ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಜಿಲ್ಲಾಧಿಕಾರಿ: ಹೊಸ ಹುದ್ದೆಗೆ ಇಲ್ಲ ಸೌಕರ್ಯ

ಬೆಂಗಳೂರು ನಗರ ಜಿಲ್ಲೆ–ಆದೇಶವಾಗಿ ತಿಂಗಳು ಕಳೆದರೂ ಭರ್ತಿಯಾಗದ ಹುದ್ದೆ
Last Updated 20 ಫೆಬ್ರುವರಿ 2022, 21:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಭೂವಿವಾದಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ವಿಶೇಷ ಜಿಲ್ಲಾಧಿಕಾರಿ –3 ಹುದ್ದೆಯನ್ನು 2022ರ ಜ.14ರಂದು ಸೃಷ್ಟಿಸಿದೆ. ಇದಾಗಿ ತಿಂಗಳು ಕಳೆದರೂ ಈ ಹುದ್ದೆ ಇನ್ನೂ ಭರ್ತಿ ಆಗಿಲ್ಲ. ಹೊಸ ಹುದ್ದೆಯನ್ನು ಸೃಷ್ಟಿ ಮಾಡಿರುವ ಸರ್ಕಾರ ಅದಕ್ಕೆ ತಕ್ಕಂತೆ ಮೂಲಸೌಕರ್ಯವನ್ನೂ ಕಲ್ಪಿಸಿಲ್ಲ.

ವಿಶೇಷ ಜಿಲ್ಲಾಧಿಕಾರಿ –3 ಹುದ್ದೆಯನ್ನು ಸೃಷ್ಟಿ ಮಾಡಿದ ದಿನವೇ ಪ್ರಸ್ತುತ ರಾಜ್ಯ ಚುನಾವಣಾ ಆಯೋಗದಲ್ಲಿ ಕಾರ್ಯದರ್ಶಿ ಆಗಿರುವ ಎಸ್‌.ಹೊನ್ನಾಂಬ ಅವರನ್ನು ಆ ಹುದ್ದೆಗೆ ವರ್ಗಾವನೆ ಮಾಡಿ ಸರ್ಕಾರ ಆದೇಶ ಮಾಡಿತ್ತು. ಆದರೆ, ಅದಕ್ಕೆ ಪೂರಕವಾದ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿಲ್ಲ ಎಂಬ ದೂರುಗಳಿವೆ.

ವಿಶೇಷ ಜಿಲ್ಲಾಧಿಕಾರಿಗೆ ಆಪ್ತ ಸಹಾಯಕ, ವ್ಯವಸ್ಥಾಪಕ, ಇಬ್ಬರು ಗುಮಾಸ್ತರು, ಶಿರಸ್ತೇದಾರ್‌ಗನ್ನು ಒದಗಿಸಬೇಕು. ಒಂದು ವಾಹನ ಒದಗಿಸಿ, ಚಾಲಕನನ್ನೂ ನಿಯೋಜಿಸಬೇಕು. ಇದಕ್ಕೆಲ್ಲ ಸರ್ಕಾರ ಇನ್ನೂ ಮಂಜೂರಾತಿ ನೀಡಿಲ್ಲ. ಈ ಎಲ್ಲ ಸೌಕರ್ಯಗಳಿಲ್ಲದೆ ಈ ಹುದ್ದೆ ವಹಿಸಿಕೊಳ್ಳಲು ಐಎಎಸ್‌ ಅಧಿಕಾರಿಗಳು ಆಸಕ್ತಿ ತೊರಿಸುವುದಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಹೊನ್ನಾಂಬ ಅವರನ್ನು ರಾಜ್ಯ ಚುನಾವಣಾ ಆಯೋಗವು ಕಾರ್ಯದರ್ಶಿ ಹುದ್ದೆಯಿಂದ ಇನ್ನೂ ಬಿಡುಗಡೆ ಮಾಡಿಲ್ಲ. ಹಾಗಾಗಿ ಅವರು ವಿಶೇಷ ಜಿಲ್ಲಾಧಿಕಾರಿ ಹುದ್ದೆ ವಹಿಸಿಕೊಂಡಿಲ್ಲ ಎಂದು ಗೊತ್ತಾಗಿದೆ.ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಕರೆಗೆ ಲಭ್ಯರಾಗಲಿಲ್ಲ.

ಪ್ರತ್ಯೇಕ ಕೊಠಡಿಗೆ ಜಾಗದ ಕೊರತೆ

ವಿಶೇಷ ಜಿಲ್ಲಾಧಿಕಾರಿ–3 ಅವರಿಗೆ ಹಾಗೂ ಅವರ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ಪ್ರತ್ಯೇಕ ಕೊಠಡಿ ಕಲ್ಪಿಸುವುದಕ್ಕೂ ಜಾಗದ ಕೊರತೆ ಎದುರಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ತಳಮಹಡಿ, ನೆಲ ಮಹಡಿ ಹಾಗೂ ನಾಲ್ಕು ಮಹಡಿಗಳನ್ನು ಹೊಂದಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವು ಈಗಾಗಲೇ ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಕಚೇರಿಗಳಿಂದ ತುಂಬಿ ಹೋಗಿದೆ. ಇಲ್ಲಿನ ನೆಲ ಮಹಡಿಯಲ್ಲಿ ಜಿಲ್ಲಾಡಳಿತದ ಕಚೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ, ಒಬ್ಬರು ವಿಶೇಷ ಜಿಲ್ಲಾಧಿಕಾರಿಯವರ ಕೊಠಡಿ, ಚುನಾವಣಾ ಶಾಖೆ, ಚುನಾವಣಾ ತಹಶೀಲ್ದಾರ್‌, ಜಿಲ್ಲಾಡಳಿತದ ಇತರ ಸಿಬ್ಬಂದಿಯ ಕೊಠಡಿಗಳಿವೆ. ಮೊದಲ ಮಹಡಿಯಲ್ಲಿ ಜಿಲ್ಲಾಧಿಕಾರಿ ಅವರ ಕೊಠಡಿ, ಸಭಾಂಗಣ/ಕೋರ್ಟ್‌ ಹಾಲ್‌, ಕಾನೂನು ಸಲಹೆಗಾರರ ಕೊಠಡಿ, ವಿಶೇಷ ಜಿಲ್ಲಾಧಿಕಾರಿ ಕೊಠಡಿ ಮತ್ತು ಅವರ ಆಪ್ತ ಸಿಬ್ಬಂದಿ ಹಾಗೂ ಆಡಳಿತ ಶಾಖೆಯ ಕಚೇರಿಗಳಿವೆ. ಎರಡನೇ ಮಹಡಿಯು ಸಾರ್ವಜನಿಕ ಜಮೀನುಗಳ ನಿಗಮದ ಕಚೇರಿಗಳಿಗೆ ಬಳಕೆ ಆಗುತ್ತಿವೆ. ಮೂರನೇ ಮಹಡಿಯನ್ನು ಹಳೆ ದಾಖಲೆಗಳನ್ನು ಸಂಗ್ರಹಿಸುವುದಕ್ಕೆ ಬಳಸಲಾಗುತ್ತಿದೆ. ನಾಲ್ಕನೇ ಮಹಡಿಯಲ್ಲಿ ಮುಜರಾಯಿ, ಮೋಜಣಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಎನ್‌ಐಸಿ ಕಚೇರಿಗಳಿವೆ.

ವಿವಿಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ನ್ಯಾಯಿಕ, ಅರೆನ್ಯಾಯಿಕ, ಪ್ರಕರಣಗಳ ಪರಿಶೀಲನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ 2021ರ ಡಿ. 31ರಂದು ವಿಶೇಷ ಸಭೆ ನಡೆಸಲಾಗಿತ್ತು. ಆಗ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುವುದು ಕಂಡುಬಂದಿತ್ತು. ನಗರ ಜಿಲ್ಲೆಯ ಬೆಲೆಬಾಳುವ ಜಮೀನುಗಳ ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯುವುದಕ್ಕೆ ಹಾಗೂ ನಿಯಂತ್ರಿಸುವುದಕ್ಕೆ ಹಾಗೂ ಅರೆನ್ಯಾಯಿಕ ಪ್ರಕರಣಗಳನ್ನು ತ್ವರಿತ ವಿಲೇವಾರಿಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದರು. ಈ ಸಲುವಾಗಿ ಈಗಾಗಲೇ ಇರುವ ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳ ಜೊತೆಗೆ ಮತ್ತೊಬ್ಬರು ವಿಶೇಷ ಜಿಲ್ಲಾಧಿಕಾರಿ ಅವರನ್ನು ನೇಮಿಸಲು ಸಲಹೆ ನೀಡಿದ್ದರು.

ವಿಶೇಷ ಜಿಲ್ಲಾಧಿಕಾರಿ–3 ಅವರಿಗೆ 1964ರ ಭೂ ಕಂದಾಯ ಕಾಯ್ದೆಯ ಕಲಂ 136 (3) ಅಡಿ ದಾಖಲಾದ ಜಮೀನು ಸಂಬಂಧಿಸಿದ ದಾಖಲೆಗಳ ನೈಜತೆ ಪರಿಶೀಲನಾ ಪ್ರಕರಣಗಳು, ಒತ್ತುವರಿ ತೆರವು ಸ್ವಯಂಪ್ರೇರಿತ ಕ್ರಮ (ಮತ್ತು 67 (2), ಸೆಕ್ಷನ್‌ 39ರಡಿ ಹಾಗೂ ಸೆಕ್ಷನ್‌ 192 ಎ ಮತ್ತು ಬಿ ಅಡಿ ಒತ್ತುವರಿ ತೆರವು, ಸೆಕ್ಷನ್‌ 94 (3) ಅಡಿ ಭೂಮಂಜೂರಾತಿ ಪ್ರಕರಣಗಳು ಇನಾಂ ರದ್ದತಿ ಪ್ರಕರಣಗಳು, ಮಧ್ಯಸ್ಥಿಕೆ ಹಾಗೂ ಇತರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಹೊಣೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT