ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತಿ ಬಯಸಿದ ಅಭ್ಯರ್ಥಿಗಳು

ಅಮ್ಮ, ಮಗನೊಂದಿಗೆ ತಾಯಂದಿರ ದಿನ ಆಚರಿಸಿದ ಬಿಜೆಪಿ ಅಭ್ಯರ್ಥಿ
Last Updated 14 ಮೇ 2018, 10:34 IST
ಅಕ್ಷರ ಗಾತ್ರ

ಕೆಜಿಎಫ್‌: ಟಿಕೆಟ್ ಪಡೆಯಲು ಕಸರತ್ತು. ಟಿಕೆಟ್ ಪಡೆದ ನಂತರ ಮತದಾರರ ಒಲವು ಪಡೆಯಲು ನಿರಂತರ ಓಡಾಟ
ಗಳಿಂದ ಬಳಲಿದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯ ಮರು ದಿನವಾದ ಭಾನುವಾರ ಸಂಪೂರ್ಣವಾಗಿ ವಿಶ್ರಾಂತಿಗೆ ಶರಣಾಗಿದ್ದರು.

ಚುನಾವಣೆ ದಿನದಂದೇ ಬಹುತೇಕ ಒಂದು ಸಮಗ್ರ ಮಾಹಿತಿಯನ್ನು ಕ್ಷೇತ್ರದಲ್ಲಿ ಪಡೆದಿರುವ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮನೆ ಬಿಟ್ಟು ಕದಲಲಿಲ್ಲ. ಬಿಜೆಪಿ ಅಭ್ಯರ್ಥಿ ಎಸ್‌.ಅಶ್ವಿನಿ ಬೆಂಗಳೂರಿನ ತನ್ನ ತಾಯಿ ಮನೆ ಸೇರಿಕೊಂಡಿದ್ದಾರೆ. ಚುನಾವಣೆಯ ಕಾವಿನಲ್ಲಿದ್ದಾಗ ತನ್ನ ನಾಲ್ಕು ವರ್ಷದ ಮಗ ಶಂಕರ್ ಆರ್ಯನ್‌ನಿಂದ ದೂರವಾಗಿದ್ದ ಅವರು ‘ಅಮ್ಮನ ದಿನ’ವನ್ನು ಇಡೀ ದಿನ ಆಚರಣೆ ಮಾಡಿದರು.

ಮನೆಯಲ್ಲಿ ಮಗನೊಂದಿಗೆ ಹಾಗೂ ತಾಯಿಯೊಂದಿಗೆ ಕಾಲ ಕಳೆದ ಅವರು, ಕ್ಷೇತ್ರದ ಹೆಚ್ಚುವರಿ ಜವಾಬ್ದಾರಿಯನ್ನು ತನ್ನ ತಂದೆ ವೈ.ಸಂಪಂಗಿಗೆ ಕೊಟ್ಟು ನಿಶ್ಚಿಂತೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಕೂಡ ಬೆಂಗಳೂರಿನ ತಮ್ಮ ಇಂದಿರಾನಗರದ ನಿವಾಸದಲ್ಲಿ ಇಡೀ ದಿನ ಕಳೆದರು. ಇಬ್ಬರು ಮಕ್ಕಳೊಂದಿಗೆ ದಿನ ಕಳೆದರು. ಆಗಾಗ ಕೆಲ ಪ್ರಮುಖ ನಾಯಕರ ಫೋನ್‌ಗಳನ್ನು ಆಲಿಸಿದ್ದನ್ನು ಬಿಟ್ಟರೆ ಬಹುತೇಕ ಕರೆಗಳಿಗೆ ಸ್ಪಂದನೆ ನೀಡಲಿಲ್ಲ.

ಜೆಡಿಎಸ್‌ ಅಭ್ಯರ್ಥಿ ಎಂ.ಭಕ್ತವತ್ಸಲಂ ಮಾತ್ರ ಕಾರ್ಯಕರ್ತರ ಜತೆ ಸಕ್ರಿಯವಾಗಿದ್ದರು. ರಾಬರ್ಟಸನ್‌ ಪೇಟೆಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಜತೆ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದರು. ಯಾವ ಯಾವ ಮತಗಟ್ಟೆಗಳಲ್ಲಿ ಏನೇನು ನಡೆದಿದೆ. ಯಾವ ಮುಖಂಡರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ವರದಿಯನ್ನು ಕೇಳುತ್ತಿದ್ದರು.

ಈ ಮಧ್ಯೆ ಚುನಾವಣೆ ಸಿಬ್ಬಂದಿ ಸಂಪೂರ್ಣವಾಗಿ ವಿಶ್ರಾಂತಿಗೆ ಶರಣಾಗಿದ್ದರು. ಕಳೆದ ನಾಲ್ಕು ದಿನಗಳಿಂದ ರಾತ್ರಿ ಹಗಲು ಕೆಲಸ ನಿರ್ವಹಿಸಿದ್ದ ಅವರು, ತಮ್ಮ ಮೊಬೈಲ್ ಸ್ವಿಚ್‌ ಆಫ್ ಮಾಡಿದ್ದರು. ಕ್ಷೇತ್ರದ ಒಟ್ಟು ಮತದಾನದ ವಿವರ ಬಂದಿದ್ದರೂ (ಶೇ 72) ಬೂತ್‌ವಾರು ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟು ಬಿದ್ದ ಮತಗಳ ವಿವರ ಪಡೆಯಲು ರಾಜಕೀಯ ಪಕ್ಷಗಳ ಧುರೀಣರು ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT