ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ ಕಾರಂತ ಬಡಾವಣೆಗೆ 416 ಎಕರೆ ಜಮೀನು ನೀಡಲು ನಿರ್ದೇಶನ

ಬಿಡಿಎಗೆ ಭೂಮಿ ಹಸ್ತಾಂತರಿಸುವಂತೆ ಕಂದಾಯ ಇಲಾಖೆಗೆ ಸೂಚಿಸಿದ ಸುಪ್ರೀಂ ಕೋರ್ಟ್‌
Last Updated 12 ಸೆಪ್ಟೆಂಬರ್ 2021, 18:13 IST
ಅಕ್ಷರ ಗಾತ್ರ

ನವದೆಹಲಿ: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಅಧಿಸೂಚನೆಯಾಗಿರುವ 416 ಎಕರೆ 13 ಗುಂಟೆ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಕಂದಾಯ ಇಲಾಖೆಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್‌. ಅಬ್ದುಲ್‌ ನಜೀರ್‌ ಮತ್ತು ಸಂಜೀವ್‌ ಖನ್ನಾ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿದೆ.

ಜಮೀನನ್ನು ತನ್ನ ಸುಪರ್ದಿಗೆ ಪಡೆದ ಬಳಿಕ, ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಹಂಚಿಕೆಯಾಗುವ ನಿವೇಶನದ ಹಕ್ಕಿನ ಬಗ್ಗೆ ಪ್ರಮಾಣಪತ್ರ ನೀಡಬೇಕು. 40:60 ಯೋಜನೆ ಅಥವಾ ಸ್ವಯಂ ಪ್ರೇರಿತ ಜಮೀನು ಒಪ್ಪಿಸುವ ಯೋಜನೆ ಅಡಿಯಲ್ಲಿ ಈ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಬಿಡಿಎಗೆ ಸೂಚಿಸಿದೆ.

ಇದುವರೆಗೆ ಈ ರೀತಿಯ ಪ್ರಮಾಣ ಪತ್ರಗಳನ್ನು ವಿವಿಧ ಕಾರಣಗಳಿಗಾಗಿ ನೀಡದೆ ಇದ್ದರೆ, ನಾಲ್ಕು ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.

ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡಿಎ ಆಯುಕ್ತರು ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ಪೀಠವು, ಕಂದಾಯ ನಿವೇಶನ ಹೊಂದಿದವರಿಂದ 2021ರ ಅಕ್ಟೋಬರ್‌ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತು. ಅವಧಿ ವಿಸ್ತರಿಸಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆಯೂ ಸೂಚಿಸಿದೆ.

ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ಸಮಿತಿ ಜತೆ ಸಮಾಲೋಚನೆ ನಡೆಸಿ ಮುಂದಿನ 15 ದಿನಗಳ ಒಳಗೆ ಬಡಾವಣೆಗೆ ಸಂಬಂಧಿಸಿದ ವರದಿ ಸಲ್ಲಿಸಬೇಕು ಎಂದು ತಿಳಿಸಿದೆ.

ವರ್ಗಾವಣೆಗೆ ಆಕ್ಷೇಪ:

ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಎಚ್‌.ಆರ್‌.ಶಾಂತಾರಾಜಣ್ಣ ಅವರ ವರ್ಗಾವಣೆ ಮಾಡಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

‘2021ರ ಆಗಸ್ಟ್‌ 19ರಂದು ಆದೇಶ ನೀಡಿದ್ದರೂ ಶಾಂತಾರಾಜಣ್ಣ ಅವರನ್ನು ಇನ್ನೊಂದು ಇಲಾಖೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ರಾಜ್ಯ ಸರ್ಕಾರ ಮತ್ತೆ ಅವರನ್ನು ಅದೇ ಸ್ಥಳಕ್ಕೆ ಮರು ವರ್ಗಾವಣೆ ಮಾಡಬೇಕು’ ಎಂದು ನಿರ್ದೇಶನ ನೀಡಿದೆ.

ಬಿಡಿಎನಲ್ಲಿನ ಇತರ ಜವಾಬ್ದಾರಿಗಳ ಜತೆಗೆ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾಗಿದ್ದ ಶಾಂತಾರಾಜಣ್ಣ ಅವರು, ಡಾ. ಶಿವರಾಮ ಕಾರಂತ ಬಡಾವಣೆಯ ಉಸ್ತುವಾರಿ ವಹಿಸಿಕೊಂಡಿದನ್ನು ನ್ಯಾಯಾಲಯ ಪರಿಗಣಿಸಿ ಈ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT