ಬೆಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ ಮಗ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಶವದ ಮುಂದೆ ಕಣ್ಣೀರಿಡುತ್ತಿದ್ದ ತಾಯಿ ಕೂಡ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಗರದ ಕಾವೇರಿಪುರದಲ್ಲಿ ಭಾನುವಾರ ನಡೆದಿದೆ.
ಅರುಣ್ ಕುಮಾರ್ (37) ಮೃತ ಕ್ಯಾಬ್ ಚಾಲಕ. ಮಗನ ಸಾವಿನಿಂದ ಆಘಾತಕ್ಕೆ ಒಳಗಾಗಿ ತಾಯಿ ಸರಸ್ವತಿ ಬಾಯಿ (78) ಸಹ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೂ ಮುನ್ನ ಅರುಣ್ ಮರಣ ಪತ್ರ ಬರೆದಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣ್ಗೆ ಇನ್ನೂ ವಿವಾಹವಾಗಿರಲಿಲ್ಲ. ಬೆಳಿಗ್ಗೆ ತಮ್ಮ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ವರ್ಷದ ಹಿಂದೆ ಬಿದ್ದು ಬೆನ್ನಿನ ಮೂಳೆ ಮುರಿದುಕೊಂಡಿದ್ದ ಸರಸ್ವತಿ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಅರುಣ್ ಅವರೇ ತಾಯಿ ಆರೈಕೆ ಮಾಡುತ್ತಿದ್ದರು. ಅವರ ಇಬ್ಬರು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ತಾಯಿಯ ಸಂಪೂರ್ಣ ಜವಾಬ್ದಾರಿ ಅರುಣ್ ಮೇಲೆಯೇ ಇತ್ತು. ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಅವರು, ತಾಯಿಯ ಆಸ್ಪತ್ರೆ ಚಿಕಿತ್ಸಾ ವೆಚ್ಚಕ್ಕಾಗಿ ಸ್ವಲ್ಪ ಸಾಲ ಮಾಡಿದ್ದರು. ಅದೇ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.