ಬೆಂಗಳೂರು: ಒಳಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಹಲವು ನಿರ್ಣಯ ಕೈಗೊಂಡಿತು.
ರಾಜ್ಯ ಸರ್ಕಾರವು ಒಳಮೀಸಲಾತಿ ವಿಷಯದಲ್ಲಿ ಕೇಂದ್ರಕ್ಕೆ ಮಾಡಿದೆ ಎನ್ನಲಾದ ಶಿಫಾರಸ್ಸಿನ ಅಧಿಕೃತ ಪತ್ರವು ಕೈಸೇರುವವರೆಗೆ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸಲಾಗುವುದು. ಮೀಸಲಾತಿ ಹೆಚ್ಚಳವನ್ನು ರಾಜ್ಯದಲ್ಲಿ ಜಾರಿ ಮಾಡಿದ ರೀತಿಯಲ್ಲಿ ಒಳಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಮೀಸಲಾತಿ ಹಂಚಿಕೆಗೆ ಅನುಗುಣವಾಗಿ ರಾಜ್ಯದಲ್ಲಿ ಹಂಚಿಕೆ ಮಾಡಲು ಸೂಕ್ತ ಕಾನೂನು ರಚಿಸಬೇಕು. ರಾಜ್ಯ ಸರ್ಕಾರವು ತಮ್ಮದೇ ಸರ್ಕಾರ ಕೇಂದ್ರದಲ್ಲಿ ಇರುವುದರಿಂದ ಸಂವಿಧಾನದ 341(3)ನೇ ವಿಧಿಗೆ ತಿದ್ದುಪಡಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ತ್ರಿಮತಸ್ಥ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪಕ್ಷಾತೀತವಾಗಿದ್ದು, ಸಮಾಜದ ಸಾಮೂಹಿಕ ರಾಜಕೀಯ ಭಾವನೆ ಗೌರವಿಸಬೇಕು ಎಂದು ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸುವ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳಿಗೆ ಈ ಕೂಡಲೇ ಸಂವಿಧಾನದ 341(3)ನೇ ವಿಧಿಗೆ ತಿದ್ದುಪಡಿ ತರುವಂತೆ ಒತ್ತಾಯಿಸುವ ಹೋರಾಟ ರೂಪಿಸಲಾಗುವುದು. ಹೋರಾಟದಲ್ಲಿ ಮಾದಿಗ, ಚಲವಾದಿ ಸಮುದಾಯಗಳ ಸಂಘಟಕರು ತ್ರಿಮತಸ್ಥರು, ಅಲೆಮಾರಿಗಳು, ದಕ್ಕಲಿಗರು ಇನ್ನುಳಿದ ಜಾತಿಗಳನ್ನು ಒಂದು
ಗೂಡಿಸುವ ಹೋರಾಟ ಮುಂದುವರಿಸಲಾಗುವುದು ಎಂಬ ನಿರ್ಣಯವನ್ನು ಹೋರಾಟಗಾರರು ಕೈಗೊಂಡರು.
ಎಸ್‌ಸಿಪಿ/ ಟಿಎಸ್‌ಪಿಯ 7ಡಿ ಕಲಂ ರದ್ದುಪಡಿಸಬೇಕು. ರಾಜ್ಯ ಅಲೆಮಾರಿಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ‘ಅಲೆಮಾರಿಗಳ ಆಯೋಗ’ ರಚಿಸಬೇಕು. ರಾಜ್ಯದಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಸಮಿತಿ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ, ಹಾಗೂ ಸಹ ಸಂಚಾಲಕ ಎಂ. ಗುರುಮೂರ್ತಿ ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.