ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘದಲ್ಲಿ ಅವ್ಯವಹಾರ ನಡೆದಿಲ್ಲ:ಬಹಿರಂಗ ಚರ್ಚೆಗೆ ಸಿದ್ಧ: ಬಾಲಕೃಷ್ಣ

Last Updated 31 ಅಕ್ಟೋಬರ್ 2022, 21:25 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಒಕ್ಕಲಿಗರ ಸಂಘದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಯಾವುದೇ ಪ್ರಕರಣದ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ’ ಎಂದು ಸಂಘದ ಅಧ್ಯಕ್ಷ ಸಿ.ಎನ್‌. ಬಾಲಕೃಷ್ಣ ಹೇಳಿದರು.

‍ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾವು ಅಧಿಕಾರಕ್ಕೆ ಬಂದಾಗಿನಿಂದಹೊಸ ಟೆಂಡರ್‌ ಕರೆದಿಲ್ಲ. ಹಿಂದಿನ ಕಾಮಗಾರಿಯನ್ನೇ ಮುಂದುವರಿಸಲಾಗಿದೆ’ ಎಂದು ಹೇಳಿದರು.

‘ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ 18 ಜನರು ಬರೆದಿರುವ ಪತ್ರವನ್ನು ಕಾರ್ಯದರ್ಶಿಯವರಿಗೆ ನೀಡಿದ್ದಾರೆ. ಇದರಲ್ಲಿ ಆರು ಮಂದಿಯ ಸಹಿ ಇಲ್ಲ. ಇನ್ನೊಂದಿಬ್ಬರು ನಾವು ಸಹಿಯೇ ಮಾಡಿಲ್ಲ ಎಂದು ನಮಗೆ ತಿಳಿಸಿದ್ದಾರೆ. ಹೀಗಾಗಿ ಈ ಪತ್ರದ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಪತ್ರ ಬರೆದು ಈ ಬಗ್ಗೆ ಮಾಹಿತಿ ಪಡೆಯಲಿದ್ದೇವೆ. ನಂತರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ವಿವರಿಸಿದರು.

‘10 ತಿಂಗಳ ಅವಧಿಯಲ್ಲಿ ನಮ್ಮ ಆಡಳಿತ ಮಂಡಳಿ ಸಾಕಷ್ಟು ಹಣವನ್ನು ಉಳಿಸಿದೆ. ಶ್ರೀಗಂಧದ ಕಾವಲಿನ ಹಾಸ್ಟೆಲ್‌ ನಿರ್ಮಾಣದಲ್ಲಿ ಅವ್ಯವಹಾರದ ₹36 ಲಕ್ಷವನ್ನು ತಡೆಹಿಡಿಯಲಾಗಿದೆ. ಮಾಜಿ ನಿರ್ದೇಶಕರು ಹಾಗೂ ಸಿಬ್ಬಂದಿಯಿಂದ ಸಂಘಕ್ಕೆ ಬರಬೇಕಿದ್ದ ಹಣದಲ್ಲಿ ₹50 ಲಕ್ಷ ವಸೂಲಿ ಮಾಡಲಾಗಿದ್ದು, ಬಾಕಿ ಉಳಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಶ್ರೀಗಂಧದ ಕಾವಲು ಮತ್ತು ಮಂಡ್ಯದಲ್ಲಿ ನರ್ಸಿಂಗ್‌ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದೆ. ಆಯುರ್ವೇದಿಕ್‌ ಕಾಲೇಜು ಆರಂಭವಾಗುತ್ತಿದೆ. ಸಜ್ಜೆಪಾಳ್ಯದ ಐದು ಸಾವಿರ ಕೋಟಿ ಬೆಲೆಬಾಳುವ ಜಮೀನನ್ನು ಸಂಘಕ್ಕೆ ಪಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದನ್ನು ಸಹಿಸದೆ ವೃಥಾ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಕಾಮಗಾರಿ ನಡೆಯದ ಯಾವುದೇ ಬಿಲ್‌ಗೆ ನಾವು ಪಾವತಿ ಮಾಡಿಲ್ಲ. ಈ ಬಗ್ಗೆ ಯಾರಾದರೂ ಸಾಬೀತು ಮಾಡಿ ದರೆ ಕಾರ್ಯದರ್ಶಿ ಸ್ಥಾನಕ್ಕೆ
ಮಾತ್ರವಲ್ಲ, ನಿರ್ದೇಶಕ ಸ್ಥಾನಕ್ಕೇ ರಾಜೀನಾಮೆ ನೀಡುತ್ತೇನೆ’ ಎಂದು ಪ್ರಧಾನ ಕಾರ್ಯ ದರ್ಶಿ ಟಿ. ಕೋನಪ್ಪ ರೆಡ್ಡಿ ಹೇಳಿದರು.

‘350 ಕಾಟ್‌ಗಳ ಖರೀದಿಯಲ್ಲಿ ಒಂದು ಕಾಟ್‌ಗೆ ₹1,500 ಹೆಚ್ಚು ಹಣ ಕೊಟ್ಟು ಕೋಟ್ಯಂತರ ಅವ್ಯವಹಾರ ಮಾಡಲಾಗಿದೆ ಎಂದು ದೂರಲಾಗಿದೆ. ಇದರಲ್ಲಿ ಸತ್ಯಾಂಶ ಇಲ್ಲ. ಕೋಟ್ಯಂತರ ಎಂಬುದೇ ತಪ್ಪು. ಅವರು ಹೇಳುವ ಲೆಕ್ಕದಲ್ಲಿ, ₹5.25 ಲಕ್ಷವಾಗುತ್ತದೆ. ಇಂತಹ ಅವ್ಯವಹಾರವೂ ಆಗಿಲ್ಲ. ಬದಲಿಗೆ ಸೇವಾ ಶುಲ್ಕದಲ್ಲೇ ಕೆಲವು ಸಾವಿರ ಉಳಿಸಲಾಗಿದೆ’ ಎಂದು ಖರೀದಿ ಸಮಿತಿ ಅಧ್ಯಕ್ಷ ಎಚ್‌.ಎನ್‌. ರವೀಂದ್ರ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT