ಶನಿವಾರ, ಮೇ 8, 2021
27 °C

ನಗರದಲ್ಲಿ ದಿಢೀರ್ ಮಳೆ: ತಂಪಾದ ಇಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೇಸಿಗೆ ಧಗೆಯಿಂದ ತತ್ತರಿಸುತ್ತಿದ್ದ ಉದ್ಯಾನನಗರದಲ್ಲಿ ಬುಧವಾರ ಸಂಜೆ ದಿಢೀರ್‌ ಮಳೆಯಾಯಿತು. ಬೆಳಿಗ್ಗೆ ಬಿಸಿಲು ಕಂಡಿದ್ದ ನಗರದಲ್ಲಿ ಸಂಜೆ ವೇಳೆಗೆ ತಂಪಾದ ವಾತಾವರಣ ಆವರಿಸಿತ್ತು.

ನಗರದಲ್ಲಿ ಎಂದಿನಂತೆ ಮಧ್ಯಾಹ್ನದವರೆಗೆ ಬಿಸಿಲಿತ್ತು. ಬಳಿಕ ದಿಢೀರ್ ಮೋಡ ಕವಿದು ಸಂಜೆ ಮಳೆಯ ಸಿಂಚನವಾಯಿತು. ನಗರದ ಕೆಲವು ಕಡೆ ಸಾಧಾರಣ ಮಳೆ ಸುರಿಯಿತು. ಸಂಜೆ 4ರಿಂದ 7 ಗಂಟೆಯವರೆಗೆ ಆಗಾಗ ಮಳೆ ಸುರಿದ ಪರಿಣಾಮ ಹಲವು ರಸ್ತೆಗಳಲ್ಲಿ ನೀರು ಹರಿಯಿತು.

ಎಂ.ಜಿ.ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ, ಯಲಹಂಕ, ಕೆಂಪೇಗೌಡ ಬಸ್‌ ನಿಲ್ದಾಣ, ಶೇಷಾದ್ರಿಪುರ, ಶಿವಾನಂದ ವೃತ್ತ, ಸಂಜಯನಗರ, ಕೆಂಗೇರಿ, ಹುಳಿಮಾವು, ಕೋರಮಂಗಳ, ದೊಮ್ಮಲೂರು, ಮೈಸೂರು ರಸ್ತೆ ಸೇರಿಂದತೆ ಹಲವೆಡೆ ಜೋರು ಮಳೆಯಾಯಿತು.

ಜಾರಿಬಿದ್ದ ಸವಾರರು: ಗಾಳಿ ಸಹಿತ ಮಳೆಗೆ ಕೆ.ಜಿ.ರಸ್ತೆಯ ಕಂದಾಯ ಭವನದ ಬಳಿ ಕೆಲ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದರು. ಕೆಲ ಸವಾರರಿಗೆ ಸಣ್ಣಪುಟ್ಟ ಗಾಯಗಳೂ ಆದವು. ಇದರಿಂದ ಕೆ.ಜಿ.ರಸ್ತೆಯಲ್ಲಿ ಕೆಲಕಾಲ ವಾಹನ ದಟ್ಟಣೆಯಾಗಿತ್ತು.ಕೂಡಲೇ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ‘ಈ ರಸ್ತೆಯ ಎರಡೂ ಬದಿ ಮರದಲ್ಲಿರುವ ಕಾರ್ಕ್‌ ಕಾಯಿಗಳು ಮಳೆಗೆ ರಸ್ತೆ ಮೇಲೆ ಬಿದ್ದಿದ್ದವು. ಇವು ತೇವಗೊಂಡಾಗ ನೊರೆ ಉಂಟು ಮಾಡುತ್ತವೆ. ಕ್ರಮೇಣ ಜಾರಿಕೆಯಾಗುತ್ತದೆ. ವಾಹನ ಸವಾರರು ವೇಗವಾಗಿ ಬಂದ ಪರಿಣಾಮ ಜಾರಿ ಬಿದ್ದಿದ್ದಾರೆ’ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದರು.

ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಗುರುವಾರ ಸಹ ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು