ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌ ಅಕ್ರಮ: ₹77 ಕೋಟಿ ಕಾಮಗಾರಿ ಪಡೆಯಲು ನಕಲಿ ದಾಖಲೆ!

*ಗೋವಿಂದರಾಜನಗರದಲ್ಲಿ ಟೆಂಡರ್‌ ಅಕ್ರಮ?: ತನಿಖೆಗೆ ರಾಜ್ಯ ಸರ್ಕಾರ ನಿರ್ದೇಶನ
Last Updated 27 ಜುಲೈ 2020, 1:34 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿದ್ದೇನೆ ಎಂದು ‘ಕಾರ್ಯಾನುಭವದನಕಲಿ ಪ್ರಮಾಣಪತ್ರ’ ಸಲ್ಲಿಸಿದ್ದ ಗುತ್ತಿಗೆದಾರರೊಬ್ಬರಿಗೇ ₹76.90 ಕೋಟಿ ಮೊತ್ತದ ಕಾಮಗಾರಿಯ ಹೊಣೆ ವಹಿಸಲು ಬಿಬಿಎಂಪಿ ಅಧಿಕಾರಿಗಳು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಬಿಬಿಎಂಪಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ಗೋವಿಂದರಾಜನಗರ ವಿಭಾಗದಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ರಾಜಕಾಲುವೆಗಳು, ಚರಂಡಿಗಳು ಹಾಗೂ ಪಾದಚಾರಿ ಮಾರ್ಗಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ’ಈ ಪ್ಯಾಕೇಜ್‌ಗಳಿಗೆ ತ್ತಿಗೆದಾರರನ್ನುಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಗುತ್ತಿಗೆದಾರ ಅಜಯ್‌ ಆರ್‌.ಎಂಬುವರು ‘ಎಲ್‌–1’ ಆಗಿದ್ದಾರೆ. ಅವರು ಯಶವಂತಪುರ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿದ ಅನುಭವ ಇದೆಎಂದು ಕಾರ್ಯಾನುಭವ ಪತ್ರ ನೀಡಿದ್ದಾರೆ. ಆದರೆ, ಈ ಪತ್ರವೇ ನಕಲಿ. ಹೀಗಾಗಿ, ಈ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಅಜಯ್‌ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ನಾಗರಿಕರೊಬ್ಬರು ಇ–ಮೇಲ್‌ ಮೂಲಕ ರಾಜ್ಯ ಸರ್ಕಾರಕ್ಕೆ ಜುಲೈ 23ರಂದು ದೂರು ನೀಡಿದ್ದರು.

ಈ ಪ್ರಸ್ತಾವನೆಗಳನ್ನು ಹಾಗೂ ಅಜಯ್‌ ನೀಡಿರುವ ನಕಲಿ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಪ್ರಮಾಣ ಪತ್ರ ಕೊಟ್ಟಿದ್ದು ಹೇಗೆ: ನಗರದಲ್ಲಿ 2017ರ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ವ್ಯಾಪಕ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೆ ರಾಜ್ಯಸರ್ಕಾರ ₹117 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಏಳು ಕಾಮಗಾರಿಗಳಿಗೆ ₹17 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಾಲಿಕೆಯರಾಜಕಾಲುವೆ ವಿಭಾಗದ (ಆರ್‌.ಆರ್. ನಗರ ವಲಯ) ಕಾರ್ಯಪಾಲಕ ಎಂಜಿನಿಯರ್‌ ಅವರು 2017ರ ಡಿಸೆಂಬರ್‌ನಲ್ಲಿ ಟೆಂಡರ್‌ ಕರೆದಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಾದ ಜಿ.ಎಂ.ರವೀಂದ್ರ, ಜೆ.ಸಿ.ಪ್ರಕಾಶ್, ಎಸ್‌.ಎನ್‌.ಸೋಮಶೇಖರ್‌ (ಆತ್ರೇಯ ಕನ್‌ಸ್ಟ್ರಕ್ಷನ್‌) ಹಾಗೂ ಸಿ.ಎಸ್‌.ದೊರೆಸ್ವಾಮಿ (ಸ್ಟಾರ್‌ ಬಿಲ್ಡರ್ಸ್‌ ಆ್ಯಂಡ್‌ ಡೆವಲಪರ್ಸ್‌) ಭಾಗವಹಿಸಿದ್ದರು. ಅಂತಿಮವಾಗಿ ಆತ್ರೇಯ ಕನ್‌ಸ್ಟ್ರಕ್ಷನ್‌ನ ಎಸ್‌.ಎನ್‌.ಸೋಮಶೇಖರ್ ಅವರಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು.

ಆದರೆ, ಈ ಕಾಮಗಾರಿಗಳನ್ನು ಅಜಯ್‌ ಆರ್‌. ತೃಪ್ತಿಕರವಾಗಿ ನಡೆಸಿದ್ದಾರೆ ಎಂದು ಪಾಲಿಕೆಯ ಕೆಂಗೇರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಲೋಕೇಶ್‌ ಅವರು 2019ರ ಅಕ್ಟೋಬರ್‌ 31ರಂದು ಕಾರ್ಯಾನುಭವ ಪ್ರಮಾಣಪತ್ರ ನೀಡಿದ್ದಾರೆ. ಈ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಿ ಮೇಲುಸ್ತುವಾರಿ ನೋಡಿಕೊಂಡಿದ್ದು ಪಾಲಿಕೆಯ ರಾಜಕಾಲುವೆ ವಿಭಾಗ. ಆದರೆ, ಈ ಕಾಮಗಾರಿಗೆ ಸಂಬಂಧವೇ ಇಲ್ಲದ, ಬೇರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಆಗಿರುವ ಲೋಕೇಶ್‌ ಪ್ರಮಾಣಪತ್ರ ನೀಡಿದ್ದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಪ್ರಮಾಣಪತ್ರದ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸದೇ ಗೋವಿಂದರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ್‌ ಅವರು ಮೂರು ಪ್ಯಾಕೇಜ್‌ಗಳ ಕಾಮಗಾರಿಗಳನ್ನು ಅಜಯ್‌ ಅವರಿಗೆ ವಹಿಸುವಂತೆ ಬಿಬಿಎಂ‍ಪಿಯ ಟೆಂಡರ್‌ ಬಿಡ್‌ ತಾಂತ್ರಿಕ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಅದರ ಆಧಾರದಲ್ಲಿ ಅಜಯ್‌ ಅವರಿಗೆ ಕಾಮಗಾರಿ ವಹಿಸುವಂತೆ ಪಾಲಿಕೆಯು ಸರ್ಕಾರದ ಅಧಿಕಾರಯುಕ್ತ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿದೆ.

ತನಿಖೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಎರಡು ಸಲ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಯಾವೆಲ್ಲ ಕಾಮಗಾರಿಗಳು

ಪ್ಯಾಕೇಜ್‌ 4: ಗೋವಿಂದರಾಜನಗರ ಕ್ಷೇತ್ರದ ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ ವಾರ್ಡ್‌ಗಳಲ್ಲಿ ರಾಜಕಾಲುವೆಗಳ ಸಮಗ್ರ ಅಭಿವೃದ್ಧಿ; ₹24.90 ಕೋಟಿ
ಪ್ಯಾಕೇಜ್‌ 5: ಕಾವೇರಿಪುರ, ಗೋವಿಂದರಾಜನಗರ, ಡಾ.ರಾಜ್‌ ಕುಮಾರ್‌ ವಾರ್ಡ್, ಮಾರೇನಹಳ್ಳಿ ಹಾಗೂ ನಾಗರಬಾವಿ ವಾರ್ಡ್‌ಗಳಲ್ಲಿ ರಸ್ತೆ ಪಕ್ಕದ ಚರಂಡಿಗಳ ಹಾಗೂ ಪಾದಚಾರಿ ಮಾರ್ಗಗಳ ಸಮಗ್ರ ಅಭಿವೃದ್ಧಿ; ₹25 ಕೋಟಿ
ಪ್ಯಾಕೇಜ್‌ 6: ಮಾರುತಿಮಂದಿರ, ಮೂಡಲಪಾಳ್ಯ, ನಾಗರಬಾವಿ, ನಾಯಂಡಹಳ್ಳಿ ವಾರ್ಡ್‌ಗಳಲ್ಲಿ ರಸ್ತೆ ಪಕ್ಕದ ಚರಂಡಿಗಳು ಹಾಗೂ ಪಾದಚಾರಿ ಮಾರ್ಗಗಳ ಸಮಗ್ರ ಅಭಿವೃದ್ಧಿ; ₹27 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT