ಶನಿವಾರ, ಆಗಸ್ಟ್ 13, 2022
23 °C
‘ಕೇಳಿ ಕಥೆಯ ಭಾಗ–2’ ಲೋಕಾರ್ಪಣೆ

ಕಥೆಗಳಲ್ಲಿ ಮಣ್ಣಿನ ಜೀವನ ಕ್ರಮ: ನಟ ಕಿಶೋರ್ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಥೆಗಳ ಮೂಲಕ ಈ ಮಣ್ಣಿನ ಜೀವನ ಕ್ರಮಗಳು ದಾಖಲಾಗುತ್ತಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ’ ಎಂದು ಚಲನಚಿತ್ರ ನಟ ಕಿಶೋರ್ ತಿಳಿಸಿದರು.

‘ಅವಿರತ’ ಹಾಗೂ ‘ಕೇಳಿ ಕಥೆಯ ಆಡಿಯೋ ಬುಕ್’ ಸಂಸ್ಥೆಯು ಜಂಟಿಯಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕೇಳಿ ಕಥೆಯ ಭಾಗ–2’ ಹಾಗೂ ‘ಕೇಳಿ ಕಥೆಯ’ ವೆಬ್‌ಸೈಟ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಥೆಗಳನ್ನು ಕೇಳುತ್ತಲೇ ನಾವು ಬೆಳೆದಿದ್ದೇವೆ. ಅದು ನಮ್ಮ ಜೀವನ ಕ್ರಮದ ಭಾಗವಾಗಿತ್ತು. ಮೌಲ್ಯ, ಆದರ್ಶಗಳನ್ನು ಅಳವಡಿಸಿಕೊಳ್ಳಲು ಕೂಡ ಕಥೆಗಳು ಸಹಾಯಕ. ಹಾಗಾಗಿ ಕಥೆಗಳನ್ನು ಮಕ್ಕಳು ಕೇಳುವಂತಾಗಬೇಕು’ ಎಂದು ಕಿಶೋರ್ ಹೇಳಿದರು.

ಕಥೆಗಾರ ವಸುಧೇಂದ್ರ, ‌‘ಇಂಗ್ಲಿಷ್‌ಗೆ ಅಂಟಿಕೊಂಡಿರುವ ಹೊಸ ಪೀಳಿಗೆಗೆ ಕನ್ನಡದ ಕಥೆಗಳನ್ನು ಪರಿಚಯಿಸಬೇಕು. ಬಹಳ ಹಿಂದಿನಿಂದಲೂ ಜ್ಞಾನದ ಪ್ರಸಾರವು ಮೌಕಿಕ ಪರಂಪರೆಯನ್ನು ಅವಲಂಬಿಸಿದೆ. ಕಥೆಗಳನ್ನು ಮಕ್ಕಳಿಗೆ ಹೊಸ ತಂತ್ರಜ್ಞಾನದ ನೆರವು ಪಡೆದು ತಲುಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಿಯೊ ರೂಪದಲ್ಲಿ ಕಥೆಗಳನ್ನು ಪ್ರಸ್ತುತ ಪಡಿಸುವುದರಿಂದ ಕನ್ನಡ ಬರೆಯಲು ಹಾಗೂ ಓದಲು ಬಾರದವರಿಗೆ, ದೃಷ್ಟಿದೋಷ ಸಮಸ್ಯೆ ಇರುವವರಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಕಿರುತೆರೆ ನಿರ್ದೇಶಕ ಬಿ. ಸುರೇಶ್, ‘ಕನ್ನಡದಲ್ಲಿ ಹಲವಾರು ಕಥೆಗಳಿವೆ. ಅವುಗಳಲ್ಲಿನ ವಿಷಯಗಳು ಆಡಿಯೊ ರೂಪದಲ್ಲಿ ಮುಂದಿನ ತಲೆಮಾರಿಗೆ ಸಿಗುವಂತಾಗಬೇಕು’ ಎಂದರು.

ಧ್ವನಿ ನೀಡಿದವರು

‘ಎರಡನೇ ಆವೃತ್ತಿಯಲ್ಲಿನ ಕಥೆಗಳಿಗೆ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರು ಧ್ವನಿ ನೀಡಿದ್ದಾರೆ. ಕುವೆಂಪು ಅವರ ‘ಯಾರೂ ಅರಿಯದ ವೀರ’ ಕಥೆಗೆ ನಟ ವಸಿಷ್ಠ ಸಿಂಹ ಧ್ವನಿ ನೀಡಿದ್ದಾರೆ. ದೇವನೂರ ಮಹಾದೇವ ಅವರ ‘ಡಾಂಬರು ಬಂದದು’ ಕಥೆಯು ನಟ ಧನಂಜಯ ಅವರ ಧ್ವನಿಯಲ್ಲಿ, ವೈದೇಹಿ ಅವರ ‘ಒಗಟು’ ಕಥೆಯು ಶ್ರುತಿಹರಿಹರನ್ ಧ್ವನಿಯಲ್ಲಿ, ವಿವೇಕ್ ಶಾನಭಾಗ್ ಅವರ`ನಿರ್ವಾಣ' ಕಥೆಯು ನಟ ಅಚ್ಯುತ್‍ ಕುಮಾರ್ ಧ್ವನಿಯಲ್ಲಿ ಮೂಡಿಬಂದಿದೆ. ಹಿರಿಯ ಕಲಾವಿದೆ ಗಿರಿಜಾ ಲೋಕೇಶ್, ನಟ ರಾಜ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಕಥೆಗಳಿಗೆ ಕಂಠ ದಾನ ಮಾಡಿದ್ದಾರೆ’ ಎಂದು ಕೇಳು ಕಥೆಯ ಆಡಿಯೋ ಬುಕ್ ಸಂಸ್ಥೆಯ ಸಂಸ್ಥಾಪಕ ಮುಕುಂದ ಸೆಟ್ಲೂರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು