ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಾರಾಮ್‌ ‘ಕೈ’ ಬಿಡದಂತೆ ಆಗ್ರಹ

ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಬೆಂಬಲಿಗರ ಒತ್ತಾಯ
Last Updated 4 ಜುಲೈ 2022, 19:47 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಟಿಕೆಟ್‌ ಕೈ ತಪ್ಪಿದ ಕಾರಣಕ್ಕೆ ಮುನಿಸಿಕೊಂಡಿರುವ ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್. ಸೀತಾರಾಮ್‌ ಅವರು ಪಕ್ಷ ತೊರೆಯದಂತೆ ಮನವೊಲಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುಖಂಡರು, ಕಾರ್ಯಕರ್ತರು, ಬಲಿಜ ಸಮುದಾಯದ ಪ್ರಮುಖರು ರಾಜ್ಯ ಕಾಂಗ್ರೆಸ್‌ ನಾಯಕರನ್ನು ಒತ್ತಾಯಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಸೋಮವಾರ ಪ್ರತ್ಯೇಕವಾಗಿ ಭೇಟಿ ಮಾಡಿದ ಬೆಂಬಲಿಗರು, ‘ಸೀತಾರಾಮ್‌ ಅವರು ಬೇಸರಗೊಂಡಿದ್ದಾರೆ. ಅವರು ಕಾಂಗ್ರೆಸ್‌ ತ್ಯಜಿಸಿದರೆ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆಯ ಮೇಲೆ ಪರಿಣಾಮ ಬೀರಲಿದೆ’ ಎಂದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ, ಅದರಲ್ಲೂ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಲಿಜ ಸಮುದಾಯ ಪ್ರಬಲವಾಗಿದೆ. ಈ ಸಮುದಾಯದ ನಾಯಕರೂ ಆಗಿರುವ ಸೀತಾರಾಮ್‌ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಬೆಂಬಲಿಗರ ಜೊತೆ ಮಾತುಕತೆ ನಡೆಸಿದ ಸಿದ್ದರಾಮಯ್ಯ, ‘ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಪಕ್ಷದಿಂದ ಬಲಿಜ ಸಮುದಾಯದ ಪ್ರತಿನಿಧಿಗಳಿಲ್ಲ. ಹೀಗಾಗಿ, ಸೀತಾರಾಮ್‌ ಅವರಿಗೆ ಪರಿಷತ್ ಸ್ಥಾನ ನೀಡುವಂತೆ ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದೆ. ಆದರೆ, ಕಾರಣಾಂತರಗಳಿಂದ ಅದು ಆಗಲಿಲ್ಲ. 2018ರಲ್ಲಿ ವಿಧಾನಸಭಾ ಚುನಾವಣೆಗೆ ಮಲ್ಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದ್ದೆವು. ಕೊನೆಕ್ಷಣದಲ್ಲಿ ಅವರು ಒಲವು ತೋರಲಿಲ್ಲ’ ಎಂದು ಅವರು ಹೇಳಿದರು.

‘ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಸೀತಾರಾಮ್‌ ಅವರಿಗೆ ಹೇಳಿದ್ದೇನೆ. ಮುಂದೆ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತೇನೆ ಎಂದಿದ್ದೇನೆ. ಪುತ್ರ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದೇನೆ’ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಬಲಿಜ ಸಮುದಾಯದ ನಾಯಕರ ಸಭೆಯಲ್ಲಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಪಕ್ಷದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಶಾಸಕರಾದ ಶಿವಶಂಕರ ರೆಡ್ಡಿ, ಸುಬ್ಬಾರೆಡ್ಡಿ, ಮಾಜಿ ಶಾಸಕ ಎನ್‌. ಸಂಪಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT