ಬುಧವಾರ, ಜನವರಿ 20, 2021
17 °C
ಸಪ್ನ ಪುಸ್ತಕ ಜಾತ್ರೆ: ನೆಚ್ಚಿನ ಲೇಖಕರ ಹಸ್ತಾಕ್ಷರ ಪಡೆದ ಪುಸ್ತಕ ‍ಪ್ರೇಮಿಗಳು

‘ಕದಡಿದ ಮನಸಿಗೆ ಪುಸ್ತಕ ಮುದ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಓದು ಹಾಗೂ ಬರಹಕ್ಕೆ ಕೋವಿಡ್ ಉತ್ತೇಜನ ನೀಡಿತು. ಧಾರಾವಾಹಿ ಹಾಗೂ ಚಲನಚಿತ್ರಗಳು ಬೇಸರವನ್ನುಂಟು ಮಾಡಿದ ಕಾರಣ ಪುಸ್ತಕಗಳು ಆಪ್ತವಾಗತೊಡಗಿದವು. ಇದರಿಂದ ಪುಸ್ತಕೋದ್ಯಮವೂ ಚೇತರಿಕೆ ಕಂಡಿತು’ ಎಂದು ವಿವಿಧ ಲೇಖಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಪ್ನ ಬುಕ್‌ ಹೌಸ್ ನಗರದಲ್ಲಿ ಶುಕ್ರವಾರ ಆಯೋಜಿಸಿದ ‘ಸಪ್ನ ಪುಸ್ತಕ ಜಾತ್ರೆ’ಯಲ್ಲಿ ಭಾಗವಹಿಸಿದ ಕವಿ ಸಿದ್ಧಲಿಂಗಯ್ಯ, ಲೇಖಕಿ ಡಾ. ವಸುಂಧರಾ ಭೂ‍ಪತಿ, ಕತೆಗಾರ ವಸುಧೇಂದ್ರ, ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪತ್ರಕರ್ತ ಜೋಗಿ ಮತ್ತು ಕನ್ನಡಪರ ಹೋರಾಟಗಾರ ರಾ.ನಂ. ಚಂದ್ರಶೇಖರ್ ಅವರು ಮನದಾಳದ ಮಾತುಗಳನ್ನು ಹಂಚಿಕೊಂಡರು. ಸಹ ಲೇಖಕರ ಪುಸ್ತಕಗಳ ಪುಟಗಳನ್ನು ತಿರುವಿ ಹಾಕಿದ ಅವರು, ಪುಸ್ತಕ ಪ್ರೇಮಿಗಳಿಗೆ ಹಸ್ತಾಕ್ಷರ ನೀಡಿದರು.

‘ಕೋವಿಡ್ ನಡುವೆಯೂ ‘ತೇಜೋ-ತುಂಗಭದ್ರಾ’ ಕಾದಂಬರಿ ದಾಖಲೆಯ ಮಾರಾಟ ಕಂಡಿತು. ಇದರಿಂದ ಬರವಣಿಗೆಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಯಿತು. ಇತಿಹಾಸದ ವಿಷಯದ ಮೇಲೆ ಓದುಗರಿಗೆ ಇಷ್ಟೊಂದು ಆಸಕ್ತಿ ಇರುತ್ತದೆ ಎನ್ನುವುದು ಅರಿವಿನಲ್ಲಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಜನರಲ್ಲಿ ಓದುವ ಹವ್ಯಾಸ ಹೆಚ್ಚಾಗಿದೆ. ಕನ್ನಡ ಪುಸ್ತಕೋದ್ಯಮದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ’ ಎಂದು ವಸುಧೇಂದ್ರ ತಿಳಿಸಿದರು.

ಜೋಗಿ, ‘ಕನ್ನಡ ಪುಸ್ತಕೋದ್ಯಮಕ್ಕೆ ಮಾರುಕಟ್ಟೆ ಇದೆ ಎಂಬುದು ಕೋವಿಡ್ ಕಾಲದಲ್ಲಿ ಅರಿವಿಗೆ ಬಂದಿದೆ. ಕೆಲ ಧಾರಾವಾಹಿಗಳು ಮರುಪ್ರಸಾರ ಕಂಡ ಕಾರಣ ಜನರಿಗೆ ಅದು ಬೇಸರವನ್ನುಂಟು ಮಾಡಿತು. ಒಟಿಟಿ ವೇದಿಕೆಯಲ್ಲಿ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರ ಹಾಗೂ ಸರಣಿಗಳನ್ನು ವೀಕ್ಷಿಸಿದರೂ, ಓದಲು ಮಾತ್ರ ಕನ್ನಡ ಪುಸ್ತಕಗಳನ್ನೇ ಆಯ್ದುಕೊಂಡರು. ಲೇಖಕರು ಕೂಡ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳನ್ನು ಓದಲು ಸಾಧ್ಯವಾಯಿತು. ಕನ್ನಡ ಪುಸ್ತಕೋದ್ಯಮಕ್ಕೆ ಇದು ಪುನರುತ್ಥಾನದ ಕಾಲ’ ಎಂದರು.

ನಿದ್ದೆಗೆ ಅವಕಾಶ: ‘ನನಗೆ ನಿದ್ದೆ ಮತ್ತು ನಾಳೆಯ ಮೇಲೆ ಅತಿಯಾದ ಪ್ರೀತಿಯಿದೆ. ಕೋವಿಡ್ ಕಾರಣ ಯಾರೂ ಮನೆಯ ಕಡೆ ಬರಲಿಲ್ಲ. ಇದರಿಂದ ನಿದ್ದೆ ಮಾಡಲು ಪೂರಕ ವಾತಾವರಣ ನಿರ್ಮಾಣವಾದಂತಾಗಿತ್ತು. ನನ್ನ ಮನಸ್ಸು ವಿಚಲಿತವಾಗುವ ಕಾರಣ ಕಾದಂಬರಿಯ ಬದಲು ಪದ್ಯವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಪದ್ಯಗಳನ್ನಾದರೆ ಬೇಗ ಬರೆದು ಮುಗಿಸಬಹುದು. ಈ ನಡುವೆ ನನ್ನ ಶಿಷ್ಯರಿಗೆ ‘ಊರು ಕೇರಿ’ಯ ನಾಲ್ಕನೇ ಸಂಪುಟ ಬರೆಯುವುದಾಗಿ ಭರವಸೆ ನೀಡಿದ್ದೇನೆ’ ಎಂದು ಸಿದ್ಧಲಿಂಗಯ್ಯ ವಿವರಿಸಿದರು.

ನಾಗತಿಹಳ್ಳಿ ಚಂದ್ರಶೇಖರ್, ‘ಕೋವಿಡ್ ಓದುಗರಿಗೆ ವರದಾನವಾಯಿತು. ನಾನು  ಏಕಾಂತವನ್ನು ಪುಸ್ತಕದ ಜತೆಗೆ ಗುರುತಿಸಿಕೊಂಡೆ. ಆತ್ಮಚರಿತ್ರೆ ಹಾಗೂ ಜೀವನಚರಿತ್ರೆಗಳನ್ನು ಹೆಚ್ಚಾಗಿ ಓದಿದೆ’ ಎಂದರು.

‌‘ವೀರಪ್ಪನ್‌ನ ಮುಂದಿನ ಟಾರ್ಗೆಟ್ ಆಗಿದ್ದೆ’
‘ಕಾಡುಗಳ್ಳ ವೀರಪ್ಪನ್‌ನ ಪ್ರಕರಣದಲ್ಲಿ ಹಲವು ಸಹೋದ್ಯೋಗಿಗಳು ಮರಣ ಹೊಂದಿದ್ದರು. ವೀರಪ್ಪನ್ ಒಬ್ಬರ ಮೇಲೆ ಗುರಿ ಇಟ್ಟರೆ ಅವರನ್ನು ಉಳಿಸುತ್ತಿರಲಿಲ್ಲ. ಅವನ ಮುಂದಿನ ಟಾರ್ಗೆಟ್ ನಾನೇ ಎನ್ನುವುದು ಗುಪ್ತಚರ ಮಾಹಿತಿಯಿಂದ ತಿಳಿಯಿತು. ಒಂದು ವೇಳೆ ನಾನು ಮೃತಪಟ್ಟರೆ ಸಮಾಜವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಪತ್ನಿಗೆ ಆ ವೇಳೆ ತರಬೇತಿಯನ್ನು ನೀಡಿದೆ. ಏನೇನು ಮಾಡಬೇಕು? ಏನೇನು ಮಾಡಬಾರದು ಎಂಬುದನ್ನೂ ಬರೆದಿಟ್ಟಿದ್ದೆ’ ಎಂದು ಟೈಗರ್ ಅಶೋಕ್ ಕುಮಾರ್ ಹಳೆಯ ದಿನಗಳನ್ನು ನೆನಪಿಸಿಕೊಂಡರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು