ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಶರಾವತಿ ನೀರು: ಪ್ರತಿಭಟನೆ

ಪ್ರಸ್ತಾವ ಕೈಬಿಡಲು ಒತ್ತಾಯ
Last Updated 3 ಜುಲೈ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿಗೆ ಶರಾವತಿ ನದಿ ನೀರು ತರುವ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಪ‌ಶ್ಚಿಮ ಘಟ್ಟದ ಪರಿಸರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮಲೆನಾಡಿನ ವಕೀಲರು ನಗರದ ಪುರಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

‘ಮಲೆನಾಡಿನ ಹೆಬ್ಬಾಗಿಲು ಆಗಿರುವ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರ ಗಮನಕ್ಕೆ ತಾರದೆ ಹಾಗೂ ಅಭಿಪ್ರಾಯ ಪಡೆಯದೆಯೇ ಶರಾವತಿ ನೀರನ್ನು ಬೆಂಗಳೂರಿಗೆ ಹರಿಸಲು ಮುಂದಾಗಿರುವುದು ಅಕ್ಷಮ್ಯ. ಇದು ಪ್ರಜಾಪ್ರಭುತ್ವದ ನೀತಿಗೆ ವಿರುದ್ಧವಾದುದು’ ಎಂದುಪ್ರತಿ ಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ಐವತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರ ಎರಡು ಜಿಲ್ಲೆಗಳಲ್ಲಿ ಸೂಪಾ, ಗೇರುಸೊಪ್ಪೆ, ಲಿಂಗನಮಕ್ಕಿ, ವಾರಾಹಿ ಸೇರಿದಂತೆ 18 ಅಣೆಕಟ್ಟೆಗಳನ್ನು ನಿರ್ಮಿಸಿದೆ. ಇದರಿಂದ ಸಾವಿರಾರು ಕೃಷಿ ಕುಟುಂಬಗಳು ಹಾಗೂ ಕೃಷಿ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗಿವೆ. ಈ ಕುಟುಂಬಗಳಿಗೆ ಪುನರ್‌ವಸತಿ ಕಲ್ಪಿಸಲು ಸರ್ಕಾರ ವಿಫಲವಾಗಿದೆ. ವಿದ್ಯುತ್‌ ಯೋಜನೆಗಳಿಂದ ಮಲೆನಾಡಿನ ಸಾವಿರ ಹೆಕ್ಟೇರ್‌ ಅರಣ್ಯ ನಾಶವಾಗಿದೆ. ಈ ಅಣೆಕಟ್ಟೆಗಳ ನೀರನ್ನು ವಿದ್ಯುತ್‌ ಉತ್ಪಾದನೆಗೆ ಮಾತ್ರ ಬಳಸಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಹಿರಿಯ ವಕೀಲ ದಿವಾಕರ್‌ ಒತ್ತಾಯಿಸಿದರು.

‘ಬೆಂಗಳೂರಿಗೆ ನೀರನ್ನು ಹರಿಸುವ ಯೋಜನೆ ಕಾರ್ಯರೂಪಕ್ಕೆ ಬಂದರೆ ಶರಾವತಿ ನದಿಯ ಕೆಳಭಾಗದಲ್ಲಿ ನೀರಿನ ಹರಿವು ಕಡಿಮೆಯಾಗಿ ವಿದ್ಯುತ್‌ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಅಲ್ಲದೆ, ಹೊನ್ನಾವರ ತಾಲ್ಲೂಕಿನ 1 ಸಾವಿರ ಹೆಕ್ಟೇರ್ ಕೃಷಿ ಭೂಮಿ ವ್ಯವಸಾಯ ಯೋಗ್ಯವಲ್ಲದ ಭೂಮಿಯಾಗಿ ಪರಿವರ್ತನೆ ಹೊಂದುತ್ತದೆ. ಮೀನುಗಾರಿಕೆಗೆ ಸಹ ಆಪತ್ತು ಎದುರಾಗುತ್ತದೆ’ ಎಂದು ಅವರು ಹೇಳಿದರು.

ಶರಾವತಿ ಕಣಿವೆಯು ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ಎಂದು ಮಾಧವ ಗಾಡ್ಗೀಳ್‌ ಹಾಗೂ ಕಸ್ತೂರಿ ರಂಗನ್‌ ವರದಿಗಳಲ್ಲಿ ತಿಳಿಸಲಾಗಿದೆ. ಇಲ್ಲಿ ಬೃಹತ್‌ ಯೋಜನೆಗಳ ಅನುಷ್ಠಾನ ಮಾಡಬಾರದು ಎಂದೂ ಶಿಫಾರಸು ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಯೋಜನೆ ಕೈಬಿಡದಿದ್ದರೆ ಸರಣಿ ಹೋರಾಟಗಳನ್ನು ನಡೆಸಲಾಗುವುದು’ ಎಂದು
ಪ್ರತಿಭಟನಕಾರರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT