ ಅಂಕಿ–ಅಂಶ

63.90 ಲಕ್ಷ - ಸಕಾಲ ಅಡಿ ಏಳು ವರ್ಷಗಳಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳು

63.40 ಲಕ್ಷ - ವಿಲೇವಾರಿ ಮಾಡಿರುವ ಅರ್ಜಿಗಳು

84,601 - ತಿಂಗಳಲ್ಲಿ ಸರಾಸರಿ ಸ್ವೀಕರಿಸಲಾಗುತ್ತಿರುವ ಅರ್ಜಿಗಳ ಸಂಖ್ಯೆ

76,736 - ತಿಂಗಳಲ್ಲಿ ಸರಾಸರಿ ಇತ್ಯರ್ಥಪಡಿಸಲಾಗುತ್ತಿರುವ ಅರ್ಜಿಗಳ ಸಂಖ್ಯೆ

 

ಪ್ರತಿಕ್ರಿಯಿಸಿ (+)