ಮಂಗಳವಾರ, ಮಾರ್ಚ್ 21, 2023
31 °C
ತಪ್ಪಿತಸ್ಥ ಅಧಿಕಾರಿಗಳನ್ನು ಪಾಲಿಕೆ ಹುದ್ದೆಗಳಲ್ಲಿ ಮರು ನಿಯೋಜನೆಗೆ ಯತ್ನ

ನಗರಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟನೆ ಕೋರಿದ ಆಯುಕ್ತರು.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಮಗಾರಿಗಳ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ನೇತೃತ್ವದ ಸಮಿತಿಯು ಗುರುತಿಸಿದ್ದ ನಾಲ್ವರು ಎಂಜಿನಿಯರ್‌ಗಳ ಸೇವೆಯನ್ನು ಬಿಬಿಎಂಪಿಯಲ್ಲಿ ಮುಂದುವರಿಸುವುದರಿಂದ ಎದುರಾಗುವ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟನೆ ಕೋರಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಮಲ್ಲೇಶ್ವರ, ಗಾಂಧಿನಗರ ಮತ್ತು ರಾಜರಾಜೇಶ್ವರಿನಗರ ವಿಭಾಗಗಳ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳಲ್ಲಿ ಕೆಲವು ಅಧೀಕಾರಿಗಳು ತಪ್ಪೆಸಗಿದ್ದು ಸಾಬೀತಾಗಿದೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ನಾಗಮೋಹನದಾಸ್‌ ಸಮಿತಿ ಶಿಫಾರಸು ಮಾಡಿತ್ತು. ಆರೋಪ ಸಾಬೀತಾದ ಅಧೀಕಾರಿಗಳಲ್ಲಿ ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ಗಳಾದ ಡಿ. ಹರೀಶ್‌ಕುಮಾರ್‌, ವಿ. ಮೋಹನ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಜಿ.ಆರ್‌. ಕುಮಾರ್ ಹಾಗೂ ಎನ್‌.ಎಸ್‌. ರೇವಣ್ಣ ಅವರೂ ಸೇರಿದ್ದರು. ಈ ನಾಲ್ವರ ಸೇವೆಯನ್ನು ಆಡಳಿತ ನ್ಯಾಯಮಂಡಳಿ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ಬಿಬಿಎಂಪಿಯಲ್ಲಿ ಮುಂದುವರಿಸುವಂತೆ ಅಥವಾ ನಿಯೋಜಿಸುವಂತೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ 2020ರ ಆ.19ರಂದು ಪತ್ರ ಬರೆದಿತ್ತು.

ಈ ನಾಲ್ವರು ಎಂಜಿನಿಯರ್‌ಗಳನ್ನು 2019ರ ಅ. 07ರಂದು ಪಾಲಿಕೆ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. 2019ರ ಅ. 19ರಂದು ಈ ಎಂಜಿನಿಯರ್‌ಗಳನ್ನು ಲೋಕೋಪಯೋಗಿ ಇಲಾಖೆಗೆ ವಾಪಾಸ್‌ ಕಳುಹಿಸಲಾಗಿತ್ತು. ಆದರೆ, ಅವರು ಅಲ್ಲಿ ವರದಿ ಮಾಡಿಕೊಂಡಿಲ್ಲ. ಬದಲು ತಮ್ಮ ವಿರುದ್ಧ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಈ ಅಧಿಕಾರಿಗಳು ಆಡಳಿತ ನ್ಯಾಯಮಂಡಳಿಯ ಮೊರೆಹೋಗಿದ್ದರು. ಆರಂಭದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ಮಾಡಿದ್ದ ನ್ಯಾಯಮಂಡಳಿ ನಂತರ ಎಂಜಿನಿಯ್‌ಗಳ ಅರ್ಜಿಯನ್ನು ವಜಾ ಮಾಡಿತ್ತು.

‘ಈ ನಾಲ್ವರು ಎಂಜಿನಿಯರ್‌ಗಳನ್ನು ಈಗಾಗಲೇ ಪಾಲಿಕೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಅವರನ್ನು ಮತ್ತೆ ನೇಮಿಸಿಕೊಳ್ಳುವಂತೆ ನ್ಯಾಯಮಂಡಳಿ ಆದೇಶ ಮಾಡಿಲ್ಲ. ಪಾಲಿಕೆಯ ಸೇವೆಯಿಂದ ಬಿಡುಗಡೆಗೊಂಡ ಬಳಿಕ ಅವರು ಮಾತೃ ಇಲಾಖೆಯಲ್ಲೂ ಹಾಜರಾತಿ ಸಲ್ಲಿಸಿಲ್ಲ. ಈಗ ಪಾಲಿಕೆ ಸೇವೆಗೆ ಮತ್ತೊಮ್ಮೆ ನಿಯೋಜನೆ ಮಾಡುವಂತೆ  ಮನವಿ ಸಲ್ಲಿಸಿದ್ದಾರೆ. ಅವರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕೇ, ಒಂದು ವೇಳೆ ತೆಗೆದುಕೊಂಡರೆ, ಅವರು ಬಿಡುಗಡೆಗೊಂಡ ದಿನದಿಂದ ಬಾಕಿ ಉಳಿದ ವೇತನವನ್ನು ಯಾವ ಪ್ರಾಧಿಕಾರ ಪಾವತಿ ಮಾಡಬೇಕು ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ಆಯುಕ್ತರು ಪತ್ರದಲ್ಲಿ ಕೋರಿದ್ದಾರೆ.

ಮಲ್ಲೇಶ್ವರ, ಗಾಂಧಿನಗರ ಮತ್ತು ರಾಜರಾಜೇಶ್ವರಿನಗರ ವಿಭಾಗಗಳ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು