ಭಾನುವಾರ, ಅಕ್ಟೋಬರ್ 25, 2020
22 °C
ಚರ್ಚೆಗೆ ಗ್ರಾಸವಾದ ರಾಜ್ಯ ಸರ್ಕಾರದ ಪ್ರಸ್ತಾವ l ನಿಯಮ ಉಲ್ಲಂಘನೆ– ಆರೋಪ

ಹಳ್ಳಿ ಜಾಗಕ್ಕೆ ನಗರದಲ್ಲಿ ಟಿಡಿಆರ್‌?

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮನಗರ ಜಿಲ್ಲೆಯ ಕೊಡಿಯಾಲ ಕರೇನಹಳ್ಳಿಯಲ್ಲಿ ಕಸ ಸುರಿಯಲು ವಶಪಡಿಸಿಕೊಂಡ 45 ಎಕರೆ ಜಾಗಕ್ಕೆ ಪ್ರತಿಯಾಗಿ ಟಿಡಿಆರ್‌ (ಅಭಿವೃದ್ಧಿ ಹಕ್ಕು ವರ್ಗಾವಣೆ) ಅನ್ನು ಬೆಂಗಳೂರು ನಗರದೊಳಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಕಟ್ಟಡ ಮತ್ತು ನಿವೇಶನಗಳಿಗೆ ಪರ್ಯಾಯವಾಗಿ ಟಿಡಿಆರ್ ನೀಡಲಾಗುತ್ತದೆ. ಕೊಡಿಯಾಲ ಕರೇನಹಳ್ಳಿ ಆಸುಪಾಸಿನ ಪ್ರದೇಶದಲ್ಲಿ ಟಿಡಿಆರ್‌ ನೀಡಿದರೆ ಎಕರೆಗೆ ಅಂದಾಜು ₹20 ಲಕ್ಷ ಆಗುತ್ತದೆ. ಒಂದು ವೇಳೆ ನಗರದೊಳಗೆ ಟಿಡಿಆರ್‌ (ಸದಾಶಿವನಗರ, ಎಂ.ಜಿ.ರಸ್ತೆ, ಜಯನಗರದಂತಹ ಪ್ರದೇಶದಲ್ಲಿ) ನೀಡಿದರೆ ಅದರ ಒಟ್ಟು ಮೊತ್ತ ₹700 ಕೋಟಿಯಿಂದ ₹800 ಕೋಟಿಯಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ.

‘ನಗರದೊಳಗೆ ಟಿಡಿಆರ್‌ ನೀಡಬಾರದು ಎಂದು ಪಾಲಿಕೆ ಕೌನ್ಸಿಲ್‌ ಸಭೆಯಲ್ಲೂ ತೀರ್ಮಾನಿಸಲಾಗಿತ್ತು. ಒಂದು ವೇಳೆ ಟಿಡಿಆರ್‌ ಕೊಟ್ಟರೆ ನಿಯಮದ ಉಲ್ಲಂಘನೆ ಆಗಲಿದೆ’ ಎಂದು ಕಾಂಗ್ರೆಸ್‌ ನಾಯಕರು ದೂರಿದರು.

ಏನಿದು ಪ್ರಕರಣ: ನಗರದಲ್ಲಿ ಕಸ ಸಮಸ್ಯೆ ಬಿಗಡಾಯಿಸಿದ್ದ ಹಿನ್ನೆಲೆಯಲ್ಲಿ ಕೋಡಿಯಾಲ ಕರೇನಹಳ್ಳಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಬಿಬಿಎಂಪಿ 2013ರಲ್ಲಿ ಮುಂದಾಗಿತ್ತು. ಆರಂಭಿಕ ಹಂತದಲ್ಲಿ ಬಿಬಿಎಂಪಿ 40 ಎಕರೆ 9 ಗುಂಟೆ ಜಮೀನನ್ನು ಟಿಡಿಆರ್ ಮೂಲಕ ವಶಪಡಿಸಿಕೊಂಡು ಘಟಕ ಸ್ಥಾಪನೆಗೆ ಮುಂದಾಗಿತ್ತು. ಅದರೊಂದಿಗೆ ರಸ್ತೆ ವಿಸ್ತರಣೆಗಾಗಿ 5 ಎಕರೆ ಜಮೀನು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವ ಸಲ್ಲಿಸಿತ್ತು.

ವಶಪಡಿಸಿಕೊಂಡ ಜಾಗಕ್ಕೆ ಪ್ರತಿಯಾಗಿ ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ 1961ರ ಕಲಂ (ಬಿ) ಅನ್ವಯ ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಮೂಲಕ ಭೂಮಿಯ ವಿಸ್ತೀರ್ಣದ ಒಂದೂವರೆ ಪಟ್ಟು ಟಿಡಿಆರ್‌ ನೀಡಲು ಪಾಲಿಕೆ ನಿರ್ಧರಿಸಿತ್ತು. ಭೂಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು 2013ರಲ್ಲಿ ಟಿಡಿಆರ್‌ ನೀಡಲಾಗಿತ್ತು. ಅದನ್ನು ಭೂಮಾಲೀಕರು ವೆಂಕಟೇಶ್ವರ ಡೆವಲಪರ್ಸ್‌ ಮತ್ತು ಬಾಲಾಜಿ ಇನ್‌ಫ್ರಾಸ್ಟ್ರಕ್ಚರ್ ಆ್ಯಂಡ್‌ ಡೆವಲಪರ್ಸ್‌ಗೆ ಮಾರಿದ್ದರು. ಸರ್ಕಾರದ ಮಾರ್ಗಸೂಚಿ ಪ್ರಕಾರ ಮಾರಾಟ ಮಾಡದಿರುವುದನ್ನು ಗಮನಿಸಿದ ಪಾಲಿಕೆ, 2015ರಲ್ಲಿ ಟಿಡಿಆರ್ ಅನ್ನು ರದ್ದುಪಡಿಸಿತ್ತು. ಗ್ರಾಮದಲ್ಲಿ ಕಸ ಸುರಿಯುವ ಪ್ರಸ್ತಾವ ಕೈಬಿಟ್ಟಿತ್ತು.

ಟಿಡಿಆರ್ ರದ್ದುಪಡಿಸಿರುವುದನ್ನು ಪ್ರಶ್ನಿಸಿ ವೆಂಕಟೇಶ್ವರ ಡೆವಲಪರ್ಸ್‌ ಮತ್ತು ಬಾಲಾಜಿ ಇನ್‌ಫ್ರಾಸ್ಟ್ರಕ್ಚರ್ ಆ್ಯಂಡ್‌ ಡೆವಲಪರ್ಸ್‌ನವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ಈ ಜಾಗ ಸದ್ಯ ಪಾಲಿಕೆ ಸ್ವಾಧೀನದಲ್ಲಿದೆ. ಇದನ್ನು ಪಾಲಿಕೆಯಲ್ಲಿ ಮುಂದುವರಿಸಲು ಬಿಎಂಐಸಿ ಸಹಮತಿ ನೀಡಬೇಕು. ಭೂಮಾಲೀಕರು ಟಿಡಿಆರ್‌ ಅನ್ನು ಪಾಲಿಕೆಗೆ ಹಿಂತಿರುಗಿಸಬೇಕು. ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಬಿಎಂಐಸಿಯಿಂದ 1961ರ ಕೆಟಿಸಿಪಿ ಕಾಯ್ದೆ ಪ್ರಕಾರ ಟಿಡಿಆರ್‌ ಪ್ರಮಾಣಪತ್ರ ನೀಡಬೇಕು. ವೆಂಕಟೇಶ್ವರ ಡೆವಲಪರ್ಸ್‌ ಹಾಗೂ ಬಾಲಾಜಿ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಯವರು ಟಿಡಿಆರ್‌ ಅನ್ನು ಪ್ರಶ್ನಿತ ಜಮೀನುಗಳ 25 ಕಿ.ಮೀ. ‌ವ್ಯಾಪ್ತಿಯಲ್ಲಿ ಬಳಸಿಕೊಳ್ಳಬೇಕು’ ಎಂದು ಹೈಕೋರ್ಟ್‌ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿತ್ತು.

ಯಾವುದೇ ಸ್ಥಳೀಯ ಯೋಜನಾ ಪ್ರದೇಶದಲ್ಲಿ ನೀಡಿರುವ ಟಿಡಿಆರ್ ಅನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–2016ರ ಪ್ರಕಾರ ಅದೇ ಪ್ರದೇಶದಲ್ಲಿ ಬಳಕೆ ಮಾಡಬೇಕು. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ಬಿಎಂಐಸಿ ಸದಸ್ಯ ಕಾರ್ಯದರ್ಶಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ‘ಬಿಎಂಐಸಿ ಯೋಜನಾ ವ್ಯಾಪ್ತಿಯಲ್ಲಿನ ಈ ಪ್ರದೇಶವು ಬೆಂಗಳೂರು ಪರಿಷ್ಕೃತ ಮಹಾಯೋಜನೆ–2015ರ ಅನ್ವಯ ವರ್ಗಿಕರಿಸಿದ ಎ,ಬಿ ಹಾಗೂ ಸಿ ವಲಯದಿಂದ ಹೊರಗೆ ಇದೆ. ಈ ಟಿಡಿಆರ್‌ ಪ್ರಮಾಣಪತ್ರವನ್ನು ಯಾವ ವಲಯದಲ್ಲಿ ಬಳಕೆಗೆ ‍ಪರಿಗಣಿಸಬೇಕು’ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ಪಾಲಿಕೆಯ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.

ಆ ಬಳಿಕ ಮತ್ತೊಮ್ಮೆ ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿತ್ತು. ಇಲಾಖೆ ಯಾವುದೇ ಸ್ಪಷ್ಟ ಅಭಿಪ್ರಾಯ ನೀಡಿರಲಿಲ್ಲ. ಅಡ್ವೊಕೇಟ್‌ ಜನರಲ್ ಅವರ ಅಭಿಪ್ರಾಯ ಪಡೆಯುವುದು ಉತ್ತಮ ಎಂದೂ ಸಲಹೆ ನೀಡಿತ್ತು. ಈ ಬಗ್ಗೆ ಅಭಿಪ್ರಾಯ ನೀಡುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ನಗರಾಭಿವೃದ್ಧಿ ಇಲಾಖೆ ಪ್ರಸ್ತಾವ ಕಳುಹಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಲಭ್ಯರಾಗಲಿಲ್ಲ.

***

ಈ ಪ್ರಕರಣದಲ್ಲಿ ನಗರದೊಳಗೆ ಟಿಡಿಆರ್‌ ನೀಡಿದರೆ ದಶಕದ ದೊಡ್ಡ ಕರ್ಮಕಾಂಡ ಆಗಲಿದೆ. ಇದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. 
- ಅಬ್ದುಲ್‌ ವಾಜಿದ್‌, ಬಿಬಿಎಂಪಿಯ ವಿರೋಧ ಪಕ್ಷದ ನಾಯಕ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು