ಶನಿವಾರ, ಡಿಸೆಂಬರ್ 3, 2022
26 °C
ನಕಲಿ ವೈದ್ಯನ ಬಂಧಿಸಿದ ಸಿಸಿಬಿ ಪೊಲೀಸರು, ಆಂಧ್ರಪ್ರದೇಶದಲ್ಲಿ ಸೆರೆ

ಚಿಕಿತ್ಸೆಗೆ ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಯುರ್ವೇದ ಚಿಕಿತ್ಸೆ ನೀಡುವ ನೆಪದಲ್ಲಿ ಯುವತಿಯರು ಹಾಗೂ ಮಹಿಳೆಯರ ಬಟ್ಟೆ ತೆಗೆಸಿ ಅಶ್ಲೀಲ ದೃಶ್ಯ ಚಿತ್ರೀಕರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಆಂಧ್ರಪ್ರದೇಶದ ಗುತ್ತಿಯ ತಾಡಪತ್ರಿಯಲ್ಲಿ ಬಂಧಿಸಿದ್ದಾರೆ.

ಮತ್ತೀಕೆರೆಯ ವೆಂಕಟರಮಣ (57) ಬಂಧಿತ ನಕಲಿ ವೈದ್ಯ. ‘ಯಶವಂತಪುರ ಸಮೀಪದ ಮತ್ತೀಕೆರೆಯ ತನ್ನ ಮನೆಯ ಒಂದು ಕೊಠಡಿಯಲ್ಲಿ ಆರೋಪಿ ಅಕ್ಯೂಪಂಚರ್‌ ಚಿಕಿತ್ಸೆ ನೀಡುವುದಾಗಿ ಕ್ಲಿನಿಕ್‌ ಆರಂಭಿಸಿದ್ದ. ಚಿಕಿತ್ಸೆಗೆ ಬರುವ ಮಹಿಳೆಯರ ಬಟ್ಟೆ ತೆಗೆಸಿ ಅವರ ಖಾಸಗಿ ಅಂಗಾಂಗ ಮುಟ್ಟುವುದು ಹಾಗೂ ತಿಳಿಯದಂತೆ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ. ಈ ಸಂಬಂಧ ಯಶವಂತಪುರ, ಬಸವನಗುಡಿ ಹಾಗೂ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಹೊರ ರಾಜ್ಯಕ್ಕೆ ಪರಾರಿಯಾಗಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಮೆಜೆಸ್ಟಿಕ್‌ ಬಳಿ ಆಯುರ್ವೇದ ವೈದ್ಯರೊಬ್ಬರು ನಡೆಸಿಕೊಟ್ಟ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ. ಆರೋಪಿಗೆ ವೈದ್ಯರ ಪರಿಚಯವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ವೆಂಕಟರಮಣ, ಜಯನಗರದ 4ನೇ ಬ್ಲಾಕ್‌ನಲ್ಲಿ ಆಕ್ಯೂಪೈ ಇ.ಎಂ. ಇನ್‌ಸ್ಟಿಟ್ಯೂಟ್‌ನಲ್ಲಿ ಚಿಕಿತ್ಸೆ ತರಬೇತಿ ಪಡೆದುಕೊಂಡು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಆರಂಭಿಸಿದ್ದ. ತನ್ನ ಹೆಸರಿನ ಮುಂದೆ ‘ಡಾ’ ಎಂದೂ ಹಾಕಿಸಿಕೊಂಡಿದ್ದ. ನಾಲ್ಕು ವರ್ಷಗಳಿಂದ ಮತ್ತೀಕೆರೆಯ ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ. ಚಿಕಿತ್ಸೆಗೆ ಬಂದ ಮಹಿಳೆಯರು, ಯುವತಿಯರ ವಿಡಿಯೊ ಚಿತ್ರೀಕರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮರ್ಯಾದೆಗೆ ಅಂಜಿದ್ದ ಕೆಲವರು ಈ ಹಿಂದೆ ದೂರು ನೀಡಿರಲಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು