ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ಕಳ್ಳತನ: ಚಿನ್ನಾಭರಣ ಕದ್ದು ಖಾರದ ಪುಡಿ ಚೆಲ್ಲಿದ್ದ ಆರೋಪಿಗಳ ಬಂಧನ

ಮಾಲೀಕರ ಮನೆಯಲ್ಲಿ ಕಳ್ಳತನ: ತಂದೆ– ಮಗ ಬಂಧನ
Published 15 ಏಪ್ರಿಲ್ 2024, 15:52 IST
Last Updated 15 ಏಪ್ರಿಲ್ 2024, 15:52 IST
ಅಕ್ಷರ ಗಾತ್ರ

ಬೆಂಗಳೂರು: ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಮಿರ್ಜಾ ಸೈಯದ್ ಬೇಗ್ (19) ಹಾಗೂ ತಂದೆ ಮಿರ್ಜಾ ದಾದಾ ನೂರುದ್ದೀನ್ ಬೇಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಸೈಯದ್ ಬೇಗ್ ಹಾಗೂ ದಾದಾ ನೂರುದ್ದೀನ್ ಬೇಗ್ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಕಡಬಗೆರೆಯಲ್ಲಿ ವಾಸವಿದ್ದರು. ಕಳ್ಳತನ ಪ್ರಕರಣದಲ್ಲಿ ಇವರಿಬ್ಬರನ್ನು ಬಂಧಿಸಿ, 1.25 ಕೆ.ಜಿ ಚಿನ್ನಾಭರಣ, 2 ಕೆ.ಜಿ ಬೆಳ್ಳಿ ಸಾಮಗ್ರಿ ಹಾಗೂ ₹ 21.5 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಡಬಗೆರೆಯ ದೂರುದಾರ, ಬಹುಮಹಡಿ ಕಟ್ಟಡದಲ್ಲಿ ವೃದ್ಧಾಶ್ರಮ ಹಾಗೂ ಪುನವರ್ಸತಿ ಕೇಂದ್ರ ನಡೆಸುತ್ತಿದ್ದಾರೆ. ಇದೇ ಕಟ್ಟಡದ ನೆಲ ಮಹಡಿಯಲ್ಲಿ ಅವರು ವಾಸವಿದ್ದಾರೆ. ಸೈಯದ್ ಬೇಗ್, ದೂರುದಾರರ ಮನೆ ಹಾಗೂ ವೃದ್ಧಾಶ್ರಮದಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದ. ದೂರುದಾರರ ಹಣಕಾಸಿನ ವ್ಯವಹಾರದ ಬಗ್ಗೆ ಆರೋಪಿಗೆ ಮಾಹಿತಿ ಇತ್ತು’ ಎಂದರು.

‘ಆಸ್ತಿ ಖರೀದಿಸಲು ಯೋಚಿಸುತ್ತಿದ್ದ ದೂರುದಾರ, ಅದಕ್ಕಾಗಿ ಹಣ ಹೊಂದಿಸಿ ಮನೆಯಲ್ಲಿಟ್ಟಿದ್ದರು. ಇದನ್ನು ಆರೋಪಿ ಸೈಯದ್ ಬೇಗ್ ನೋಡಿದ್ದ. ಕಳ್ಳತನ ಮಾಡಲು ತಂದೆ ಜೊತೆ ಸೇರಿ ಸಂಚು ರೂಪಿಸಿದ್ದ. ಯುಗಾದಿ ಹಬ್ಬದಂದು ದೂರುದಾರ ಬೇರೆಡೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ತಂದೆ–ಮಗ, ವಜ್ರ–ಚಿನ್ನಾಭರಣ ಹಾಗೂ ನಗದು ಕದ್ದುಕೊಂಡು ಪರಾರಿಯಾಗಿದ್ದರು’ ಎಂದು ತಿಳಿಸಿದರು.

‘ಕಳ್ಳತನ ಬಗ್ಗೆ ಯಾವುದೇ ಪುರಾವೆಗಳು ಸಿಗಬಾರದೆಂದು ಆರೋಪಿಗಳು, ಮನೆಯಲ್ಲೆಲ್ಲ ಖಾರದ ಪುಡಿ ಚೆಲ್ಲಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ದೂರುದಾರ, ಪರಿಶೀಲನೆ ನಡೆಸಿದಾಗ ಕಳ್ಳತನ ನಡೆದಿದ್ದು ಗೊತ್ತಾಗಿತ್ತು. ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಹೇಳಿದರು.

‘ಸೈಯದ್ ಬೇಗ್ ತಂದೆ ದಾದಾ ನೂರುದ್ದೀನ್ ಬೇಗ್, ಆಟೊ ಚಾಲಕ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ. ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗಿತ್ತು. ಅದಕ್ಕಾಗಿ ಸಾಲ ಸಹ ಮಾಡಿದ್ದರು. ಸಾಲ ತೀರಿಸಿ ಉಳಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುವುದಕ್ಕಾಗಿ ಮಗ–ತಂದೆ ಕಳ್ಳತನ ಎಸಗಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT