ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ ಕಾರಂತ ಬಡಾವಣೆ: 22 ಕಟ್ಟಡ ತೆರವು

ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಬಿಡಿಎ ದಿಢೀರ್‌ ಕಾರ್ಯಾಚರಣೆ
Last Updated 26 ಜುಲೈ 2021, 12:41 IST
ಅಕ್ಷರ ಗಾತ್ರ

ಬೆಂಗಲೂರು: ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೋಮವಾರ ಆರಂಭಿಸಿದೆ. ಮೇಡಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ಲಕ್ಷ್ಮೀಪುರ ಗ್ರಾಮಗಳಲ್ಲಿ 22 ಕಟ್ಟಡಗಳನ್ನು ಬಿಡಿಎ ಕೆಡವಿದೆ.

ಭದ್ರತೆಗಾಗಿ ಮೀಸಲು ಪೋಲೀಸ್‌ ಪಡೆಯ ಮೂರು ತುಕಡಿಗಳನ್ನು ಸ್ಥಳಕ್ಕೆ ತರಿಸಿಕೊಂಡ ಬಿಡಿಎ ಅಧಿಕಾರಿಗಳು ಮಧ್ಯಾಹ್ನದ ವೇಳೆ ತೆರವು ಕಾರ್ಯಾಚರಣೆ ಆರಂಭಿಸಿದರು. ತಮ್ಮ ಮನೆಗಳು ಕಣ್ಣೆದುರೇ ನೆಲಸಮವಾಗುವುದನ್ನು ಕಂಡು ಕುಟುಂಬಸ್ಥರು ಕಣ್ಣೀರಿಟ್ಟರು. ‘ನಮ್ಮ ವಸ್ತುಗಳನ್ನು ಸಾಗಿಸುವುದಕ್ಕಾದರೂ ಅವಕಾಶ ಕೊಡಿ’ ಎಂದು ಅಂಗಲಾಚಿದರು. ‘ಸುಪ್ರೀಂ ಕೋರ್ಟ್‌ ಆದೇಶ ಇರುವುದರಿಂದ ನಾವೂ ಅಸಹಾಯಕರು’ ಎಂದು ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದರು.

‘ಶಿವರಾಮ ಕಾರಂತ ಬಡಾವಣೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನಿನಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.ಆದರೂ ಕೆಲವರು ಕಟ್ಟಡ ಕಟ್ಟಿಕೊಂಡಿದ್ದರು. ಈ ಬಡಾವಣೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಪ್ರದೇಶಗಳಲ್ಲಿ 2018ರ ಆ. 3ರನಂತರ ನಿರ್ಮಿಸಲಾದ ಕಟ್ಟಡಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆ ಪ್ರಕಾರ 12 ಶೆಡ್‌ಗಳನ್ನು ತೆವುಗೊಳಿಸಿದ್ದೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಕಂದಾಯ ನಿವೇಶನ ಖರೀದಿಸಿ ಸಾಲ ಮಾಡಿ ಮನೆ ಕಟ್ಟಿದ್ದೇವೆ. ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿಯನ್ನೂ ಪಡೆದಿದ್ದೇವೆ. ಜಾಗದ ದಾಖಲೆಗಳನ್ನು ಪರಿಶೀಲಿಸಿ ಎಂದರೂ ಅಧಿಕಾರಿಗಳು ಕಿವಿಗೊಡಲಿಲ್ಲ. ನಮಗೆ ಯಾವುದೇ ನೋಟಿಸ್‌ ನೀಡದೆಯೇ ಬಿಡಿಎ ಅಧಿಕಾರಿಗಳು ಕಟ್ಟಡ ಕೆಡವಿದ್ದಾರೆ’ ಎಂದು ಮನೆ ಕಳೆದುಕೊಂಡವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಂತರಾಜಣ್ಣ, ‘ಉಪಗ್ರಹ ಚಿತ್ರಗಳನ್ನು ಆಧರಿಸಿ 2018ರ ನಂತರ ಕಟ್ಟಿದ ಕಟ್ಟಡಗಳನ್ನು ಗುರುತಿಸಿದ್ದೇವೆ. 2018ನಂತರ ಪ್ರತಿ ತಿಂಗಳೂ ಎಲ್ಲೆಲ್ಲ ಕಟ್ಟಡಗಳು ನಿರ್ಮಾಣವಾಗಿವೆ ಎಂಬುದನ್ನು ಪರಿಶೀಲಿಸಿದ್ದೇವೆ. ಇಲ್ಲಿ ಮನೆ ನಿರ್ಮಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕವೂ ಕೆಲವರು ಶೆಡ್‌ಗಳನ್ನು ನಿರ್ಮಿಸಿದ್ದರು. ಅಂತಹವರಿಗೆ ಹಿಂದೆಯೇ ನೋಟಿಸ್‌ ನೀಡಲಾಗಿತ್ತು. ಹಾಗಾಗಿ ಮತ್ತೆ ನೋಟಿಸ್‌ ನೀಡುವ ಪ್ರಮೇಯ ಉದ್ಭವಿಸದು’ ಎಂದರು.

ತೆರವು ಕಾರ್ಯಾಚರಣೆ ಸುದ್ದಿ ತಿಳಿದ ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್‌ ಸೋಮಶೆಟ್ಟಿ ಹಳ್ಳಿಗೆ ಭೇಟಿ ನೀಡಿದರು. ಮನೆಯವರೇ ಸ್ವತ್ತುಗಳನ್ನು ಸಾಗಿಸುವುದಕ್ಕಾದರೂ ಕಾಲಾವಕಾಶ ಕೊಡುವಂತೆ ಹೇಳಿದರು. ‘ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಕಟ್ಟಡ ತೆರವುಗೊಳಿಸುತ್ತಿದ್ದೇವೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅಧಿಕಾರಿಗಳು ಕಾಲಾವಕಾಶ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT