ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಣಿಸಂದ್ರ: ಪಾದಚಾರಿ ಮಾರ್ಗಕ್ಕೆ ಹುಡುಕಾಟ

ಜೀವಭಯದಲ್ಲೇ ಸಂಚರಿಸಬೇಕಾದ ಸ್ಥಿತಿ l ರಸ್ತೆ ಗುಂಡಿಗಳಿಂದ ಪರದಾಡುತ್ತಿರುವ ವಾಹನ ಸವಾರರು
Last Updated 24 ಆಗಸ್ಟ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವೆಡೆ ಪಾದಚಾರಿ ಮಾರ್ಗವಿಲ್ಲ. ಇರುವ ಕಡೆ ಅಂಗಡಿ ಗಳಿಂದ ಒತ್ತುವರಿ, ಜೀವಭಯದಲ್ಲೇ ಸಂಚರಿಸುವ ಪಾದಚಾರಿಗಳಿಂದ ಮಾರ್ಗಗಳ ಹುಡುಕಾಟ... ಇದು ಥಣಿಸಂದ್ರ ಮುಖ್ಯರಸ್ತೆಯ ಸ್ಥಿತಿ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಇರುವ ಪರ್ಯಾಯ ರಸ್ತೆ ಇದಾಗಿದೆ. ಈ ರಸ್ತೆಗೆ ಇತ್ತೀಚೆಗೆ ವೈಟ್ ಟಾಪಿಂಗ್ ಕೂಡ ಮಾಡಲಾಗಿದೆ. ಆದರೆ, ಪಾದಚಾರಿ ಮಾರ್ಗಗಳು ಸುಸ್ಥಿತಿಯಲ್ಲಿ ಇಲ್ಲ. ನಾಗವಾರ ವೃತ್ತದಿಂದ ಮುಂದೆ ಸಾಗಿದರೆ ರಸ್ತೆಯ ಎರಡೂ ಬದಿಯಲ್ಲಿ ರಸ್ತೆಯಲ್ಲೇ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಾಣಿಸುತ್ತದೆ.

ಸ್ವಲ್ಪ ಮುಂದೆ ಸಾಗಿದರೆ ಎಡ ಬದಿಯಲ್ಲಿ ಹಣ್ಣು ಮತ್ತು ತರಕಾರಿ ಅಂಗಡಿಗಳು ಪಾದಚಾರಿ ಮಾರ್ಗಕ್ಕೆ ಚಾಚಿಕೊಂಡಿವೆ. ಕೆಲವು ತಳ್ಳುವ ಗಾಡಿಗಳು ಪಾದಚಾರಿ ಮಾರ್ಗವನ್ನು ದಾಟಿ ರಸ್ತೆಗೇ ಇಳಿದಿವೆ. ಥಣಿಸಂದ್ರ ವೃತ್ತದಲ್ಲಿ ನಂದಿನಿ ಪಾರ್ಲರ್‌ ಇದ್ದು, ಅದರ ಮುಂಭಾಗ ಹಾಲಿನ ಬಾಕ್ಸ್‌ಗಳಿಂದ ಇಡೀ ಪಾದಚಾರಿ ಮಾರ್ಗವನ್ನು ಮುಚ್ಚಲಾಗಿದೆ.

ರೈಲ್ವೆ ಮೇಲ್ಸೇತುವೆ ದಾಟಿ ಮುಂದೆ ಸಾಗಿದರೆ ಬಲ ಬದಿಯಲ್ಲಿ ಹೆಗಡೆನಗರ, ರೇವಾ ಕಾಲೇಜು ತನಕ ಪಾದಚಾರಿ ಮಾರ್ಗವೇ ನಿರ್ಮಾಣವಾಗಿಲ್ಲ. ಆದ್ದರಿಂದ ರಸ್ತೆ ಬದಿಯ ಜಾಗದಲ್ಲಿ ಅಂಗಡಿಗಳು ವಿಸ್ತರಿಸಿಕೊಂಡಿವೆ. ರೈಲ್ವೆಮೆನ್ ಲೇಔಟ್‌ ಬಸ್‌ ನಿಲ್ದಾಣದ ಸುತ್ತಮುತ್ತ ಪಾದಚಾರಿ ಮಾರ್ಗ ಹುಡುಕಬೇಕಾದ ಸ್ಥಿತಿ ಇದೆ.

ವೈಟ್‌ ಟಾಪಿಂಗ್ ರಸ್ತೆ ಆಗಿರುವುದರಿಂದ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಅದರಲ್ಲೂ ಬೆಳ್ಳಹಳ್ಳಿ ನೆಲಭರ್ತಿ ಘಟಕಕ್ಕೆ ಕಸ ಸಾಗಿಸುವ ಬಿಬಿಎಂಪಿ ಟಿಪ್ಪರ್‌ಗಳು ಕ್ಷಣಕ್ಕೊಂದರಂತೆ ಸಂಚರಿಸುತ್ತವೆ. ಪಾದಚಾರಿ ಮಾರ್ಗ ಇಲ್ಲದಿರುವುದರಿಂದ ರಸ್ತೆಗೆ ಇಳಿಯುವ ಜನ ಜೀವ ಭಯದಲ್ಲೇ ಹೆಜ್ಜಿ ಇಡುವಂತಾಗಿದೆ.

ಹೆಗಡೆನಗರದ ಬಳಿ ಇರುವ ಮೇಲ್ಸೇತುವೆಗೂ ಮುನ್ನ ರಸ್ತೆಯಲ್ಲೇ ದೊಡ್ಡ ಗುಂಡಿಯೊಂದು ನಿರ್ಮಾಣ ವಾಗಿದೆ. ಮೇಲ್ಸೇತುವೆಯಿಂದ ಇಳಿಜಾರಿನಲ್ಲಿ ವೇಗವಾಗಿ ಬರುವ ವಾಹನಗಳು ಈ ಗುಂಡಿಗೆ ಇಳಿದು ತೊಂದರೆಗೆ ಸಿಲುಕುತ್ತಿವೆ. ದ್ವಿಚಕ್ರ ವಾಹನಗಳ ಸವಾರರು ನಿತ್ಯ ಗುಂಡಿಯಲ್ಲಿ ಬಿದ್ದು ಎದ್ದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಮಳೆ ಬಂದರೆ ಗುಂಡಿ ಇರುವುದು ಗೊತ್ತಾಗದೆ ಹಲವರು ವಾಹನದೊಂದಿಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ವಿವರಿಸುತ್ತಾರೆ.

ತೆರವುಗೊಳಿಸಿದರೂ ಬದಲಾಗದ ಪರಿಸ್ಥಿತಿ

ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಇತ್ತೀಚೆಗೆ ಮಾಡಿದ್ದರೂ, ಪರಿಸ್ಥಿತಿ ಬದಲಾಗಿಲ್ಲ.

ಆ.20ರಂದು ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದರು. ಕೆಲವೇ ದಿನಗಳಲ್ಲಿ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದೆ. ಅಂಗಡಿಗಳು ಪಾದಚಾರಿ ಮಾರ್ಗಕ್ಕೆ ಚಾಚಿಕೊಂಡಿವೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವ್ಯಾಪಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT