‘ಕೌಶಲ ಆರೋಗ್ಯ ವ್ಯವಸ್ಥೆಯ ಆಧಾರಸ್ತಂಭ’

ಬೆಂಗಳೂರು: ‘ಪರಿಣಾಮಕಾರಿ ಆರೋಗ್ಯ ವಿತರಣಾ ವ್ಯವಸ್ಥೆಗೆ ಕೌಶಲ ಆಧಾರಸ್ತಂಭವಾಗಿದೆ. ಆದ್ದರಿಂದ ಕೌಶಲ ವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಹೃದ್ರೋಗ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ವೃತ್ತಿಪರರ ಕೌಶಲ ವೃದ್ಧಿಗೆ ಸಂಬಂಧಿಸಿದಂತೆ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಎಚ್) ಹಾಗೂ ಹೆಲ್ತ್‌ಕೇರ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಎಚ್‌ಎಸ್‌ಎಸ್‌ಸಿ) ಒಪ್ಪಂದ ಮಾಡಿಕೊಂಡವು. ಈ ವೇಳೆ ಮಾತನಾಡಿದ ಅವರು, ‘ಈ ಒಪ್ಪಂದವು ಕೌಶಲ ಗುರುತಿಸುವಿಕೆಗೆ ಸಹಕಾರಿಯಾಗಲಿದೆ. ವೈದ್ಯಕೀಯ ಕ್ಷೇತ್ರದ ಗುಣಮಟ್ಟವನ್ನೂ ಹೆಚ್ಚಿಸಲಿದೆ. ರೋಗಿಗಳ ಆರೈಕೆ ವಿಧಾನದಲ್ಲಿ ಕೂಡ ಸುಧಾರಣೆ ಕಾಣಬಹುದು’ ಎಂದು ಹೇಳಿದರು.
ಎನ್‌ಎಬಿಎಚ್ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಡಾ. ಅತುಲ್ ಕೊಚ್ಚರ್, ‘ದೇಶದಲ್ಲಿ ಆರೋಗ್ಯ ಕ್ಷೇತ್ರವು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಕಾಲಕಾಲಕ್ಕೆ ಆರೋಗ್ಯ ಕಾರ್ಯಕರ್ತರ ಕೌಶಲವನ್ನು ಹೆಚ್ಚಿಸಬೇಕು. ಹೀಗಾಗಿ, ಕೌಶಲ ವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ರೋಗಿಗಳ ನಡುವಿನ ಕಂದಕ ನಿವಾರಿಸಲಾಗುವುದು’ ಎಂದು ತಿಳಿಸಿದರು.
ಎಚ್‌ಎಸ್‌ಎಸ್‌ಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಶೀಶ್ ಜೈನ್, ‘ಎಚ್‌ಎಸ್‌ಎಸ್‌ಸಿ ಪ್ರಮಾಣ ಪತ್ರ ಹೊಂದಿದ ಆರೋಗ್ಯ ಸಿಬ್ಬಂದಿಗೆ ಉತ್ತಮ ಉದ್ಯೋಗವಕಾಶ ದೊರೆಯಲಿದೆ. ವೈದ್ಯಕೀಯ ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ವೃತ್ತಿಪರರನ್ನು ತಯಾರು ಮಾಡಲಾಗುವುದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.