ಬೆಂಗಳೂರು: ಮಲ್ಲೇಶ್ವರ ಕ್ಷೇತ್ರದ ಪ್ಯಾಲೇಸ್ ಗುಟ್ಟಹಳ್ಳಿಯ ವಿನಾಯಕ ವೃತ್ತದ 1ನೇ ಕ್ರಾಸ್ ಬಳಿಯ ನಿವಾಸಿಗಳು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯರಾದ ನಾಗರಾಜ್, ಶಾರದಮ್ಮ ಅವರು ಅಸ್ವಸ್ಥಗೊಂಡಿದ್ದು ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪುತ್ರನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನೂ ಹಲವರು ಕಲುಷಿತ ನೀರು ಸೇವಿಸಿ ವಾಂತಿಭೇದಿಯಿಂದ ಬಳಲುತ್ತಿದ್ದಾರೆ.
1ನೇ ಕ್ರಾಸ್ ಬಳಿ ಕುಡಿಯುವ ನೀರಿನ ಪೈಪ್ ಒಡೆದಿತ್ತು. ಆ ಪೈಪ್‌ಗೆ ಚರಂಡಿಯ ಕಲುಷಿತ ನೀರು ಸೇರಿಕೊಂಡಿತ್ತು. ಅದೇ ನೀರನ್ನು ಬಳಸಿದ್ದರಿಂದ ಕೆಲವರು ತೊಂದರೆ ಅನುಭವಿಸಿದರು. ಒಡೆದಿರುವ ಪೈಪ್ ಅನ್ನು ಇನ್ನೂ ದುರಸ್ತಿ ಪಡಿಸಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಶಾಸಕ ಸಿ.ಎನ್.ಅಶ್ವತ್ಥ್ ನಾರಾಯಣ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ನಾಗರಾಜ್ ಕುಟುಂಬದವರ ಆರೋಗ್ಯ ವಿಚಾರಿಸಿದರು. ಉತ್ತಮ ಚಿಕಿತ್ಸೆ ನೀಡುವಂತೆ ಶಾಸಕರು ವೈದ್ಯರಿಗೆ ಸೂಚನೆ ನೀಡಿದರು.
ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುವ ಕಲುಷಿತ ನೀರನ್ನು ಬಳಸಬಾರದು, ಹೊರಹಾಕಬೇಕು ಎಂದು ಜಾಗೃತಿ ಮೂಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.