ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ವಾದ್ಯಗಳ ಹಿಂದೆ ಸಂಘರ್ಷದ ಬದುಕಿದೆ: ಕಲಾವಿದ ಟಿ.ಎಂ. ಕೃಷ್ಣ

Last Updated 26 ಅಕ್ಟೋಬರ್ 2021, 16:55 IST
ಅಕ್ಷರ ಗಾತ್ರ

ಬೆಂಗಳೂರು: ‘ಚರ್ಮ ವಾದ್ಯಗಳ ತಯಾರಿಕೆಯ ಹಿಂದೆ ಸಂಘರ್ಷದ ಬದುಕಿದೆ. ಸಂಗೀತ ಕ್ಷೇತ್ರದಲ್ಲಿ ವಾದ್ಯ ತಯಾರಿಕರಿಗೆ ಸರಿಯಾದ ಗೌರವ ಸಿಗುತ್ತಿಲ್ಲ’ ಎಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದ ಟಿ.ಎಂ. ಕೃಷ್ಣ ಹೇಳಿದರು.

‘ಜನಶಕ್ತಿ ಮೀಡಿಯಾ’ ಮಂಗಳವಾರ ಆಯೋಜಿಸಿದ್ದ ತಿಂಗಳ ಪುಸ್ತಕ ಪ್ರೀತಿ ವೆಬಿನಾರ್‌ ಸರಣಿ ಕಾರ್ಯಕ್ರಮದಲ್ಲಿ ಚರ್ಮ ವಾದ್ಯಗಳ ತಯಾರಕರ ಕುರಿತು ತಾವು ರಚಿಸಿರುವ ‘ಸೆಬಾಸ್ಟಿಯನ್‌ ಅಂಡ್‌ ಸನ್ಸ್‌’ ಕೃತಿ ಕುರಿತು ಅವರು ಮಾತನಾಡಿದರು.

‘ಮೃದಂಗ, ತಬಲ, ಖಂಜಿರಾ, ಚೆಂಡೆ ಮತ್ತಿತರ ಚರ್ಮ ವಾದ್ಯಗಳನ್ನು ನುಡಿಸುವವರಲ್ಲಿ ಮೇಲ್ವರ್ಗದವರೇ ಹೆಚ್ಚು. ಆದರೆ, ಈ ವಾದ್ಯಗಳ ತಯಾರಕರು ದಲಿತರು ಮತ್ತು ಕೆಳಸ್ತರದ ಸಮುದಾಯಗಳ ಜನರು. ಸಂಗೀತ ಕಾರ್ಯಕ್ರಮಗಳಲ್ಲಿ ಕಲಾವಿದ ಮತ್ತು ಆತನ ಗುರುವಿಗೆ ಗೌರವ ದೊರೆಯುತ್ತದೆ. ಆದರೆ, ಇಂಪಾದ ದನಿ ಹೊಮ್ಮಿಸುವ ವಾದ್ಯವನ್ನು ರೂಪಿಸಿದ ವ್ಯಕ್ತಿಗಳು ತೆರೆಯ ಮರೆಯಲ್ಲೇ ಉಳಿದುಬಿಡುತ್ತಾರೆ’ ಎಂದರು.

ಚರ್ಮ ವಾದ್ಯಗಳ ತಯಾರಕರ ಜೀವನವನ್ನು ಅವಲೋಕಿಸುತ್ತಾ ಹೋದರೆ ಹಲವು ಬಗೆಯ ಸಂಘರ್ಷಗಳು ಕಾಣುತ್ತವೆ. ಜಾತಿ ತಾರತಮ್ಯ, ಆರ್ಥಿಕ ಸಂಕಷ್ಟಗಳ ನಡುವೆಯೇ ಸಂಗೀತ ಕ್ಷೇತ್ರಕ್ಕೆ ಅವರು ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಆದರೆ, ಅವರಿಗೆ ಸರಿಯಾದ ಗೌರವವೇ ಸಲ್ಲುವುದಿಲ್ಲ’ ಎಂದು ಹೇಳಿದರು.

ಹಸು, ಕೋಣ ಮತ್ತು ಎಮ್ಮೆ, ಕುರಿಯ ಚರ್ಮಗಳನ್ನು ಮೃದಂಗ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಚರ್ಮದ ಕೊರತೆ ಉದ್ಭವಿಸಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಸಮಸ್ಯೆ ಇಲ್ಲ ಎಂದರು.

ಈಗ ಸಿಂಥೆಟಿಕ್‌ ಚರ್ಮ ಬಳಸಿ ವಾದ್ಯಗಳನ್ನು ತಯಾರಿಸಲಾಗುತ್ತಿದೆ. ಆದರೆ, ಇದರಿಂದ ತಳ ಸಮುದಾಯದ ದೊಡ್ಡ ಸಂಖ್ಯೆಯ ಜನರು ನಿರುದ್ಯೋಗಿಗಳಾಗುವ ಅಪಾಯವಿದೆ. ಈ ಬಗ್ಗೆಯೂ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಎಂದು ಕೃಷ್ಣ ಹೇಳಿದರು.

ನಿವೃತ್ತ ಪ್ರಾಧ್ಯಾಪಕಿ ಶೈಲಜಾ ವೇಣುಗೋಪಾಲ್‌, ಬರಹಗಾರ್ತಿ ಸುಮಂಗಲಾ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌. ವಿಮಲಾ ಸೇರಿದಂತೆ ಹಲವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT