ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಬ್ ಅರ್ಬನ್’ ರೈಲು ಅತಂತ್ರ

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
Last Updated 16 ಫೆಬ್ರುವರಿ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಹಲವು ಕಂಟಕಗಳು ಎದುರಾಗಿರುವ ಕಾರಣ ಯೋಜನೆ ಜಾರಿ ಸಂಬಂಧ ತಕ್ಷಣ ಸ್ಪಷ್ಟ ನಿರ್ಧಾರ ಹೊರಬೀಳುವುದು ಅನುಮಾನ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್ ಸಿಂಗ್ ಹೇಳಿದರು.

ಯಶವಂತಪುರ ರೈಲ್ವೆ ನಿಲ್ದಾಣದ ಮರು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು.

‘ಯೋಜನೆಯ ಅಂದಾಜು ವೆಚ್ಚ ₹ 20 ಸಾವಿರ ಕೋಟಿ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಯೋಜನೆಯ ಮಾರ್ಗವನ್ನು ವಿಸ್ತರಿಸಿ ವೆಚ್ಚವನ್ನು ₹ 30 ಸಾವಿರ ಕೋಟಿಗೆ ಹೆಚ್ಚಿಸಬೇಕು ಎಂಬ ಬೇಡಿಕೆ ಇಟ್ಟಿದೆ’ ಎಂದು ಹೇಳಿದರು.

ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಆರ್‌.ಎಸ್‌.ಸಕ್ಸೇನಾ, ‘ವೈಟ್‌ಫೀಲ್ಡ್–ಹೊಸೂರು, ಹೊಸೂರು–ಯಶವಂತಪುರ, ಬೆಂಗಳೂರು ನಗರ–ಬೈಯಪ್ಪನಹಳ್ಳಿ, ಬೆಂಗಳೂರು ನಗರ–ಕೆಂಗೇರಿ... ಹೀಗೆ ಕಡಿಮೆ ಅಂತರದ ಮಾರ್ಗಗಳ ನಡುವೆ ರೈಲು ಸಂಪರ್ಕ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿತ್ತು. ಅದರ ಆಧಾರದ ಮೇಲೆಯೇ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಆದರೆ, ರಾಜ್ಯ ಸರ್ಕಾರ ರೈಲು ಸೇವೆಯನ್ನು ಹತ್ತಿರದ ನಗರಗಳಿಗೆ ವಿಸ್ತರಿಸಬೇಕು ಎಂಬ ಪ್ರಸ್ತಾವ ಮುಂದಿಟ್ಟಿದೆ. ಸರ್ಕಾರ ವಿಧಿಸಿರುವ 19 ಷರತ್ತುಗಳಲ್ಲಿ ಇದೂ ಒಂದು’ ಎಂದರು.

‘ಸರ್ಕಾರ ಜಾಗ ನೀಡಿದರೆ ಉಪನಗರ ರೈಲು ಸಂ‍ಪರ್ಕ ಕಲ್ಪಿಸಲು ನೈರುತ್ಯ ರೈಲ್ವೆ ಸಿದ್ಧವಿದೆ. ಆದರೆ, ಈ ಹಿಂದೆ ಮುಖ್ಯಮಂತ್ರಿ ಅವರು ನಡೆಸಿದ ಸಭೆಯಲ್ಲಿ ಮೆಟ್ರೊ ಇರುವ ಕಡೆಗಳಲ್ಲಿ ಉಪನಗರ ರೈಲು ಯೋಜನೆ ಕೈಬಿಡುವಂತೆ ಹೇಳಿದ್ದರು. ಆದ್ದರಿಂದ ಅವರ ಸೂಚನೆಯನ್ನು ಅನುಸರಿಸುತ್ತಿದ್ದೇವೆ’ ಎಂದೂ ಹೇಳಿದರು.

ಯಶವಂತಪುರ ರೈಲ್ವೆ ನಿಲ್ದಾಣದ ಮರು ಅಭಿವೃದ್ಧಿಗೆ ಉದ್ದೇಶಿರುವ ವಿವಿಧ ಕಾಮಗಾರಿಗಳಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಶಂಕುಸ್ಥಾಪನೆ ನೆರವೇರಿಸಿದರು.

‘ಡೆಮು’ ಮಾರ್ಗ ವಿಸ್ತರಣೆ

ಯಶವಂತಪುರ–ದೇವನಹಳ್ಳಿಯವರೆಗೆ ಸಂಚರಿಸುವ ಡೆಮು ರೈಲು ಸೇವೆಯನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸಲಾಗಿದೆ. ಈ ರೈಲು ದೇವನಹಳ್ಳಿಯ ಆವತಿಹಳ್ಳಿ ವೆಂಕಟಗಿರಿ ಕೋಟೆ, ನಂದಿಬೆಟ್ಟ ಮೂಲಕ ಚಿಕ್ಕಬಳ್ಳಾಪುರ ಸೇರಲಿದೆ. ಇದರಿಂದ ಆ ಭಾಗದ ವಿದ್ಯಾರ್ಥಿಗಳಿಗೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ಯಶವಂತಪುರ ಮತ್ತು ಯಲಹಂಕಕ್ಕೆ ಸಾಗಿಸಲು ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT