ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ಆಸ್ತಿ ಖರೀದಿ ಹೆಚ್ಚಳ

ನಗರದಲ್ಲಿ ಸ್ಥಿರಾಸ್ತಿ ದರ ಗಗನಮುಖಿ, ಗ್ರಾಮಾಂತರ ಜಿಲ್ಲೆಯತ್ತ ಖರೀದಿದಾರರ ವಲಸೆ
Published 8 ಅಕ್ಟೋಬರ್ 2023, 22:50 IST
Last Updated 8 ಅಕ್ಟೋಬರ್ 2023, 22:50 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳ ದರ ಗಗನಮುಖಿಯಾಗುತ್ತಿರುವುದರಿಂದ ಆಸ್ತಿ ಖರೀದಿದಾರರು ಬೆಂಗಳೂರು ಗ್ರಾಮಾಂತರದತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ. ನಗರಕ್ಕೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ದರ ತುಸು ಕಡಿಮೆ ಇರುವುದರಿಂದ ಅಲ್ಲಿ ಕೆಲವು ವರ್ಷಗಳಿಂದ ಈಚೆಗೆ ಸ್ಥಿರಾಸ್ತಿಗಳ ನೋಂದಣಿ ಹೆಚ್ಚುತ್ತಿದೆ.

‘ಪ್ರಜಾವಾಣಿ’ಗೆ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ, 2019–20 ರಿಂದ 2022–23ರ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳ ಖರೀದಿ– ಮಾರಾಟಕ್ಕೆ ಸಂಬಂಧಿಸಿದ ದಸ್ತಾವೇಜುಗಳ ನೋಂದಣಿಯಲ್ಲಿ ಶೇಕಡ 128 ರಷ್ಟು ಏರಿಕೆಯಾಗಿದೆ. 2019–20ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ₹ 439.15 ಕೋಟಿ ನೋಂದಣಿ ಮತ್ತು ಮುದ್ರಾಂಕ ತೆರಿಗೆ ಸಂಗ್ರಹವಾಗಿತ್ತು. 2023–24ರ ಮೊದಲ ಆರು ತಿಂಗಳಲ್ಲೇ ₹ 385.13 ಕೋಟಿ ತೆರಿಗೆ ಸಂಗ್ರಹವಾಗಿದೆ.

‘ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರಣದಿಂದ ಹೆಚ್ಚು ಅಭಿವೃದ್ಧಿಯಾಗಿದೆ. ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಹಾದುಹೋಗುತ್ತಿರುವುದರಿಂದ ಹೊಸಕೋಟೆಯಲ್ಲೂ ಆಸ್ತಿ ಖರೀದಿಗೆ ಬೇಡಿಕೆ ಹೆಚ್ಚಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ಖರೀದಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ’ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿಗಳು ಈ ಪ್ರದೇಶದಲ್ಲಿ ಬೃಹತ್‌ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿವೆ. ಬೃಹತ್‌ ಅಪಾರ್ಟ್‌ಮೆಂಟ್‌ಗಳು, ‘ಗೇಟೆಡ್‌’ ವಸತಿ ಪ್ರದೇಶಗಳು ಮತ್ತು ಉಪನಗರಗಳನ್ನು ನಿರ್ಮಿಸುತ್ತಿವೆ. ಕೈಗೆಟುಕುವ ದರ ಮತ್ತು ವೃತ್ತಿಯಲ್ಲಿ ಆಗಿರುವ ಬದಲಾವಣೆಗಳೂ ಬೆಂಗಳೂರು ಗ್ರಾಮಾಂತರದಲ್ಲಿ ಆಸ್ತಿ ಖರೀದಿಗೆ ಒಲವು ಹೆಚ್ಚಲು ಕಾರಣ ಎನ್ನುತ್ತಾರೆ ಖರೀದಿದಾರರು.

‘ನಗರದಲ್ಲಿ ಉತ್ತಮವಾದ ಸ್ಥಿರಾಸ್ತಿ ಖರೀದಿಸುವುದು ದುಬಾರಿ ಆಗುತ್ತಿದೆ. ಅದೇ ದರಕ್ಕೆ ಬೆಂಗಳೂರು ಗ್ರಾಮಾಂತರದ ವ್ಯಾಪ್ತಿಯಲ್ಲಿ ಉತ್ತಮವಾದ ಆಸ್ತಿ ಖರೀದಿಸಲು ಅವಕಾಶಗಳಿವೆ. ಈ ಪ್ರದೇಶಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ನಾನು ಮತ್ತು ಪತ್ನಿ ಇಬ್ಬರೂ ಹೆಚ್ಚಿನ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡುತ್ತೇವೆ (ವರ್ಕ್‌ ಫ್ರಮ್‌ ಹೋಂ). ಈ ಕಾರಣದಿಂದ ಈ ಪ್ರದೇಶದಲ್ಲೇ ಆಸ್ತಿ ಖರೀದಿಸುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದೆವು’ ಎನ್ನುತ್ತಾರೆ ದೇವನಹಳ್ಳಿಯಲ್ಲಿ ಫ್ಲ್ಯಾಟ್‌ ಖರೀದಿಸಿರುವ ಸುಮಂತ್‌.

ಈ ತಾಲ್ಲೂಕುಗಳಲ್ಲಿ ಸ್ಥಿರಾಸ್ತಿಗಳ ದರವೂ ನಿರಂತರವಾಗಿ ಏರುಗತಿಯಲ್ಲಿದೆ. ದೇವನಹಳ್ಳಿ ತಾಲ್ಲೂಕಿನ ಹಲವೆಡೆ ಎರಡರಿಂದ ಮೂರು ವರ್ಷಗಳ ಅವಧಿಯಲ್ಲೇ ಆಸ್ತಿಗಳ ದರವು ದುಪ್ಪಟ್ಟಾಗಿರುವ ಉದಾಹರಣೆಗಳೂ ಇವೆ ಎನ್ನುತ್ತವೆ ಮೂಲಗಳು.

‘ನಾಲ್ಕು ವರ್ಷಗಳಿಂದಲೂ ಬೆಂಗಳೂರು ಗ್ರಾಮಾಂತರದ ವ್ಯಾಪ್ತಿಯಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ವೇಗ ಪಡೆದಿವೆ. ಕೋವಿಡ್‌ ಅವಧಿಯಲ್ಲೇ ಈ ಭಾಗದಲ್ಲಿ ಸ್ಥಿರಾಸ್ತಿಗಳ ಖರೀದಿಯಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. ಆ ಬಳಿಕ ಸ್ಥಿರಾಸ್ತಿಗಳ ದರವೂ ಏರುಗತಿಯಲ್ಲಿದೆ. ಕೆಲವು ಪ್ರಮುಖ ಪ್ರದೇಶಗಳಲ್ಲಿ ಪ್ರತಿ ಚದರ ಅಡಿಗೆ ₹ 4,000 ದರ ಇತ್ತು. ಈಗ ಅದು ₹ 7,500ಕ್ಕೆ ಏರಿಕೆಯಾಗಿದೆ’ ಎಂದು ಹೊಸಕೋಟೆಯ ನ್ಯೂಫೋರ್ಟ್‌ ರಿಯಲ್‌ ಎಸ್ಟೇಟ್‌ನ ಮಾಲೀಕ ಮೊಹಮ್ಮದ್ ಶಫತ್‌ ತಿಳಿಸಿದರು.

ಪಂಚಾಯಿತಿಗಳ ಮೇಲೆ ಹೆಚ್ಚಿದ ಒತ್ತಡ

ಸ್ಥಿರಾಸ್ತಿಗಳ ಖರೀದಿ ಹೆಚ್ಚಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಘನತ್ಯಾಜ್ಯ ವಿಲೇವಾರಿ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಸವಾಲುಗಳು ಎದುರಾಗಿವೆ.

‘ಹೊಸಕೋಟೆ, ದೇವನಹಳ್ಳಿ ಸೇರಿದಂತೆ ವೇಗವಾಗಿ ನಗರೀಕರಣ ನಡೆಯುತ್ತಿರುವ ಪ್ರದೇಶಗಳಲ್ಲಿ ಗ್ರಾಮೀಣ ಸ್ಥಳೀಯ ಆಡಳಿತಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಕೆಲವೆಡೆ ಘನತ್ಯಾಜ್ಯ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ರಸ್ತೆಗಳ ಬದಿಗಳಲ್ಲಿ ಘನತ್ಯಾಜ್ಯದ ರಾಶಿಗಳು ಕಂಡುಬರುತ್ತಿವೆ’ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧಾ ಕೆ.ಎನ್‌.

ಕೆಲವು ಗ್ರಾಮ ಪಂಚಾಯಿತಿಗಳು ಘನತ್ಯಾಜ್ಯ ಸಂಗ್ರಹ ಮತ್ತು ವಿಂಗಡಣೆಗೆ ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ನೆರವು ಪಡೆಯುತ್ತಿವೆ. ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಕೆಲವು ಪಂಚಾಯಿತಿಗಳು ಯೋಜನೆ ರೂಪಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT