ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕೃತ ಮನೆ’ಗಾಗಿ ಮುಸುಕಿನ ಗುದ್ದಾಟ!

ಹಾಲಿ– ಮಾಜಿ ಪೊಲೀಸ್‌ ಕಮಿಷನರ್‌ ಮಧ್ಯೆ ಶೀತಲ ಸಮರ
Last Updated 29 ಆಗಸ್ಟ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಕಮಿಷನರ್‌ ಆಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಕಳೆದರೂ ಅಧಿಕೃತ ನಿವಾಸದಲ್ಲಿ ವಾಸ್ತವ್ಯ ಮಾಡುವ ಭಾಗ್ಯ ಭಾಸ್ಕರ್‌ ರಾವ್‌ ಅವರಿಗೆ ಸಿಕ್ಕಿಲ್ಲ!

ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್‌ ಕಮಿಷನರ್‌ಗೆ ಮೀಸಲಾದ ಅಧಿಕೃತ ನಿವಾಸವನ್ನು ನಿಕಟಪೂರ್ವ ಪೊಲೀಸ್‌ ಕಮಿಷನರ್‌ ಅಲೋಕ್‌ ಕುಮಾರ್‌ ಇನ್ನೂ ಖಾಲಿ ಮಾಡಿಲ್ಲ. ಆದಷ್ಟು ಬೇಗ ಈ ಮನೆಗೆ ವಾಸ್ತವ್ಯ ಬದಲಿಸಲು ಭಾಸ್ಕರ್‌ ರಾವ್‌ ಬಯಸಿದ್ದು, ಈ ವಿಷಯ ಹಾಲಿ– ಮಾಜಿ ಕಮಿಷನರ್‌ಗಳ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲೋಕ್‌ ಕುಮಾರ್‌ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ‘ಪತ್ನಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಇನ್ನೂ ಕೆಲವು ದಿನಗಳವರೆಗೆ ಮನೆ ಖಾಲಿ ಮಾಡಲು ಸಾಧ್ಯವಿಲ್ಲ’ ಎಂದು ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು ಅವರಿಗೆ ಅಲೋಕ್‌ಕುಮಾರ್‌ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

ಪೊಲೀಸ್‌ ಕಮಿಷನರ್‌ಗೆ ಮೀಸಲಿಟ್ಟ ನಿವಾಸವನ್ನು ತಕ್ಷಣ ಒದಗಿಸುವಂತೆ ನೀಲಮಣಿ ರಾಜು ಅವರಲ್ಲಿ ಭಾಸ್ಕರ ರಾವ್‌ ಮನವಿ ಮಾಡಿದ್ದಾರೆ. ಸದ್ಯ,ಜಯನಗರದಲ್ಲಿರುವ ತಮ್ಮ ಮನೆಯಿಂದ ರಾವ್‌ ಅವರು ನಿತ್ಯ ಕಚೇರಿಗೆ ಬಂದು ಹೋಗುತ್ತಿದ್ದಾರೆ.

ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳ ಪ್ರಕಾರ, ಪೊಲೀಸ್‌ ಕಮಿಷನರ್‌ನಂಥ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ವರ್ಗಾವಣೆಗೊಂಡ ಬಳಿಕವೂ ತಮ್ಮ ಅಧಿಕೃತ ನಿವಾಸದಲ್ಲಿ ಒಂದು ತಿಂಗಳು ವಾಸ್ತವ್ಯ ಮಾಡಲು ಅವಕಾಶವಿದೆ.

ಕೆಲವೇ ಗಂಟೆಯಲ್ಲಿ ಮನೆ ಖಾಲಿ ಮಾಡಿದ್ದ ಶಂಕರ ಬಿದರಿ

ಅಲೋಕ್‌ ಕುಮಾರ್‌ ಅವರಿಗಿಂತಲೂ ಮೊದಲು ಪೊಲೀಸ್‌ ಕಮಿಷನರ್‌ ಹುದ್ದೆಯಲ್ಲಿದ್ದ ಸುನಿಲ್‌ ಕುಮಾರ್‌ ಕೇವಲ ನಾಲ್ಕು ದಿನಗಳಲ್ಲಿ ಅಧಿಕೃತ ಮನೆ ಖಾಲಿ ಮಾಡಿದ್ದರು. ಮೇಘರಿಕ್‌ ಮತ್ತು ರಾಘವೇಂದ್ರ ಔರಾದ್ಕರ ಅವರು ಒಂದೇ ದಿನದಲ್ಲಿ ಮನೆ ಖಾಲಿ ಮಾಡಿದ್ದರೆ, ವರ್ಗಾವಣೆಗೊಂಡ ಕೆಲವೇ ಗಂಟೆಗಳಲ್ಲಿ ಶಂಕರ ಬಿದರಿ ವಾಸ್ತವ್ಯ ಬದಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT