ಶುಕ್ರವಾರ, ನವೆಂಬರ್ 22, 2019
26 °C

ಷೇರು ಹೆಸರಿನಲ್ಲಿ ₹ 20 ಲಕ್ಷ ವಂಚನೆ

Published:
Updated:

ಬೆಂಗಳೂರು: ‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ’ ಎಂಬ ಆಮಿಷವೊಡ್ಡಿ ನಗರದ ವ್ಯಾಪಾರಿ ಎಂ. ಸುಬ್ಬರಾಜು ಎಂಬುವರಿಂದ ₹ 20 ಲಕ್ಷ ಪಡೆದುಕೊಂಡು ವಂಚಿಸಲಾಗಿದ್ದು, ಆ ಸಂಬಂಧ ಕೆಂಗೇರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಸ್ಥಳೀಯ ನಿವಾಸಿ ಆಗಿರುವ ಸುಬ್ಬರಾಜು ಶನಿವಾರ ದೂರು ನೀಡಿದ್ದಾರೆ. ಆರೋಪಿಗಳಾದ ಸತೀಶ್ ಕುಲಕರ್ಣಿ, ಹನುಮಂತ್ ಕುಲ್ಲೂರ್ ಹಾಗೂ ಮಲ್ಲಿಕಾರ್ಜುನ್ ಸಜ್ಜನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಷೇರು ಮಾರುಕಟ್ಟೆ ತಜ್ಞ ಭರತ್ ಚಂದ್ರ ಅವರ ಕಾರ್ಯಾಗಾರಕ್ಕೆ ಹೋಗಿದ್ದ ದೂರುದಾರ ಸುಬ್ಬರಾಜು ಅವರಿಗೆ ಸತೀಶ್ ಕುಲಕರ್ಣಿ ಅವರ ಪರಿಚಯವಾಗಿತ್ತು. ನಂತರ ಅವರಿಬ್ಬರು ಸ್ನೇಹಿತರಾಗಿದ್ದರು. ನಾಗರಭಾವಿ 2ನೇ ಹಂತದ ಪಾಪರೆಡ್ಡಿಪಾಳ್ಯ ವೃತ್ತದಲ್ಲಿ ಸತೀಶ್ ಅವರ ಕಚೇರಿ ಇದೆ. ಅಲ್ಲಿಯೇ ದೂರುದಾರರಿಗೆ ಹನುಮಂತ ಕುಲ್ಲೂರ ಹಾಗೂ ಮಲ್ಲಿಕಾರ್ಜುನ ಪರಿಚಯ ಆಗಿತ್ತು.’

‘ರಾಜರಾಜೇಶ್ವರಿನಗರದಲ್ಲಿರುವ ತಮ್ಮ ಕಚೇರಿಗೆ ದೂರುದಾರರನ್ನು ಕರೆದುಕೊಂಡು ಹೋಗಿದ್ದ ಹನುಮಂತ ಹಾಗೂ ಮಲ್ಲಿಕಾರ್ಜುನ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಬರುವುದಾಗಿ ಆಮಿಷವೊಡ್ಡಿದ್ದರು. ಅದನ್ನು ನಂಬಿದ್ದ ದೂರುದಾರರು ₹ 20 ಲಕ್ಷ ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಹೂಡಿಕೆಗೆ ಪ್ರತಿಯಾಗಿ ಎರಡು ಬಾರಿ ₹ 42,750 ಹಾಗೂ ₹ 42,800 ಲಾಭವನ್ನು ದೂರುದಾರರಿಗೆ ನೀಡಲಾಗಿತ್ತು. ಅದಾದ ನಂತರ ಆರೋಪಿಗಳು ಮೊಬೈಲ್ ಸ್ವಿಚ್‌ ಆಫ್ ಮಾಡಿಕೊಂಡು ಕಚೇರಿಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)