ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ಸುತ್ತುವ ಮುನ್ನವೇ ಪ್ರಾಣ ಬಿಟ್ಟರು!

ಕ್ರಿಕೆಟ್‌ ಟೂರ್ನಾಮೆಂಟ್‌ಗೆ ಹೆಸರಾಗಿದ್ದ ‘ಇಲೆವೆನ್ ರಂಗ’ l ಆಸ್ಪತ್ರೆ ಕಟ್ಟಿ ಆರೋಗ್ಯ ಜಾಗೃತಿ ಮೂಡಿಸಿದ್ದ ಶಿವಣ್ಣ
Last Updated 22 ಏಪ್ರಿಲ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ದ್ವೀಪ ರಾಷ್ಟ್ರ ಶ್ರೀಲಂಕಾದ ನೈಸರ್ಗಿಕ ಸೌಂದರ್ಯ ಸವಿಯಲು ಪ್ರವಾಸಕ್ಕೆ ಹೋಗಿದ್ದ ಅವರು, ಶಾಂಗ್ರಿಲಾ ಹೋಟೆಲ್‌ನಲ್ಲಿ ಇನ್ನೇನು ತಿಂಡಿ ತಿಂದು, ಲಂಕಾ ಸುತ್ತಲು ಅನುವಾಗುತ್ತಿದ್ದರು. ಅಷ್ಟರಲ್ಲಿ ಸಂಭವಿಸಿದ ಭೀಕರ ಸ್ಫೋಟ ಅವರ ಬದುಕಿನ ಯಾತ್ರೆಯನ್ನೇ ಅಂತ್ಯಗೊಳಿಸಿಬಿಟ್ಟಿತು.

ಶ್ರೀಲಂಕಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ದಾಸರಹಳ್ಳಿ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು, ಉದ್ಯಮಿಗಳಾಗಿ ಜೊತೆಯಾಗಿದ್ದವರು. ರಾಜಕೀಯದಲ್ಲೂ ಬೆಳೆದು ಮುಖಂಡರಾಗಿ ಗುರುತಿಸಿಕೊಂಡು ಕಾರ್ಯಕರ್ತರ ದೊಡ್ಡ ಪಡೆಯನ್ನೇ ಕಟ್ಟಿದ್ದರು. ಪ್ರವಾಸಕ್ಕೆ ಹೋಗುವ ಹವ್ಯಾಸ ಬೆಳೆಸಿಕೊಂಡಿದ್ದ ಅವರು, ಸಮಯ ಸಿಕ್ಕಾಗಲೆಲ್ಲ ಹೊರ ದೇಶಗಳನ್ನು ಸುತ್ತಿ ಬರುತ್ತಿದ್ದರು. ಆದರೆ, ಈ ಬಾರಿ ಪ್ರವಾಸಕ್ಕೆ ಹೋದ ಅವರೆಲ್ಲ ವಾಪಸು ಬರಲೇ ಇಲ್ಲ.

ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದ ಅವರೆಲ್ಲ, ಚುನಾವಣೆ ನಂತರ ಶ್ರೀಲಂಕಾಕ್ಕೆ ಹೋಗಲು ಮೊದಲೇ ಟಿಕೆಟ್ ಹಾಗೂ ಹೋಟೆಲ್ ಕೊಠಡಿ ಕಾಯ್ದಿರಿಸಿದ್ದರು. ಅಂದುಕೊಂಡಂತೆ ಏಪ್ರಿಲ್ 20ರಂದು ರಾತ್ರಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಿಂದ ಕೊಲಂಬೊದತ್ತ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.

ನಸುಕಿನಲ್ಲಿ ಕೊಲಂಬೊ ತಲುಪಿ ಶಾಂಗ್ರಿಲಾ ಹೋಟೆಲ್ ಪ್ರವೇಶಿಸಿ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು.‘ಇವತ್ತು ಬೇಗನೇ ತಿಂಡಿ ತಿಂದು, ದಿನಪೂರ್ತಿ ಸಾಧ್ಯವಾದಷ್ಟು ಶ್ರೀಲಂಕಾವನ್ನು ಸುತ್ತಿ ಬರೋಣ’ ಎಂದು ಪರಸ್ಪರ ಅಂದುಕೊಳ್ಳುತ್ತಿದ್ದರು. ಅದಕ್ಕಾಗಿ ತರಾತುರಿಯಲ್ಲಿ ಸ್ನಾನ ಮುಗಿಸಿ ಬೆಳಿಗ್ಗೆ 8.10ಕ್ಕೆ ಹೋಟೆಲ್‌ನ ತಿಂಡಿ ಕೊಠಡಿಯಲ್ಲಿ ಹಾಜರಿದ್ದರು.

ಅಲ್ಲಿಂದಲೇ ಪುತ್ರ ಚೇತನ್‌ಕುಮಾರ್‌ಗೆ ಕರೆ ಮಾಡಿದ್ದ ಮುಖಂಡ ಕೆ.ಜಿ.ಹನುಮಂತರಾಯಪ್ಪ, ‘ಸುರಕ್ಷಿತವಾಗಿ ಕೊಲಂಬೊಗೆ ಬಂದು ತಲುಪಿದ್ದೇವೆ. ಈಗತಾನೇ ತಿಂಡಿ ತಿನ್ನಲು ಬಂದಿದ್ದೇವೆ. ತಿಂಡಿ ತಿಂದು ಆಮೇಲೆ ನಿನಗೆ ಕರೆ ಮಾಡುತ್ತೇನೆ’ ಎಂದು ತಿಳಿಸಿದ್ದರು.

ನಂತರ, ಪ್ರತಿಯೊಬ್ಬರು ತಮ್ಮಿಷ್ಟದ ತಿಂಡಿಗಳನ್ನು ಆರ್ಡರ್ ಮಾಡಿದ್ದರು. ಇನ್ನೇನು ತಿಂಡಿ ಡೈನಿಂಗ್‌ ಟೇಬಲ್‌ಗೆ ಬರಬೇಕು ಎನ್ನುಷ್ಟರಲ್ಲೇ ಸಂಭವಿಸಿದ ಆ ದೊಡ್ಡದೊಂದು ಸ್ಫೋಟ ಸ್ನೇಹಿತರೆಲ್ಲರನ್ನೂ ಚಿಲ್ಲಾಪಿಲ್ಲಿ ಮಾಡಿತು. 150ಕ್ಕೂ ಹೆಚ್ಚು ಮಂದಿ ದೇಹಗಳು ಛಿದ್ರವಾಗಿ ಬಿದ್ದು, ಇಡೀ ಕೊಠಡಿ ರಕ್ತಸಿಕ್ತವಾಯಿತು. ನರಳಾಟ ಚೀರಾಟ ಕೇಳಿ ಹೋಟೆಲ್‌ನಲ್ಲಿದ್ದ ಪ್ರವಾಸಿಗರೆಲ್ಲರೂ ಹೊರಗೆ ಓಡಿ ಹೋದರು. ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು, ಕಾರ್ಯಾಚರಣೆ ಕೈಗೊಂಡು ಶವಗಳನ್ನು ಸಾಗಿಸಿದರು.

ಸ್ಟೋರ್‌ ರೂಮ್ ಕೆಲಸದಿಂದ ಕಾರ್ಯಾಧ್ಯಕ್ಷರಾಗಿದ್ದರು: ‘ಮೃತರಲ್ಲಿ ಒಬ್ಬರಾದ ಕೆ.ಜಿ. ಹನುಮಂತರಾಯಪ್ಪ, ಬೂದಿಹಾಳ ಸಮೀಪದ ಕಾಚಹಳ್ಳಿಯವರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ’ ಎಂದು ಸಂಬಂಧಿ ಶ್ರೀನಿವಾಸ್‌ ಹೇಳಿದರು.

‘ಸಣ್ಣ ವಯಸ್ಸಿನಲ್ಲೇ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಅವರು ಹಿಮಾಲಯ ಡ್ರಗ್ ಹೌಸ್‌ನ ಸ್ಟೋರ್‌ ರೂಮ್ ವಿಭಾಗದಲ್ಲಿ ಕೆಲಸ ಮಾಡಿದ್ದರು. ರಿಯಲ್ ಎಸ್ಟೇಟ್ ಉದ್ಯಮದತ್ತ ಮುಖ ಮಾಡಿದ್ದ ಅವರುಭುವನೇಶ್ವರಿನಗರದಲ್ಲಿ ಮಾತೋಶ್ರೀ ಡೆವಲಪರ್ಸ್‌ ಕಚೇರಿ ತೆರೆದಿದ್ದರು. ಹಲವು ಬಡಾವಣೆಗಳನ್ನು ನಿರ್ಮಿಸಿ ಆರ್ಥಿಕವಾಗಿ ಸಬಲರಾಗಿದ್ದರು. ಜೆಡಿಎಸ್‌ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶಿಸಿದರು. ಅವರ ಕೆಲಸವನ್ನು ಮೆಚ್ಚಿದ ಮುಖಂಡರು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಿಸಿದ್ದರು’ ಎಂದರು.

‘ವರ್ಷದಲ್ಲಿ ಹಲವು ಬಾರಿ ಪ್ರವಾಸಕ್ಕೆ ಹೋಗಿ ಬರುತ್ತಿದ್ದರು. ಸ್ನೇಹಿತರು, ಸಂಬಂಧಿಕರು ಹಾಗೂ ನೆರೆಹೊರೆಯವರನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು’ ಎಂದು ಹೇಳಿದರು.

ಸ್ನೇಹಿತ ನಾರಾಯಣಗೌಡ, ‘ಎರಡು ವರ್ಷದ ಹಿಂದೆ ನಾನು ಸಹ ಹನುಮಂತರಾಯಪ್ಪ ಜೊತೆಯುರೋಪ್, ಶ್ರೀಲಂಕಾ, ಥಾಯ್ಲೆಂಡ್‌ ಪ್ರವಾಸಕ್ಕೆ ಹೋಗಿ ಬಂದಿದ್ದೆ. ಎಲ್ಲರನ್ನೂ ಅವರು ಮನೆಯವರಂತೆ ಕಾಣುತ್ತಿದ್ದರು’ ಎಂದರು.

ಕ್ರಿಕೆಟ್‌ ಮೂಲಕ ಹೆಸರಾಗಿದ್ದ ‘ಇಲೆವೆನ್ ರಂಗ’: ‘ಮೃತ ಎಂ. ರಂಗಪ್ಪ, ಕ್ರೀಡಾಪಟು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ. ಪ್ರತಿ ವರ್ಷವೂ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸುತ್ತಿದ್ದ ಅವರು ‘ಇಲೆವೆನ್ ರಂಗ’ ಎಂದೇ ಖ್ಯಾತರಾಗಿದ್ದರು’ ಎಂದು ಸ್ನೇಹಿತರು ಹೇಳಿದರು.

‘ಅವರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ. ಜೆಡಿಎಸ್‌ ಪಕ್ಷದ ಕಾರ್ಯಕರ್ತರಾಗಿದ್ದ ಅವರನ್ನುದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬೂತ್ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು’ ಎಂದರು.

ಆಸ್ಪತ್ರೆ ಕಟ್ಟಿದ್ದ ಶಿವಣ್ಣ: ‘ಮೃತ ಜೆಡಿಎಸ್ ಮುಖಂಡ ಎಚ್‌.ಶಿವಕುಮಾರ್, ‘ಗೋವೆನಹಳ್ಳಿ ಶಿವಣ್ಣ’ ಎಂದೇ ಪರಿಚಿತರು. ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿದ್ದ ಅವರು ಪಾಲುದಾರಿಕೆಯಲ್ಲಿ ಹರ್ಷ ಆಸ್ಪತ್ರೆ ಕಟ್ಟಿದ್ದರು. ಆ ಮೂಲಕ ಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸುತ್ತಿದ್ದರು’ ಎಂದು ಸ್ನೇಹಿತರು ಹೇಳಿದರು.

ಸಹೋದರ ಎಸ್‌.ಎಂ.ಟಿ.ಪ್ರಕಾಶ್‌, ‘ನೆಲಮಂಗಲ ಜನರ ಇಷ್ಟದ ನಾಯಕ ಅವರಾಗಿದ್ದರು. ಅವರ ಪತ್ನಿ ಸುನಂದಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ. ಮಗ ಮಂಜುನಾಥ್ ವೈದ್ಯ ಆಗಿದ್ದಾರೆ. ಮಗಳು ಪವಿತ್ರಾ ಅವರನ್ನು ಆರು ತಿಂಗಳ ಹಿಂದಷ್ಟೇ ಮದುವೆ ಮಾಡಿಕೊಡಲಾಗಿದೆ’ ಎಂದು ತಿಳಿಸಿದರು.

‘ಶ್ರೀಲಂಕಾ ತಲುಪಿದ ನಂತರ ಮನೆಗೆ ಕರೆ ಮಾಡಿ ತಿಳಿಸಿದ್ದರು. ಸ್ಫೋಟದ ನಂತರ ಯಾವುದೇ ಕರೆ ಮಾಡಿರಲಿಲ್ಲ’ ಎಂದು ಹೇಳಿದರು.

ಸಂಬಂಧಿಕರಿಗೆ ಸಾಂತ್ವನ: ಮೃತ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವ ಕೃಷ್ಣ ಬೈರೇಗೌಡ, ಸಂಸದ ವೀರಪ್ಪ ಮೊಯಿಲಿ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಸಂಬಂಧಿಕರಿಗೆ ಸಾಂತ್ವನ

ಮೃತ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವ ಕೃಷ್ಣ ಬೈರೇಗೌಡ, ಸಂಸದ ವೀರಪ್ಪ ಮೊಯ್ಲಿ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

‘ಹೇಯ ಕೃತ್ಯದ ವಿರುದ್ಧ ಹೋರಾಡಬೇಕಿದೆ’

ಶ್ರೀಲಂಕಾದ ಬಾಂಬ್ ಸ್ಫೋಟ ಕೃತ್ಯವನ್ನು ಖಂಡಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ‘ಇದೊಂದು‌ ಹೇಯ ಕೃತ್ಯ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ’ ಎಂದರು.

‘ಶಾಂತಿ ನೆಮ್ಮದಿ ಹಾಳು ಮಾಡುವ ಕೆಲಸ ಇದಾಗಿದೆ. ಈ ಹೇಯ ಕೃತ್ಯ ನಿಲ್ಲಿಸುವವರೆಗೂ ಜಗತ್ತಿಗೆ ಶಾಂತಿ ಇಲ್ಲ’ ಎಂದು ಹೇಳಿದರು.

‘ಸಂತ್ರಸ್ತರಿಗೆ ನಮ್ಮ ದೇಶ ಕೂಡಾ ನೆರವು ನೀಡಬೇಕು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಶ್ರೀಲಂಕಾದಲ್ಲಿರುವ ಕನ್ನಡಿಗರನ್ನು ರಕ್ಷಿಸುವಂತೆ ಮನವಿ ಮಾಡಿದ್ದೇನೆ’ ಎಂದರು.

ವಾಪಸು ಬಂದ ಕನ್ನಡಿಗರು

ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ಐವರು ಸೋಮವಾರ ನಗರಕ್ಕೆ ಸುರಕ್ಷಿತವಾಗಿ ವಾಪಸು ಬಂದಿದ್ದಾರೆ.

ಜಯನಗರ ನಿವಾಸಿಗಳಾದ ರಾಜಾರಾಮ್, ರಾಮರತ್ನಂ, ಜ್ಯೋತಿ, ಮುರಳಿ ಹಾಗೂ ಶ್ರೀನಿವಾಸ್ ಎಂಬುವರು ಇತ್ತೀಚೆಗೆ ಶ್ರೀಲಂಕಾಕ್ಕೆ ಹೋಗಿದ್ದರು. ಶಾಂಗ್ರಿಲಾ ಹೋಟೆಲ್‌ನಲ್ಲಿ ಉಳಿದುಕೊಂಡು ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಾಡಿದ್ದರು.

ಬಾಂಬ್‌ ಸ್ಫೋಟದ ದಿನ ಅವರೆಲ್ಲ ಹೋಟೆಲ್‌ನ ಕೊಠಡಿಯಲ್ಲಿದ್ದರು. ಹೀಗಾಗಿ, ಅವರಿಗೆ ಯಾವುದೇ ಅಪಾಯವಾಗಿಲ್ಲ. ಅನಾಹುತದಿಂದ ಪಾರಾದ ಅವರೆಲ್ಲರೂ ವಿಮಾನದಲ್ಲಿ ಸೋಮವಾರ ಸಂಜೆ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

50 ಮಂದಿ ಕನ್ನಡಿಗರು ಪಾರು

ಬಾಂಬ್ ಸ್ಫೋಟ ಸಂಭವಿಸಿದ್ದ ಶ್ರೀಲಂಕಾ ಕೊಲಂಬೊದ ಶಾಂಗ್ರಿಲ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ 50ಕ್ಕೂ ಹೆಚ್ಚು ಕನ್ನಡಿಗರು ಅಪಾಯದಿಂದ ಪಾರಾಗಿದ್ದಾರೆ.

ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಶ್ರೀಲಂಕಾಕ್ಕೆ ಹೋಗಿದ್ದರು. ಶಾಂಗ್ರಿಲ್ ಹೋಟೆಲ್‌ನಲ್ಲಿ ತಮ್ಮ ಪಾಸ್‌ಪೋರ್ಟ್‌ಗಳನ್ನು ತೋರಿಸಿ ಹೆಸರು ನಮೂದಿಸಿ ಕೊಠಡಿಗಳನ್ನು ಪಡೆದುಕೊಂಡಿದ್ದರು.

ಸ್ಪೋಟದ ನಂತರ ಶವಗಳನ್ನು ಗುರುತಿಸಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು, ಹೋಟೆಲ್‌ನ ನೋಂದಣಿ ಪುಸ್ತಕ ಪರಿಶೀಲಿಸಿದ್ದರು. ಅದರಿಂದಲೇ ಭಾರತೀಯರೆಲ್ಲರ ಮಾಹಿತಿ ಲಭ್ಯವಾಗಿದೆ.

ಎಲ್ಲಿ ನೋಡಿದರಲ್ಲಿ ಶವ, ಕಾಲಿಟಲ್ಲೆಲ್ಲ ರಕ್ತ

ಬೆಂಗಳೂರು: ಜೆಡಿಎಸ್ ಮುಖಂಡರ ತಂಡ ಪ್ರವಾಸಕ್ಕೆ ಹೋಗಿದ್ದ ರೀತಿಯಲ್ಲೇ ದಾಸರಹಳ್ಳಿಯ ಕೆಲ ಯುವಕರು ಪ್ರತ್ಯೇಕವಾಗಿ ಶ್ರೀಲಂಕಾಕ್ಕೆ ಹೋಗಿದ್ದಾರೆ. ಸ್ಫೋಟದ ಭೀಕರತೆಯನ್ನು ಹತ್ತಿರದಿಂದಲೇ ಕಂಡು ಅವರೆಲ್ಲ ಬಿಚ್ಚಿಬಿದ್ದಿದ್ದಾರೆ.

ಸದ್ಯ ಶ್ರೀಲಂಕಾದಲ್ಲೇ ಉಳಿದುಕೊಂಡಿರುವ ದಾಸರಹಳ್ಳಿಯ ಬಾಲು, ಸೋಮವಾರ ‘ಪ್ರಜಾವಾಣಿ’ ಜೊತೆ ಮಾತನಾಡಿ ಸ್ಫೋಟದ ಭೀಕರತೆಯನ್ನು ತೆರೆದಿಟ್ಟರು.

‘ಹನುಮಂತರಾಯಪ್ಪ ಅವರು ಬೇರೊಂದು ತಂಡದಲ್ಲಿ ಪ್ರವಾಸಕ್ಕೆ ಹೋಗಿದ್ದರು. ಅದು ನಮಗೆ ಗೊತ್ತಿರಲಿಲ್ಲ. ನಾವು ಪ್ರತ್ಯೇಕವಾಗಿ ಹೋಗಿದ್ದೇವೆ. ಸ್ಫೋಟ ಸಂಭವಿಸಿದ ದಿನ ನಾವೂ ಶ್ರೀಲಂಕಾದಲ್ಲೇ ಇದ್ದೆವು. ಆದರೆ, ಬೇರೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆವು’ ಎಂದು ಹೇಳಿದರು.

‘ಶಾಂಗ್ರಿಲಾ ಹೋಟೆಲ್‌ನಲ್ಲಿ ಸ್ಫೋಟದಲ್ಲಿ ಬೆಂಗಳೂರಿನವರು ಮೃತಪಟ್ಟಿದ್ದಾರೆ ಎಂದು ಸ್ನೇಹಿತರು ಕರೆ ಮಾಡಿ ತಿಳಿಸುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದೆ. ಅಲ್ಲಿಯ ಭೀಕರತೆ ಕಂಡು ಬೆಚ್ಚಿಬಿದ್ದೆ. ಎಲ್ಲಿ ನೋಡಿದರಲ್ಲಿ ಶವಗಳಿದ್ದು, ಕಾಲಿಟ್ಟಲೆಲ್ಲ ರಕ್ತವೋ ರಕ್ತ. ಅಲ್ಲಿ ಬೆಂಗಳೂರಿಗರನ್ನು ಹುಡುಕುವುದು ಕಷ್ಟವಾಯಿತು. ಅಷ್ಟರಲ್ಲೇ ಪೊಲೀಸರು, ನಮ್ಮನ್ನು ಅಲ್ಲಿಂದ ಕಳುಹಿಸಿ ಆಸ್ಪತ್ರೆಗೆ ಬರುವಂತೆ ಹೇಳಿದರು’ ಎಂದು ಅವರು ವಿವರಿಸಿದರು.

‘ರಾತ್ರಿ ಆಸ್ಪತ್ರೆಗೆ ಹೋಗಿ ಶವಗಳನ್ನು ಗುರುತಿಸಲು ಯತ್ನಿಸಿದ್ದೆ. ಆದರೆ, ನೂರಾರು ಶವಗಳಿದ್ದರಿಂದ ಎಲ್ಲವನ್ನೂ ನೋಡಲು ಆಗಲಿಲ್ಲ. ಸೋಮವಾರ ಬೆಳಿಗ್ಗೆ ಪುನಃ ಆಸ್ಪತ್ರೆಗೆ ಹೋಗಿ ನೆಲಮಂಗಲದ ಲಕ್ಷ್ಮಿನಾರಾಯಣ ಹಾಗೂ ಎಚ್‌.ಶಿವಕುಮಾರ್ ಅವರ ಶವಗಳನ್ನು ಗುರುತಿಸಿ ಅವುಗಳ ಫೋಟೊಗಳನ್ನು ಬೆಂಗಳೂರಿನ ಸ್ನೇಹಿತರಿಗೆ ಕಳುಹಿಸಿದೆ. ನಂತರ, ಕರ್ನಾಟಕದ ಹಲವರು ಹಾಗೂ ರಾಯಭಾರಿ ಕಚೇರಿ ಅಧಿಕಾರಿಗಳು ಆಸ್ಪತ್ರೆಗೆ ಬಂದರು. ಎಲ್ಲರೂ ಸೇರಿಯೇ ಉಳಿದೆಲ್ಲರ ಶವಗಳನ್ನು ಗುರುತಿಸಿದೆವು’ ಎಂದು ಹೇಳಿದರು.

**

ನಾಗರಿಕರನ್ನು ಗುರಿಯಾಗಿಸಿಕೊಂಡು ಎಸಗುವ ಇಂಥ ಕೃತ್ಯವನ್ನು ಖಂಡಿಸುತ್ತೇನೆ. ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
– ಎಂ.ಬಿ.ಪಾಟೀಲ, ಗೃಹ ಸಚಿವ

**

ಚುನಾವಣೆ ವೇಳೆ ನನ್ನ ಪರವಾಗಿ ಪ್ರಚಾರಕ್ಕೆ ಈ ಮುಖಂಡರು ಬಂದಿದ್ದರು. ಪ್ರಾಮಾಣಿಕ ಕೆಲಸ ಮಾಡಿದ್ದರು. ನಾವೆಲ್ಲರೂ ಅಮೂಲ್ಯವಾದ ಜೀವಗಳನ್ನು ಕಳೆದುಕೊಂಡಿದ್ದೇವೆ
– ವೀರಪ್ಪ ಮೊಯಿಲಿ, ಸಂಸದ

**

ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನಾಹುತ ಆಗಿದೆ. ಕೃತ್ಯ ಎಸಗಿದವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT