ಸೋಮವಾರ, ಮಾರ್ಚ್ 8, 2021
27 °C
ವಾಯು ಮಾಲಿನ್ಯದಿಂದ ಶೇ 21ರಷ್ಟು ಹೆಚ್ಚಿದೆ ಸತತ ಕೆಮ್ಮು ಸಮಸ್ಯೆ: ಡಾ. ಪರಮೇಶ್‌

ಗೊರಕೆ ಹೊಡೀತಾರೆ; ಹಲ್ಲು ಕಡೀತಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದ ಮಕ್ಕಳಲ್ಲಿ ಆಸ್ತಮಾ ಹಾಗೂ ಸತತ ಕೆಮ್ಮು (ಎರಡು ವಾರಕ್ಕೂ ಹೆಚ್ಚು ಸಮಯ ಇರುತ್ತದೆ) ಸಮಸ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರ ಜೊತೆಗೆ ಗೊರಕೆ ಹೊಡೆಯುವಿಕೆ, ಬಾಯಿಯಲ್ಲಿ ಉಸಿರಾಡುವುದು, ಕಿವಿ ತುರಿಸುವಿಕೆ, ಹಲ್ಲು ಕಡಿಯುವುದು ಹಾಗೂ ನಿದ್ರೆ ವೇಳೆ ಉಸಿರಾಟದ ತೊಂದರೆಗಳೂ ಕಾಣಿಸಿಕೊಳ್ಳುತ್ತಿವೆ’ ಎಂದು ಪರಿಸರ ತಜ್ಞ ಡಾ. ಎಚ್‌.ಪರಮೇಶ್‌ ಅವರು ವಿವರಿಸಿದರು.

ನಗರದಲ್ಲಿ ಮಂಗಳವಾರ ಆರಂಭವಾದ ಸಿ–40 ನಗರಗಳ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ವಾತಾವರಣದಲ್ಲಿ ಕಾರ್ಬನ್‌ ಡಯಾಕ್ಸೈಡ್‌ ಪ್ರಮಾಣ ಹೆಚ್ಚಳದಿಂದ ಸಸ್ಯಗಳು ಹೆಚ್ಚು ಕಾಲ ಹೂ ಬಿಡುತ್ತವೆ. ಇದರಿಂದ ಪರಾಗರೇಣುಗಳು ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ. ಇವು ಅಲರ್ಜಿ ಕಾಣಿಸಿಕೊಳ್ಳುವುದಕ್ಕೆ ಕಾರಣ. 2.5 ಮೈಕ್ರಾನ್‌ಗಿಂತಲೂ ಕಡಿಮೆ ಗಾತ್ರದ ದೂಳಿನ ಕಣಗಳಿಂದ ಅಥವಾ ಡೀಸೆಲ್‌ ಕಣಗಳಿಂದ ಆವೃತವಾಗುವ ಪರಾಗರೇಣು 50 ಪಟ್ಟು ಹೆಚ್ಚು ಅಲರ್ಜಿಯನ್ನು ಉಂಟುಮಾಡಬಲ್ಲದು’ ಎಂದು ತಿಳಿಸಿದರು.

2.5 ಮೈಕ್ರಾನ್‌ಗಿಂತಲೂ ಕಡಿಮೆ ಗಾತ್ರದ ದೂಳಿನ ಕಣಗಳನ್ನು ಉಸಿರಾಡಿದರೆ, ಶ್ವಾಸಕೋಶದ ಮೂಲಕ ಅವು ಕ್ಷಣಮಾತ್ರದಲ್ಲಿ ರಕ್ತವನ್ನು ಸೇರಬಲ್ಲವು. ಇವು ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶದ ಕ್ಯಾನ್ಸರ್‌ಗೂ ಕಾರಣವಾಗಬಲ್ಲವು. ಭಾರತದಲ್ಲಿ 2.5 ಮೈಕ್ರಾನ್‌ಗಿಂತಲೂ ಸಣ್ಣ ದೂಳಿನ ಕಣಗಳ ಸಂಖ್ಯೆ 199ರಿಂದ 2013ರ ನಡುವೆ ಶೇ 54.3ರಷ್ಟು ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.

ನಗರದಲ್ಲಿ ಮೂಗಿನ ಉರಿಯೂತ (ಸೈನೊಸೈಟಿಸ್‌), ಮಧ್ಯ ಕಿವಿ ಸೋಂಕು ಸಮಸ್ಯೆ, ಬುದ್ಧಿಮಾಂದ್ಯತೆ, ಹೃದಯ ಸಂಬಂಧಿ ಕಾಯಿಲೆ, ಸ್ಮರಣ ಶಕ್ತಿ ಕಳೆದುಕೊಳ್ಳುವಿಕೆ, ಒತ್ತಡ, ಮಧುಮೇಹ ಹಾಗೂ ಮೂತ್ರಪಿಂಡ ಸಮಸ್ಯೆಗಳು ಹೆಚ್ಚುತ್ತಿರುವುದಕ್ಕೂ ವಾಯು ಮಾಲಿನ್ಯವೇ ಪ್ರಧಾನವಾದ ಕಾರಣ ಎಂದು ಪರಮೇಶ್‌ ಅವರು ಹೇಳಿದರು. 

* ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಂದೋ ಈ ಪ್ರದೇಶವನ್ನು ಹೊಗೆರಹಿತ ವಲಯವನ್ನಾಗಿ ರೂಪಿಸಬೇಕು ಅಥವಾ ಇಲ್ಲಿನ ಶಾಲೆಗಳನ್ನು ಕಡಿಮೆ ಮಾಲಿನ್ಯರಹಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು

– ಯೋಗೇಶ್‌ ರಂಗನಾಥ್‌, ಅಜೀಮ್‌ ಪ್ರೇಮ್‌ಜಿ ಪ್ರತಿಷ್ಠಾನ

ವಾಯುಮಾಲಿನ್ಯ ನಿಯಂತ್ರಣಕ್ಕಾಗಿ 49 ಅಂಶಗಳ ಕಾರ್ಯಕ್ರಮ ರೂಪಿಸಲಾಗುತ್ತಿದೆ. ವಿವಿಧ ಇಲಾಖೆಗಳ ಜೊತೆ ಸಮಾಲೋಚನೆ ನಡೆಸಿ ಶೀಘ್ರವೇ ಇದಕ್ಕೆ ಅಂತಿಮ ರೂಪ ನೀಡುತ್ತೇವೆ

– ರಂಗರಾವ್‌, ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ

 * ಕಣ್ಣಿಗೆ ಕಾಣುವ ಸಮಸ್ಯೆಗಳ ಬಗ್ಗೆ ಮಾತ್ರ ಜನ ತಲೆಕೆಡಿಸಿಕೊಳ್ಳುತ್ತಾರೆ. ವಾಯು ಮಾಲಿನ್ಯ ಅವರ ಅರಿವಿಗೆ ಬರುವುದಿಲ್ಲ. ಪ್ರತಿ ವಾರ್ಡ್‌ನಲ್ಲಿ ವಾಯು ಮಾಲಿನ್ಯದ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡುತ್ತೇವೆ
– ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು