ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತ್ಯೇಕ ಕೃತ್ಯ: ಮೂವರ ಕೊಲೆ

Published 24 ಜೂನ್ 2024, 14:52 IST
Last Updated 24 ಜೂನ್ 2024, 14:52 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಮೂವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಮಲ್ಲೇಶ್ವರ, ಗಂಗಮ್ಮನಗುಡಿ ಹಾಗೂ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗಮ್ಮನಗುಡಿ ಸಮೀಪದ ಮೈಮ್ಯಾಕ್ಸ್‌ ವೃತ್ತದ ಬಳಿ ಮಂಜುನಾಥ್‌ (17) ಎಂಬ ಯುವಕನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

‘ಮಂಜುನಾಥ್‌ ಅವರು ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದರು. ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಹಳೇ ದ್ವೇಷ ಅಥವಾ ಪ್ರೀತಿಯ ವಿಚಾರಕ್ಕೆ ಕೃತ್ಯ ನಡೆದಿರುವ ಸಾಧ್ಯತೆಯಿದೆ’ ಎಂದು ಪೊಲೀಸರು ಹೇಳಿದರು.

‘ಕೊಲೆಯಾದ ಮಂಜುನಾಥ್‌ಗೆ ಅಪ್ಪ–ಅಮ್ಮ ಇಲ್ಲ. ಹೀಗಾಗಿ ಅಬ್ಬಿಗೆರೆಯ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದರು. ಎಸ್‌ಎಸ್‌ಎಲ್‌ಸಿ ಅನುತ್ತೀರ್ಣಗೊಂಡಿದ್ದರು. ಕೆಲ ದಿನಗಳ ಹಿಂದೆ ಮದ್ಯ ಸೇವಿಸಿದ್ದ ಎಂಬ ಕಾರಣಕ್ಕೆ ಚಿಕ್ಕಪ್ಪ, ಮಂಜುನಾಥ್‌ ಅವರಿಗೆ ಹೊಡೆದು ಬುದ್ಧಿಮಾತು ಹೇಳಿದ್ದರು’ ಎಂದು ಗೊತ್ತಾಗಿದೆ.

‘ಭಾನುವಾರ ಮನೆಯಿಂದ ಹೊರಗಡೆ ಬಂದಿದ್ದ ಮಂಜುನಾಥ್, ವೈಮ್ಯಾಕ್ಸ್ ವೃತ್ತದ ಬಳಿ ಪ್ರದರ್ಶನಗೊಳ್ಳುತ್ತಿದ್ದ ನಾಟಕವನ್ನು ವೀಕ್ಷಿಸಲು ತೆರಳಿದ್ದರು. ನಾಟಕದ ಪ್ರದರ್ಶನ ಮುಗಿದ ಮೇಲೆ ಮನೆಗೆ ವಾಪಸ್‌ ಬರುತ್ತಿದ್ದರು. ಆಗ ಯುವಕರ ಗುಂಪಿನ ಜತೆಗೆ ವಾಗ್ವಾದ ನಡೆದಿದೆ. ಇದೇ ವಿಚಾರಕ್ಕೆ ಕೃತ್ಯ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ’.

ಭಾನುವಾರ ಬೆಳಿಗ್ಗೆ 11ರ ಸುಮಾರಿಗೆ ವೈಮ್ಯಾಕ್ ವೃತ್ತದ ಬಳಿಯ ಖಾಲಿ ಜಾಗದ ಕಸದ ರಾಶಿ ಸಮೀಪ ಯುವಕನ ಶವ ಗಮನಿಸಿದ್ದ ಪಾದಚಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹ ಪರಿಶೀಲಿಸಿದಾಗ ಮಂಜುನಾಥ್ ಎಂಬುದು ಗೊತ್ತಾಗಿದೆ.

ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೊಲೆ: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂಬ ಕಾರಣಕ್ಕೆ ಗಾರೆ ಕೆಲಸಗಾರೊಬ್ಬರನ್ನು ಕೊಲೆ ಮಾಡಲಾಗಿದೆ. ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ ಆವರಣ ಬಳಿ ಉದ್ಯಾನದಲ್ಲಿ ಈ ಕೃತ್ಯ ನಡೆದಿದೆ.

ವಲ್ಲಿಪುರದ ನಿವಾಸಿ ಪನ್ನೀರ್ ಸೆಲ್ವಂ(36) ಕೊಲೆಯಾದ ವ್ಯಕ್ತಿ.

‘ಕೃತ್ಯ ಎಸಗಿದ್ದ ಆರೋಪದ ಅಡಿ ಪ್ರೇಮ್ ಕುಮಾರ್(21) ಮತ್ತು ಮದನ್(23) ಎಂಬುವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪನ್ನೀರ್‌ ಸೆಲ್ವಂ ಅವರು ಗಾರೆ ಕೆಲಸ ಮಾಡುತ್ತಿದ್ದರು. ಅವರು ಮದ್ಯ ವ್ಯಸನಿ ಆಗಿದ್ದರು. ಪ್ರತಿನಿತ್ಯ ಸಂಜೆ ಮದ್ಯದ ಅಮಲಿನಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಭಾನುವಾರ ಬೆಳಿಗ್ಗೆ ಪನ್ನೀರ್ ಸೆಲ್ವಂ ಮದ್ಯದ ನಶೆಯಲ್ಲಿ ಪ್ರೇಮ್‌ಕುಮಾರ್ ಅವರ ತಾಯಿಗೆ ನಿಂದಿಸಿದ್ದರು ಎನ್ನಲಾಗಿದೆ. ಅದೇ ವಿಚಾರವಾಗಿ ಕೊಲೆಯಾದ ವ್ಯಕ್ತಿ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿದೆ. ಬಳಿಕ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು. ನಂತರ ಮಧ್ಯಾಹ್ನವೂ ಗಲಾಟೆ ನಡೆದು ಸೆಲ್ವಂ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪನ್ನೀರ್ ಸೆಲ್ವಂ ಅವರಿಗೆ ಆರೋಪಿಗಳು ಕರೆ ಮಾಡಿ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಇರುವ ಪಾರ್ಕ್‌ಗೆ ಬರಲು ಹೇಳಿದ್ದರು. ಅವರು ಅಲ್ಲಿಗೆ ಬಂದಾಗ ಗಲಾಟೆ ಪ್ರಸ್ತಾಪಿಸಿ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ಚಾಕುವಿನಿಂದ ಇರಿದು ಕೊಲೆ 

ಜ್ಞಾನ ಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ದೊಡ್ಡಗೊಲ್ಲರಹಟ್ಟಿಯಲ್ಲಿ ಬಾಡಿಗೆ ಪಾವತಿ ಹಾಗೂ ಕೌಟುಂಬಿಕ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ.

ಪೇಯಿಂಟಿಂಗ್‌ ಕೆಲಸ ಮಾಡುತ್ತಿದ್ದ ಆನಂದ್‌ (37) ಕೊಲೆಯಾದ ವ್ಯಕ್ತಿ.‌

‘ಆನಂದ್ ಅವರು ಪುಟ್ಟಸ್ವಾಮಿ ಅವರ ಮನೆಯಲ್ಲಿದ್ದರು. ಇವರೇ ಆನಂದ್ ಅವರನ್ನು ನೋಡಿಕೊಳ್ಳುತ್ತಿದ್ದರು. ಪುಟ್ಟಸ್ವಾಮಿ ಅವರಿಗೆ ಮದ್ಯ ಸೇವನೆ ಅಭ್ಯಾಸವಿತ್ತು. ಮನೆ ಬಾಡಿಗೆ ಪಾವತಿಸುವ ವಿಚಾರಕ್ಕೆ ಇಬ್ಬರ ನಡುವೆ ನಿತ್ಯ ಗಲಾಟೆ ಆಗುತ್ತಿತ್ತು. ಭಾನುವಾರ ರಾತ್ರಿ ಜಗಳ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ಎಡಭಾಗದ ಎದೆಯ ಕೆಳಭಾಗಕ್ಕೆ ಚುಚ್ಚಿ ಕೊಲೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT