ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಭಾಷೆಯಾಗಿ ತೆಲುಗು ಬೋಧಿಸಿ: ಎ. ರಾಧಾಕೃಷ್ಣ ರಾಜು

ಚರಣ್‌ರಾಜ್‌ ಸೇರಿ ಮೂವರಿಗೆ ‘ಯುಗಾದಿ ಪುರಸ್ಕಾರ’ ಪ್ರದಾನ
Published 14 ಏಪ್ರಿಲ್ 2024, 16:30 IST
Last Updated 14 ಏಪ್ರಿಲ್ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ 1.35 ಕೋಟಿ ತೆಲುಗು ಭಾಷಿಕರು ಇದ್ದಾರೆ. ಆದ್ದರಿಂದ ಇಲ್ಲಿ ತೆಲುಗನ್ನು ದ್ವಿತೀಯ ಭಾಷೆಯಾಗಿ ಬೋಧಿಸಬೇಕು’ ಎಂದು ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ಎ. ರಾಧಾಕೃಷ್ಣ ರಾಜು ತಿಳಿಸಿದರು.

ತೆಲುಗು ವಿಜ್ಞಾನ ಸಮಿತಿಯು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಯುಗಾದಿ ಉತ್ಸವದಲ್ಲಿ ಬಹುಭಾಷಾ ನಟ ಚರಣ್‌ರಾಜ್ ಅವರಿಗೆ ‘ಯುಗಾದಿ ವಿಶಿಷ್ಟ ಪುರಸ್ಕಾರ’, ಸಾಹಿತಿ ಕಮಲಾ ಹಂಪನಾ ಹಾಗೂ ತೆಲುಗು ಕವಯಿತ್ರಿ ಮೃಣಾಲಿನಿ ಅವರಿಗೆ ‘ಯುಗಾದಿ ಸಾಹಿತ್ಯ ಪುರಸ್ಕಾರ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ₹10ಸಾವಿರ ನಗದು ಒಳಗೊಂಡಿದೆ. 

ಈ ವೇಳೆ ಮಾತನಾಡಿದ ರಾಧಾಕೃಷ್ಣ ರಾಜು, ‘ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಬೋಧಿಸಿದರೆ ವಿಷಯ ಪರಿಣಾಮಕಾರಿಯಾಗಿ ತಲುಪಲಿದೆ. ಮಕ್ಕಳು ಕೂಡ ಬೇಗ ಗ್ರಹಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಶಾಲೆಗಳಲ್ಲಿ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಬಳಸಬೇಕೆಂದು ಹೇಳಿದ್ದಾರೆ. ಬೆಂಗಳೂರು, ಕೋಲಾರ ಸೇರಿ ರಾಜ್ಯದ ವಿವಿಧೆಡೆ ನೆಲೆಸಿರುವ ತೆಲುಗು ಭಾಷಿಕರು ಕನ್ನಡವನ್ನೂ ಪ್ರೀತಿಸಿ, ಬೇರೆ ಭಾಷಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹರಿಯಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ತೆಲುಗನ್ನು ದ್ವಿತೀಯ ಭಾಷೆಯಾಗಿ ಬೋಧಿಸಲಾಗುತ್ತಿದೆ. ಅದೇ ರೀತಿ, ಕರ್ನಾಟಕದಲ್ಲಿಯೂ ಬೋಧಿಸಲು ಕ್ರಮವಹಿಸಬೇಕು’ ಎಂದರು. 

ಕಮಲಾ ಹಂಪನಾ, ‘ಭಾಷೆಗಳಲ್ಲಿ ಹಿರಿಯ–ಕಿರಿಯವೆಂಬ ಭೇದಭಾವವಿಲ್ಲ. ಲಿಪಿ ಇರುವ, ಇರದಿರುವ ಭಾಷೆಗಳಲ್ಲಿಯೂ ಮೇಲು–ಕೀಳು ಎಂಬುದಿಲ್ಲ. ಎಲ್ಲ ಭಾಷೆಗಳನ್ನೂ ಗೌರವಿಸಬೇಕು’ ಎಂದು ಹೇಳಿದರು. 

ಚರಣ್‌ರಾಜ್, ‘ತೆಲುಗು ಭಾಷಿಕರು ಮತ್ತು ಕನ್ನಡಿಗರು ಅಣ್ಣ ತಮ್ಮಂದಿರ ರೀತಿ ಇದ್ದಾರೆ. ಮನೆಯಲ್ಲಿ ಯಾವುದೇ ಭಾಷೆ ಬಳಸಿದರೂ ಹೊರಗಡೆ ಒಟ್ಟಾಗಿ ಇರಬೇಕು’ ಎಂದು ತಿಳಿಸಿದರು. 

ಮೃಣಾಲಿನಿ, ‘ವಿಜಯನಗರ ಸಾಮ್ರಾಜ್ಯವನ್ನು ಆಳಿದ ಕೃಷ್ಣದೇವರಾಯ ಅವರು ತೆಲುಗು ಹಾಗೂ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ತೆಲುಗು ಹಾಗೂ ಕನ್ನಡದ ಸಂಬಂಧ ಮೊದಲಿನಿಂದಲೂ ಇದ್ದು, ಈ ಸಂಬಂಧ ಹೀಗೇ ಮುಂದುವರಿಯಬೇಕು’ ಎಂದರು. 

ಸಾಹಿತಿ ಚಂದ್ರಶೇಖರ ಕಂಬಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT