ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ವಂಚನೆ: 82 ಖಾತೆಗಳಿಗೆ ₹2.77 ಕೋಟಿ ತುಂಬಿದ್ದ ಸಿಂಧನೂರು ಶಿಕ್ಷಕಿ

ಪಾರ್ಟ್‌ಟೈಮ್ ಕೆಲಸ ವಂಚನೆ ಜಾಲ- ಚಿನ್ನ, ಮನೆ ಅಡವಿಟ್ಟು ಹಣ ಕಳುಹಿಸಿದ್ದ ಶಿಕ್ಷಕಿ- ಸಿಐಡಿಗೆ ಪತ್ರ ಬರೆಯಲು ಚಿಂತನೆ ?
Published 13 ಫೆಬ್ರುವರಿ 2024, 16:20 IST
Last Updated 13 ಫೆಬ್ರುವರಿ 2024, 16:20 IST
ಅಕ್ಷರ ಗಾತ್ರ

ರಾಯಚೂರು/ಬೆಂಗಳೂರು: ಅರೆಕಾಲಿಕ (ಪಾರ್ಟ್‌ಟೈಂ) ಕೆಲಸದ ಸೋಗಿನಲ್ಲಿ ಸಿಂಧನೂರು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರಿಂದ ₹ 2.77 ಕೋಟಿ ಪಡೆದು ವಂಚಿಸಿರುವ ಪ್ರಕರಣದ ತನಿಖೆ ನಡೆಸುತ್ತಿರುವ ರಾಯಚೂರು ಪೊಲೀಸರು, ಸೈಬರ್ ವಂಚಕರ 82 ಖಾತೆಗಳಿಗೆ ಹಣ ಜಮೆ ಆಗಿರುವುದನ್ನು ಪತ್ತೆ ಮಾಡಿದ್ದಾರೆ.

ಮಸ್ಕಿ ನಿವಾಸಿಯಾದ 38 ವರ್ಷದ ಶಿಕ್ಷಕಿ, ಬಿಡುವಿನ ಅವಧಿಯಲ್ಲಿ ಅರೆಕಾಲಿಕ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸಲು ಮುಂದಾಗಿದ್ದರೆಂದು ಗೊತ್ತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಸಂದೇಶ ನಂಬಿ ₹2.77 ಕೋಟಿ ಕಳೆದುಕೊಂಡಿದ್ದಾರೆ.

2023ರ ಸೆಪ್ಟೆಂಬರ್‌ನಿಂದ 2024ರ ಜನವರಿ 12ರವರೆಗಿನ ಅವಧಿಯಲ್ಲಿ ನಡೆದಿರುವ ವಂಚನೆ ಬಗ್ಗೆ ಶಿಕ್ಷಕಿ, ರಾಯಚೂರು ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ಅಪರಾಧ) ಠಾಣೆಗೆ ಜ. 14ರಂದು ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಇನ್‌ಸ್ಪೆಕ್ಟರ್ ಮಂಜುನಾಥ್, ತನಿಖೆ ಮುಂದುವರಿಸಿದ್ದಾರೆ.

ಇನ್‌ಸ್ಟಾಗ್ರಾಂ ಜಾಹೀರಾತು: ‘ಸ್ನಾತಕೋತ್ತರ ಪದವೀಧರರಾದ ಶಿಕ್ಷಕಿ, ಶಾಲಾ ಅವಧಿ ಮುಗಿದ ನಂತರ ಹಾಗೂ ರಜಾ ದಿನಗಳಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ಹುಡುಕಾಡುತ್ತಿದ್ದರು. ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದ ಶಿಕ್ಷಕಿ, ‘ಮನೆಯಿಂದಲೇ ಕೆಲಸ ಮಾಡಿ ಲಕ್ಷ ಲಕ್ಷ ದುಡಿಯಿರಿ’ ಎಂಬ ಜಾಹೀರಾತು ನೋಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಾಹೀರಾತು ಪ್ರಕಟಗೊಂಡಿದ್ದ ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿದ್ದರು. ಪ್ರತಿಕ್ರಿಯಿಸಿದ್ದ ಆರೋಪಿಗಳು, ‘ನಮ್ಮ ಕಂಪನಿಯಿಂದ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡುತ್ತೇವೆ. ನೀವು ಏಜೆನ್ಸಿಯಾಗಿ ಕೆಲಸ ಮಾಡಬೇಕು. ನಾವು ಗ್ರಾಹಕರ ವಿವರ ನೀಡುತ್ತೇವೆ. ಅವರ ಹೆಸರಿನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬೇಕು. ಇದರಿಂದ ಪ್ರತಿ ನಿತ್ಯ
₹ 1 ಸಾವಿರದಿಂದ ₹ 3,600 ಗಳಿಸಬಹುದು’ ಎಂದಿದ್ದರು. ಅದನ್ನು ನಂಬಿದ್ದ ಶಿಕ್ಷಕಿ, ಆರೋಪಿಗಳು ಕಳುಹಿಸಿದ್ದ ಜಾಲತಾಣವೊಂದರ ಲಿಂಕ್ ತೆರೆದು ವೈಯಕ್ತಿಕ ಮಾಹಿತಿ ನಮೂದಿಸಿ ನೋಂದಣಿ ಮಾಡಿಕೊಂಡಿದ್ದರು’ ಎಂದು ತಿಳಿಸಿವೆ.

‘ನೋಂದಣಿಯಾದ ನಂತರ ಜಾಲತಾಣದ ಮೂಲಕ ಮೊದಲ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಅದನ್ನು ಮೆಚ್ಚಿದ್ದ ಆರೋಪಿಗಳು, ಶಿಕ್ಷಕಿ ಖಾತೆಗೆ ಲಾಭಾಂಶದ ಹಣ ಹಾಕಿದ್ದರು. ಆರೋಪಿಗಳನ್ನು ಮತ್ತಷ್ಟು ನಂಬಿದ್ದ ಶಿಕ್ಷಕಿ, ಟಿಕೆಟ್ ಬುಕ್ಕಿಂಗ್ ಮುಂದುವರಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಚಿನ್ನ, ಮನೆ ಅಡವಿಟ್ಟಿದ್ದ ಶಿಕ್ಷಕಿ: ‘ಮತ್ತಷ್ಟು ಟಿಕೆಟ್ ಬುಕ್ಕಿಂಗ್ ಮಾಡಿದ್ದ ಶಿಕ್ಷಕಿಯ ಜಾಲತಾಣದ ಖಾತೆಗೆ ಹಣ ಜಮೆ ಆಗಿತ್ತು. ಆದರೆ, ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಆರೋಪಿಗಳು ಹೇಳಿದ್ದರು. ಕೆಲ ಶುಲ್ಕ ಪಾವತಿ ಮಾಡಬೇಕೆಂದು ತಿಳಿಸಿದ್ದರು. ಅದನ್ನು ನಂಬಿದ್ದ ಶಿಕ್ಷಕಿ, ಹಣ ಪಾವತಿಸಿದ್ದರು. ಬುಕ್ಕಿಂಗ್ ಮುಂದುವರಿಸಿದ್ದರು. ಜಾಲತಾಣದಲ್ಲಿದ್ದ ಖಾತೆಯಲ್ಲಿ ಹಣದ ಪ್ರಮಾಣ ಹೆಚ್ಚುತ್ತಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಹಿಂದೇಟು ಹಾಕಿದ್ದ ಆರೋಪಿಗಳು, ವಿವಿಧ ಶುಲ್ಕ ಹಾಗೂ ಕಾರಣಗಳನ್ನು ನೀಡಿ ಶಿಕ್ಷಕಿಯಿಂದ ಹಂತ ಹಂತವಾಗಿ ₹ 2.77 ಕೋಟಿ ಪಡೆದುಕೊಂಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿದ್ದ ಸಂಬಳ ಹಾಗೂ ಉಳಿಕೆಯ ಹಣವನ್ನೆಲ್ಲ ಆರೋಪಿಗಳು ಹೇಳಿದ್ದ ಖಾತೆಗೆ ಶಿಕ್ಷಕಿ ಜಮೆ ಮಾಡಿದ್ದರು. ಜೊತೆಗೆ, ಚಿನ್ನ ಹಾಗೂ ಮನೆಯ ದಾಖಲೆಗಳನ್ನು ಅಡವಿಟ್ಟು ಉಳಿದ ಹಣ ಹೊಂದಿಸಿ ಆರೋಪಿಗಳಿಗೆ ನೀಡಿದ್ದರು.’

‘ಸಹೋದ್ಯೋಗಿಗಳು, ಸ್ನೇಹಿತರು, ಕುಟುಂಬಸ್ಥರು ಹಾಗೂ ಇತರರ ಬಳಿಯೂ ತನ್ನ ಟಿಕೆಟ್ ಬುಕ್ಕಿಂಗ್ ಏಜೆನ್ಸಿ ಲಾಭದ ಬಗ್ಗೆ ಹೇಳಿದ್ದರು. ಅವರಿಂದಲೇ ತಲಾ ₹ 5 ಲಕ್ಷದಿಂದ ₹ 15 ಲಕ್ಷದವರೆಗೂ ಪಡೆದು ಆರೋಪಿಗಳಿಗೆ ಕೊಟ್ಟಿದ್ದರು. ಆದರೆ, ಆರೋಪಿಗಳು ಯಾವುದೇ ಹಣ ವಾಪಸು ಕೊಟ್ಟಿಲ್ಲ. ಇದರಿಂದ ಬೇಸತ್ತು ಶಿಕ್ಷಕಿ ಠಾಣೆ ಮೆಟ್ಟಿಲೇರಿದಿದ್ದಾರೆ. ಹಣ ನೀಡಿದ್ದ ಆಪ್ತರು, ವಾಪಸು ನೀಡುವಂತೆ ಮಹಿಳೆಗೆ ಒತ್ತಾಯಿಸುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

₹ 14 ಲಕ್ಷವಿದ್ದ ಖಾತೆಗಳ ವಹಿವಾಟು ಸ್ಥಗಿತ: ರಾಯಚೂರು ಸೆನ್ ಪೊಲೀಸರು, ಆರೋಪಿಗಳ 7 ಖಾತೆಯಲ್ಲಿದ್ದ ₹ 14 ಲಕ್ಷ ಹಣದ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಆರೋಪಿಗಳ ಉಳಿದ ಖಾತೆಗಳು ಖಾಲಿಯಾಗಿದ್ದು, ಅವುಗಳ ಹಣ ವರ್ಗಾವಣೆ ಮಾಹಿತಿ ಕಲೆಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT