ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತ ತಪ್ಪಿಸಲು ‘ಸಿಮ್ಯುಲೇಟರ್‌’ ತರಬೇತಿ

ವಿವಿಧ ಯೋಜನೆಯ ಫಲಾನುಭವಿಗಳ ಜೊತೆಗೆ ಬಿಎಂಟಿಸಿ ಚಾಲಕರಿಗೂ ತರಬೇತಿ
Published 30 ಮೇ 2024, 23:33 IST
Last Updated 30 ಮೇ 2024, 23:33 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಚಾಲನೆಯಲ್ಲಿ ನೈಪುಣ್ಯ ಪಡೆಯುವುದಕ್ಕಾಗಿ ಬಿಎಂಟಿಸಿ ‘ಸಿಮ್ಯುಲೇಟರ್‌’ ಮೂಲಕ ಚಾಲಕರಿಗೆ ವಿಶೇಷ ತರಬೇತಿಯನ್ನು ನೀಡುತ್ತಿದೆ. ವಿವಿಧ ಯೋಜನೆಯಡಿ ಚಾಲನಾ ತರಬೇತಿಗೆ ಆಯ್ಕೆಯಾದವರು ಮತ್ತು ಬಸ್‌ ಚಾಲಕರಾಗಿ ಆಯ್ಕೆಯಾದವರ ಜೊತೆಗೆ ಬಿಎಂಟಿಸಿಯ ಚಾಲಕರಿಗೂ ಈ ತರಬೇತಿ ನೀಡಲಾಗುತ್ತಿದೆ.

ಬಸ್‌ ಚಲಾಯಿಸಿದ ಅನುಭವವನ್ನೇ ನೀಡುವ ಡಿಜಿಟಲ್ ವ್ಯವಸ್ಥೆಯ ಸುಸಜ್ಜಿತ ಹವಾನಿಯಂತ್ರಿತ ಕೊಠಡಿ ಹೊಂದಿರುವ ಯಂತ್ರವೇ ‘ಸಿಮ್ಯುಲೇಟರ್‌’. ಬಿಎಂಟಿಸಿಯ ವಡ್ಡರಹಳ್ಳಿ ಚಾಲಕರ ತರಬೇತಿ ಕೇಂದ್ರದಲ್ಲಿ ಈ ಯಂತ್ರ ಇದೆ. ಬಸ್ ಮಾದರಿಯಲ್ಲಿಯೇ ಚಕ್ರ, ಸೀಟು, ಸೀಟ್ ಬೆಲ್ಟ್, ಆ್ಯಕ್ಸಿಲೇಟರ್, ಬ್ರೇಕ್, ಕ್ಲಚ್ ಹೊಂದಿದ್ದು ಎದುರಿಗೆ ಎಲ್.ಇ.ಡಿ ಸ್ಕ್ರೀನ್‌ ಇರುತ್ತದೆ. ‘ಸಿಮ್ಯುಲೇಟರ್’ನಲ್ಲಿ ಬಸ್‌ ಚಾಲನೆ ಮಾಡಿದಾಗ, ಕಲಿಯುವವರಿಗೆ ರಸ್ತೆಯಲ್ಲಿ ಚಲಾಯಿಸಿದ ಅನುಭವವೇ ಸಿಗುತ್ತದೆ. 

‘ದಿಣ್ಣೆಗಳನ್ನು ಏರುವಾಗ, ಇಳಿಯು ವಾಗ, ತಿರುವುಗಳಲ್ಲಿ ಹೇಗೆ ವಾಹನ ಚಲಾಯಿಸಬೇಕು? ಅತಿ ವಾಹನ ದಟ್ಟಣೆ ಇರುವ ಬೆಂಗಳೂರಿನಂಥ ನಗರದಲ್ಲಿ ಹಿಂದೆ ಮುಂದೆ ವಾಹನಗಳು ಇರುವಾಗ ಹೇಗೆ ಚಾಲನೆ ಮಾಡಬೇಕು? ಎಂಬುದನ್ನೆಲ್ಲ ಈ ಯಂತ್ರದಲ್ಲಿ ಚಾಲನೆ ಕಲಿಸುವಾಗ ಹೇಳಿ ಕೊಡಲಾಗುತ್ತದೆ. ಚಾಲನಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಸಲಾಗುತ್ತದೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.

ಬೇರೆ ಬೇರೆ ಯೋಜನೆಗಳಲ್ಲಿ ಸುಮಾರು ಒಂಬತ್ತು ಸಾವಿರ ಮಂದಿ ಇಲ್ಲಿವರೆಗೆ ಚಾಲನಾ ತರಬೇತಿ ಪಡೆದಿದ್ದಾರೆ. ಜೊತೆಗೆ ಬಿಎಂಟಿಸಿಯ ಹೊಸ ಮತ್ತು ಹಳೇ ಚಾಲಕರು ಸೇರಿ 5700 ಮಂದಿ ‘ಸಿಮ್ಯುಲೇಟರ್‌’ ಮೂಲಕ ತರಬೇತಿ ಪಡೆದಿದ್ದಾರೆ. ‘ಎಲ್ಲರೂ ನುರಿತ ಚಾಲಕರಾಗಬೇಕು ಎನ್ನುವ ಕಾರಣಕ್ಕೆ ನಿರ್ವಾಹಕರು, ಅಧಿಕಾರಿಗಳು, ಮೆಕ್ಯಾನಿಕ್‌ಗಳು ಕೂಡ ಇಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ. ತರಬೇತಿಯ ಅವಧಿ ಒಂದು ತಿಂಗಳು ಇರುತ್ತದೆ’ ಎಂದರು.

ಯೋಜನೆಯ ಫಲಾನುಭವಿಗಳು: ಸಿಎಂಕೆಕೆವೈ, ನಿರ್ಭಯಾ, ಎಸ್‌ಸಿಎಸ್‌ಪಿ, ಟಿಎಸ್‌ಪಿ, ಎಸ್‌ಟಿ ವೆಲ್‌ಫೇರ್‌ ಸೇರಿದಂತೆ ವಿವಿಧ ಯೋಜನೆಯ ಫಲಾನುಭವಿಗಳಿಗೆ ಒಂದು ತಿಂಗಳ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಫಲಾನುಭವಿಗಳ ಹೆಸರು ನೋಂದಾಯಿಸಿ ಕಲಿಕಾ ಪರವಾನಗಿ (ಎಲ್‌ಎಲ್‌ಆರ್‌) ಪಡೆಯಲಾಗುವುದು. ಬಳಿಕ ಉಪನ್ಯಾಸ ಕೊಠಡಿಯಲ್ಲಿ ಫಲಾನುಭವಿಗಳಿಗೆ ಚಾಲನೆಯಲ್ಲಿರುವಾಗ ಕೈ ಮೂಲಕ ನೀಡಬೇಕಾದ ಸೂಚನೆಗಳ ಬಗ್ಗೆ, ಸಂಚಾರ ಮಾರ್ಗದಲ್ಲಿ ಅಲ್ಲಲ್ಲಿ ಅಳವಡಿಸಿರುವ ಚಿಹ್ನೆಗಳ ಮಾಹಿತಿ, ಕ್ಲಚ್‌, ಗೇರ್‌, ಬ್ರೇಕ್‌, ಆ್ಯಕ್ಸಿಲೇಟರ್‌ಗಳ ಬಗ್ಗೆ ನುರಿತ ಚಾಲಕರು ಮಾಹಿತಿ ನೀಡುತ್ತಾರೆ. ಆನಂತರ ‘ಸಿಮ್ಯುಲೇಟರ್‌’ ಕೊಠಡಿಯಲ್ಲಿ ಚಾಲನೆ ಕಲಿಸುತ್ತಾರೆ. ಬಸ್‌ ಮಾತ್ರವಲ್ಲ ನಾಲ್ಕು ಚಕ್ರದ ವಾಹನಗಳ ತರಬೇತಿಯನ್ನೂ ನೀಡುತ್ತಾರೆ.

ಇಂಧನ ಉಳಿತಾಯ ಮಾಡ ಬೇಕಿದ್ದರೆ ಆ್ಯಕ್ಸಿಲೇಟರ್‌ ಹೇಗೆ ಬಳಸಬೇಕು, ಕ್ಲಚ್‌, ಗೇರ್‌ಗಳನ್ನು ಹೇಗೆ ಬಳಸಿದರೆ ಇಂಧನ ಉಳಿಸಬಹುದು ಎಂಬುದನ್ನು ಕೂಡ ಪರಿಣತರು ಹೇಳಿಕೊಡುತ್ತಾರೆ. ಆನಂತರ ರಸ್ತೆಯಲ್ಲಿ ಪ್ರಾಯೋಗಿಕ ಚಾಲನೆ ಮಾಡಿಸಿ ಚಾಲನಾ ಪರವಾನಗಿ (ಡಿಎಲ್‌) ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

‘ಸೀಟ್‌ಬೆಲ್ಟ್‌ನಿಂದ ಹಿಡಿದು ಎಲ್ಲ ನಿಯಮಗಳನ್ನು ಪಾಲಿಸದಿದ್ದರೆ ಈ ಯಂತ್ರ ಚಾಲನೆಯಾಗುವುದಿಲ್ಲ. ಆನಂತರವೂ ಸಣ್ಣ ತಪ್ಪಾದರೂ ಗುರುತು ಆಗುವುದರಿಂದ ತಿದ್ದಿಕೊಳ್ಳಲು ಸುಲಭ ವಾಗುತ್ತದೆ’ ಎಂದು ತರಬೇತಿ ಪಡೆದ ಚಾಲಕರು ತಿಳಿಸಿದರು.

ಬಸ್‌ ಅಲ್ಲದೇ, ಜೀಪು, ಕಾರು ಕಲಿಯಲು ಬರುವ ವಿವಿಧ ಜಿಲ್ಲೆಗಳ ಸಿಬ್ಬಂದಿಗೆ ವಸತಿ ನಿಲಯದ ವ್ಯವಸ್ಥೆಗಳಿರುತ್ತವೆ. ಬೆಳಿಗ್ಗೆ ಯೋಗಾಭ್ಯಾಸ, ಚಾಲನಾ ತರಬೇತಿ, ಊಟ–ಉಪಾಹಾರ ಒದಗಿಸಲಾಗುತ್ತದೆ.

‘ನುರಿತ ಚಾಲಕರನ್ನಾಗಿ ಮಾಡುವ ಗುರಿ’

ಹೊಸಬರಿಗೆ ಮಾತ್ರವಲ್ಲ, ಚಾಲನೆಯಲ್ಲಿ ಪದೇ ಪದೇ ತಪ್ಪು ಮಾಡುವವರಿಗೂ ‘ಸಿಮ್ಯುಲೇಟರ್‌’ ಡಿಜಿಟಲ್‌ ಯಂತ್ರದಲ್ಲಿ ತರಬೇತಿ ನೀಡಲಾಗುತ್ತದೆ. ಆನಂತರ ರಸ್ತೆಯಲ್ಲಿಯೂ ಚಾಲನಾ ತರಬೇತಿ ನೀಡುವ ಮೂಲಕ ನುರಿತ ಚಾಲಕರನ್ನಾಗಿ ಮಾಡಲಾಗುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಮಾಹಿತಿ ನೀಡಿದರು.

ವಿವಿಧ ಯೋಜನೆಯಡಿ ಯುವಜನರಿಗೆ ಜೀಪು, ಕಾರು ಚಾಲನೆಯನ್ನು ಕಲಿಸುವ ಮೂಲಕ ಬಿಎಂಟಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ ಎಂದು ತಿಳಿಸಿದರು.

ಬಿಎಂಟಿಸಿಯಿಂದ ಅತ್ಯುತ್ತಮ ಚಾಲನಾ ತರಬೇತಿ ಸಿಗುತ್ತದೆ ಎಂದು ಗೆಳೆಯನಿಂದ ತಿಳಿಯಿತು. ಅರ್ಜಿ ಹಾಕಿದೆ. ‘ಸಿಮ್ಯುಲೇಟರ್‌’ ಮೂಲಕ ತರಬೇತಿ ನೀಡಿದ್ದಾರೆ. ನಾನು ಪದವೀಧರನಾಗಿದ್ದು, ಬೇರೆ ಕೆಲಸ ಸಿಗದೇ ಇದ್ದರೂ ಚಾಲಕನಾಗಿ ಬದುಕು ಕಟ್ಟಿಕೊಳ್ಳಲು ತರಬೇತಿ ಉಪಯೋಗವಾಗಿದೆ.
ನಾಗರಾಜ್‌, ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT