ಗುರುವಾರ , ಡಿಸೆಂಬರ್ 1, 2022
20 °C

ಬೆಂಗಳೂರು– ಶಾಲೆ ಬಳಿ ದಟ್ಟಣೆ: ಜನರಿಗೆ ನಿತ್ಯ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಪ್ರಮುಖ ಶಾಲಾ ವಲಯದ ರಸ್ತೆಗಳಲ್ಲಿ ನಿತ್ಯವೂ ಉಂಟಾಗುತ್ತಿರುವ ವಾಹನಗಳ ದಟ್ಟಣೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಷಯದ ಮೇಲೆ ಸೆಪ್ಟೆಂಬರ್‌ 21ರಂದು ‘ಪ್ರಜಾವಾಣಿ’ಯು‘ಶಾಲಾ ವಲಯ: ದಟ್ಟಣೆ ತಾಪತ್ರಯ’ ಎನ್ನುವ ವರದಿಯ ಮೂಲಕ ಬೆಳಕು ಚೆಲ್ಲಿತ್ತು.

ಈ ಸಮಸ್ಯೆಯನ್ನು ನಿತ್ಯ ಅನುಭವಿಸುತ್ತಿರುವ ಕೆಲವು ನಾಗರಿಕರನ್ನು ಪತ್ರಿಕೆಯು ಮಾತನಾಡಿಸಿತು. ಪರಿಹಾರ ಸೂಚಿಸುವಂತೆ ಆಗ್ರಹಿಸಿ ಶಾಲಾ ಆಡಳಿತ ಮಂಡಳಿ ಹಾಗೂ ಸಂಚಾರ ಪೊಲೀಸರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲವೆಂದು ಜನರು ದೂರುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.

ಶಾಲೆ ಆರಂಭವಾಗುವ ಹಾಗೂ ಬಿಡುವ ಸಮಯದಲ್ಲಿ ರಸ್ತೆಗಳ ಮೇಲೆಯೇ ಪೋಷಕರು ಹಾಗೂ ಇತರರು ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಎಲ್ಲ ಪ್ರಕಾರದ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅರ್ಧ ಕಿ.ಮೀ ದೂರದ ರಸ್ತೆ ದಾಟಲು 15 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿರುವುದಾಗಿ ಜನರು ಹೇಳುತ್ತಿದ್ದಾರೆ.

ಶಾಲಾ ಮಕ್ಕಳನ್ನು ಕರೆತರುವ ಪೋಷಕರು ಹಾಗೂ ಖಾಸಗಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಈ ಸ್ಥಳದಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು. ಆಡಳಿತ ಮಂಡಳಿಯವರು ಕಡಿಮೆ ಪಾರ್ಕಿಂಗ್ ಶುಲ್ಕ ನಿಗದಿಪಡಿಸಿ ಮೈದಾನದಲ್ಲಿ ವಾಹನ ನಿಲ್ಲಿಸಲು ಅವಕಾಸ ಕಲ್ಪಿಸಬೇಕು.

ಮುನಿಸ್ವಾಮಿ, ಚಾಲಕ, ವಿಲ್ಸನ್ ಗಾರ್ಡನ್

ಶಾಲೆ ಆರಂಭ ಹಾಗೂ ಬಿಡುವ ಸಮಯದಲ್ಲಿ ಸಾಕಷ್ಟು ದಟ್ಟಣೆ ಉಂಟಾಗುತ್ತಿದೆ. ಶಾಲೆಗಳಿರುವ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು. ಪೋಷಕರು ಹಾಗೂ ಶಾಲೆಗೆ ಸಂಬಂಧಪಟ್ಟ ಎಲ್ಲ ವಾಹನಗಳನ್ನು ಮೈದಾನದೊಳಗೆ ಕಳುಹಿಸಬೇಕು.

ತಮ್ಮೇಗೌಡ, ಸುಬ್ರಹ್ಮಣ್ಯನಗರ, ಖಾಸಗಿ ಕಂಪನಿ ಉದ್ಯೋಗಿ

ಮಕ್ಕಳನ್ನು ಶಾಲೆಗೆ ಕರೆತರುವ ಹಾಗೂ ಕರೆದೊಯ್ಯುವ ಪೋಷಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಆಡಳಿತ ಮಂಡಳಿ ಜವಾಬ್ದಾರಿ. ಜೊತೆಗೆ ಶಾಲೆ ಬಳಿಯ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ರಸ್ತೆ ಮೇಲೆ ವಾಹನ ನಿಲ್ಲಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

ವಿನಯ್, ಮಹದೇವಪುರ, ಕಚೇರಿಯೊಂದರ ಉದ್ಯೋಗಿ

ಹೆಚ್ಚು ದಟ್ಟಣೆ ಆಗುವ ರೆಸಿಡೆನ್ಸಿ ರಸ್ತೆಯ ಮಧ್ಯೆ ವಿಭಜಕ ನಿರ್ಮಿಸಬೇಕು. ಶಾಲೆ ಆರಂಭ ಹಾಗೂ ಬಿಡುವ ವೇಳೆಯಲ್ಲಿ ಶಾಲೆ ಪಕ್ಕದ ರಸ್ತೆಯನ್ನು ಮಕ್ಕಳ ಪೋಷಕರ ವಾಹನಗಳಿಗೆ ಮಾತ್ರ ಮೀಸಲಿಡಬೇಕು. ಇತರೆ ವಾಹನಗಳನ್ನು ಇನ್ನೊಂದು ಬದಿಯ ರಸ್ತೆಯಲ್ಲಿ ಹೋಗಲು ಅವಕಾಶ ಮಾಡಿಕೊಡಬೇಕು

ವಿ. ವೆಂಕಟಸುಬ್ರಹ್ಮಣ್ಯಂ, ಬಾಣಸವಾಡಿ

ಮ್ಯೂಸಿಯಂ ರಸ್ತೆಯ ಸೇಂಟ್ ಜೋಸೆಫ್ ಕಾಲೇಜು ಎದುರಿನ ರಸ್ತೆಯಲ್ಲೂ ವಿಪರೀತ ದಟ್ಟಣೆ ಇದ್ದು, ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಬೇಕು. ರಸ್ತೆ ಮಧ್ಯೆಯೇ ವಾಹನ ನಿಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಆಸಿಫ್, ಎಚ್‌ಬಿಆರ್ ಲೇಔಟ್, ಚಾಲಕ

ಶಾಲೆ ಬಳಿ ಬರುವ ಪೋಷಕರು ಹಾಗೂ ಇತರರ ವಾಹನಗಳು, ರಸ್ತೆ ಮೇಲೆಯೇ ನಿಲ್ಲಿಸುತ್ತಿರುವುದರಿಂದ ದಟ್ಟಣೆ ಉಂಟಾಗುತ್ತಿದೆ. ಇಂಥ ವಾಹನಗಳನ್ನು ಶಾಲೆಗಳ ಮೈದಾನದೊಳಗೆ ಬಿಡಬೇಕು.

ನೀರಜ್, ಕೆ.ಆರ್.ಪುರ

ವಿಪರೀತ ದಟ್ಟಣೆಗೆ ಶಾಲೆಯ ಆಡಳಿತ ಮಂಡಳಿಗಳೇ ಕಾರಣ. ಪೋಷಕರ ವಾಹನಗಳನ್ನು ಶಾಲೆಯ ಮೈದಾನದೊಳಗೆ ನಿಲ್ಲಿಸಿದರೆ ಮಾತ್ರ ದಟ್ಟಣೆ ಸ್ವಲ್ಪ ಕಡಿಮೆಯಾಗುತ್ತದೆ.

ಲಕ್ಷ್ಮಿ, ಹಳೇ ಏರ್‌ಪೋರ್ಟ್ ರಸ್ತೆ

ದ್ವಿಚಕ್ರ ವಾಹನ, ಕಾರು... ಹೀಗೆ ಸ್ವಂತ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವುದನ್ನು ನಿರ್ಬಂಧಿಸಬೇಕು. ಬಸ್‌ ಹಾಗೂ ಇತರೆ ಸಾರ್ವಜನಿಕ ಸಾರಿಗೆ ಬಳಸುವಂತೆ ಪೋಷಕರಿಗೆ ತಿಳಿ ಹೇಳಬೇಕು

ಸನ್ಮತಿ, ಶಾಂತಿನಗರ

ಶಾಲೆ ಬಳಿಯ ದಟ್ಟಣೆ ಸಮಸ್ಯೆ ಹಲವು ವರ್ಷಗಳಿಂದ ಇದೆ. ಇದು ಬಗೆಹರಿಯದ ಸಮಸ್ಯೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಅಹಿಕ್‌ ಅಹ್ಮದ್, ಆಸ್ಟಿನ್ ಟೌನ್

ಪ್ರತಿಯೊಂದು ಶಾಲೆ ಎದುರಿನ ರಸ್ತೆಗಳನ್ನು ವಿಸ್ತರಣೆ ಮಾಡಬೇಕು. ತಾತ್ಕಾಲಿಕವಾಗಿ ಶಾಲೆ ಆಡಳಿತ ಮಂಡಳಿಯವರು, ಪೋಷಕರ ವಾಹನಗಳಿಗೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.

ಬಾಲಕೃಷ್ಣ, ಶಾಂತಲಾ ನಗರ

ಶಾಲೆ ಎದುರಿನ ರಸ್ತೆಗಳಲ್ಲಿ ಮೇಲ್ಸೇತುವೆ ನಿರ್ಮಿಸುವುದು ಉತ್ತಮ. ದಟ್ಟಣೆ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು.

ಮೊಹಮ್ಮದ್, ಶಾಂತಿನಗರ

ಶಾಲೆ ಆರಂಭ ಹಾಗೂ ಬಿಡುವ ಸಮಯದಲ್ಲಿ ಪೋಷಕರ ವಾಹನಗಳಿಗೆ ರಸ್ತೆಯ ಒಂದು ಬದಿಯಲ್ಲಿ ಪ್ರತ್ಯೇಕ ಲೇನ್ ಮಾಡಬೇಕು.

ಸಂತೋಷ್ ಕೆ.ಜೆ

 

---

 

ನಿಮ್ಮಲ್ಲೂ ಈ
ಸಮಸ್ಯೆ ಇದೆಯೇ?

ಶಾಲಾ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹಾಗೂ ಪಾರ್ಕಿಂಗ್‌ ಕಿರಿಕಿರಿಯನ್ನು ನೀವೂ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಸಮಸ್ಯೆಯ ಸ್ವರೂಪವನ್ನು ಬರೆದು ಕಳುಹಿಸಿ. ಅದಕ್ಕೆ ಕ್ರಿಯಾತ್ಮಕ ಪರಿಹಾರವಿದ್ದಲ್ಲಿ ಅದನ್ನೂ ಸೂಚಿಸಿ. ಆಯ್ದ ಬರಹಗಳನ್ನು ’ಪ್ರಜಾವಾಣಿ‘ಯಲ್ಲಿ ಪ್ರಕಟಿಸಲಾಗುವುದು. ನಿಮ್ಮ ಬರಹ 50 ಪದಗಳ ಮಿತಿಯಲ್ಲಿರಲಿ. ಯಾವ ಶಾಲೆಯ ಬಳಿ ಸಮಸ್ಯೆ ಇದೆ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಿ. ನಿಮ್ಮ ಹೆಸರು, ಪೂರ್ಣ ವಿಳಾಸವೂ ಇರಲಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು